6ನೆ ವೇತನ ಆಯೋಗ ಜಾರಿಗೆ ಆಗ್ರಹ: ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದ ಸಾರಿಗೆ ನೌಕರರು
ಬೆಂಗಳೂರು, ಮಾ.18: 6ನೆ ವೇತನ ಆಯೋಗ ಜಾರಿಗೊಳಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿಯವರೆಗೆ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಗುರುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘದ ನೇತೃತ್ವದಲ್ಲಿ ಜಮಾಯಿಸಿದ ಸಾರಿಗೆ ನೌಕರರು, ರಾಜ್ಯ ಸರಕಾರ ಈ ಕೂಡಲೇ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಘೋಷಣೆ ಕೂಗಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಕೆ.ರಾಮಕೃಷ್ಣ ಪೂಂಜಾ, ಈ ಹಿಂದೆ ಮುಷ್ಕರ ನಡೆಸಿದ್ದ ವೇಳೆ ನೌಕರರು ಮುಂದಿಟ್ಟಿದ್ದ ಹಲವು ಬೇಡಿಕೆಗಳನ್ನು ಈಡೇರಿಸುವುದಾಗಿ ಸರಕಾರ ಭರವಸೆ ನೀಡಿತ್ತು. ಅವುಗಳ ಜತೆಗೆ ಇನ್ನುಳಿದ ಬೇಡಿಕೆಗಳನ್ನೂ ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸಲಾಗುತ್ತಿದೆ. ಪ್ರಸ್ತುತ ಬಜೆಟ್‍ನಲ್ಲಿ ಬಹಳ ನಿರೀಕ್ಷೆ ಇತ್ತು. ಆದರೆ ಅದು ನಿರಾಸೆಯನ್ನು ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
6ನೆ ವೇತನ ಆಯೋಗ ಜಾರಿಗೊಳಿಸಬೇಕು. ಹಿರಿಯ ಅಧಿಕಾರಿಗಳ ಕಿರುಕುಳ ತಪ್ಪಿಸಬೇಕು. ಅದೇ ರೀತಿ, ಮಹಿಳಾ ಸಿಬ್ಬಂದಿಗಳಿಗೆ ಬಸ್ ನಿಲ್ದಾಣದಲ್ಲಿ ಸರಿಯಾದ ಶೌಚಾಲಯ ನಿರ್ಮಾಣ, ಸಾರಿಗೆ ಸಂಸ್ಥೆಗೆ ಸರಕಾರ ನೀಡಬೇಕಾದ ಬಾಕಿ ಮೊತ್ತವನ್ನು ಬಿಡುಗಡೆ ಮಾಡಬೇಕು. ನಗದು ರಹಿತ ವೈದ್ಯಕೀಯ ಸೌಲಭ್ಯ, ನಿವೃತ್ತ ಸಾರಿಗೆ ನೌಕರರ ಬಾಕಿ ಹಣವನ್ನು ಕೂಡಲೇ ಪಾವತಿಸಬೇಕು ಸೇರಿದಂತೆ 9 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಧರಣಿಯಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳ ನೌಕರರು ಭಾಗಿಯಾಗಿದ್ದರು.