ಕಬ್ಬಿಣ ನಮ್ಮ ಶರೀರಕ್ಕೆ ಅಗತ್ಯ ನಿಜ, ಆದರೆ ಅತಿಯಾದರೆ ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ

Update: 2021-03-19 19:09 GMT

ಕಬ್ಬಿಣ ನಮ್ಮ ಶರೀರಕ್ಕೆ ಅತ್ಯಗತ್ಯ ಖನಿಜವಾಗಿದೆ. ಆದರೆ ಅದು ಅತಿಯಾದರೆ ನಮ್ಮ ಅಂಗಾಂಗಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಶರೀರದಲ್ಲಿ ಕಬ್ಬಿಣ ಅಧಿಕ ಪ್ರಮಾಣದಲ್ಲಿ ಸಂಗ್ರಹವಾದರೆ ಆ ಸ್ಥಿತಿಯನ್ನು ಹಿಮೊಕ್ರೊಮಾಟೋಸಿಸ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಮ್ಮ ಕರುಳುಗಳು ನಾವು ಸೇವಿಸಿರುವ ಆಹಾರದಿಂದ ಸರಿಯಾದ ಪ್ರಮಾಣದಲ್ಲಿ ಕಬ್ಬಿಣವನ್ನು ಹೀರಿಕೊಳ್ಳುತ್ತವೆ. ಹಿಮೊಕ್ರೊಮಾಟೋಸಿಸ್ ಸ್ಥಿತಿಯಲ್ಲಿ ನಮ್ಮ ಶರೀರವು ಅತಿಯಾದ ಕಬ್ಬಿಣವನ್ನು ಹೀರಿಕೊಳ್ಳುತ್ತದೆ ಮತ್ತು ಅದನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಕೀಲುಗಳಲ್ಲಿ ಹಾಗೂ ಯಕೃತ್ತು,ಹೃದಯ ಮತ್ತು ಮೇದೋಜ್ಜೀರಕ ಗ್ರಂಥಿಗಳಂತಹ ಅಂಗಾಂಗಗಳಲ್ಲಿ ಕಬ್ಬಿಣವು ಸಂಗ್ರಹಗೊಳ್ಳುತ್ತದೆ ಮತ್ತು ಇದರಿಂದಾಗಿ ಅವುಗಳಿಗೆ ಹಾನಿಯುಂಟಾಗುತ್ತದೆ. ಹಿಮೊಕ್ರೊಮಾಟೋಸಿಸ್‌ಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಅದು ಈ ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಬಹುದು.

ಹಿಮೊಕ್ರೊಮಾಟೋಸಿಸ್‌ನಲ್ಲಿ ಪ್ರೈಮರಿ ಮತ್ತು ಸೆಕೆಂಡರಿ ಎಂಬ ಎರಡು ವಿಧಗಳಿವೆ.

ಪ್ರೈಮರಿ ಹಿಮೊಕ್ರೊಮಾಟೋಸಿಸ್ ಆನುವಂಶಿಕವಾಗಿ ಉಂಟಾಗುತ್ತದೆ. ತಂದೆಯಿಂದ ಒಂದು ಮತ್ತು ತಾಯಿಯಿಂದ ಒಂದು,ಹೀಗೆ ಹಿಮೊಕ್ರೊಮಾಟೋಸಿಸ್‌ಗೆ ಕಾರಣವಾಗುವ ಎರಡು ವಂಶವಾಹಿಗಳನ್ನು ವ್ಯಕ್ತಿಯು ಪಡೆದಿದ್ದರೆ ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸೆಕೆಂಡರಿ ಹಿಮೊಕ್ರೊಮಾಟೋಸಿಸ್ ಇತರ ಕಾರಣಗಳಿಂದ ಉಂಟಾಗುತ್ತದೆ. ಅನಿಮೀಯಾ ಅಥವಾ ರಕ್ತಹೀನತೆಯ ಕೆಲವು ವಿಧಗಳು, ಯಕೃತ್ತಿನ ಕಾಯಿಲೆ,ಹಲವು ಸಲ ರಕ್ತ ಮರುಪೂರಣ ಇವು ಇಂತಹ ಕಾರಣಗಳಲ್ಲಿ ಸೇರಿವೆ.

ಲಕ್ಷಣಗಳು: ಈ ರೋಗದಿಂದ ಬಳಲುತ್ತಿರುವ ಸುಮಾರು ಶೇ.50ರಷ್ಟು ಜನರಲ್ಲಿ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಪುರುಷರಲ್ಲಿ 30ರಿಂದ 50 ವರ್ಷ ವಯೋಮಾನದ ನಡುವೆ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಮಹಿಳೆಯರಲ್ಲಿ 50 ವರ್ಷ ಪ್ರಾಯದ ನಂತರ ಅಥವಾ ಋತುಬಂಧದ ನಂತರದ ಅವಧಿಯಲ್ಲಿ ಹಿಮೊಕ್ರೊಮಾಟೋಸಿಸ್‌ನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಮುಟ್ಟಾಗುವ ಪ್ರಾಯದಲ್ಲಿ ರಜಸ್ವಲೆಯಾದಾಗ ಮತ್ತು ಹೆರಿಗೆ ಸಂದರ್ಭದಲ್ಲಿ ಅವರಲ್ಲಿ ಕಬ್ಬಿಣ ನಷ್ಟವಾಗುತ್ತಿರುವುದು ಇದಕ್ಕೆ ಕಾರಣವಾಗಿರಬಹುದು.

ಕೀಲುಗಳಲ್ಲಿ,ವಿಶೇಷವಾಗಿ ಗೆಣ್ಣುಗಳಲ್ಲಿ ನೋವು,ದಣಿವು,ಕಾರಣವಿಲ್ಲದೆ ತೂಕ ನಷ್ಟ,ಚರ್ಮ ಕಂಚು ಅಥವಾ ಬೂದು ಬಣ್ಣಕ್ಕೆ ತಿರುಗುವುದು,ಹೊಟ್ಟೆಯಲ್ಲಿ ನೋವು,ಲೈಂಗಿಕ ನಿರಾಸಕ್ತಿ,ಶರೀರದ ಕೂದಲುಗಳ ಉದುರುವಿಕೆ,ಹೃದಯ ಡವಗುಡುವಿಕೆ,ನೆನಪು ಮಸುಕಾಗುವುದು ಇವು ಹಿಮೊಕ್ರೊಮಾಟೋಸಿಸ್‌ನ ಲಕ್ಷಣಗಳಲ್ಲಿ ಸೇರಿವೆ.

ಕೆಲವೊಮ್ಮೆ ಇತರ ಸಮಸ್ಯೆಗಳು ಆರಂಭವಾಗುವವರೆಗೆ ಜನರಲ್ಲಿ ಹಿಮೊಕ್ರೊಮಾಟೋಸಿಸ್‌ನ ಯಾವುದೇ ಲಕ್ಷಣಗಳು ಕಂಡು ಬರುವುದಿಲ್ಲ. ಯಕೃತ್ತಿನ ಸಮಸ್ಯೆಗಳು,ಮಧುಮೇಹ,ಅಸಹಜ ಹೃದಯ ಬಡಿತ,ನಿಮಿರುವಿಕೆ ದೌರ್ಬಲ್ಯ ಇವು ಇಂತಹ ಸಮಸ್ಯೆಗಳಲ್ಲಿ ಸೇರಿವೆ.

ವ್ಯಕ್ತಿಯು ಬಹಳಷ್ಟು ವಿಟಾಮಿನ್ ಸಿ ತೆಗೆದುಕೊಳ್ಳುತ್ತಿದ್ದರೆ ಅಥವಾ ಈ ವಿಟಾಮಿನ್ ಸಮೃದ್ಧವಾಗಿರುವ ಆಹಾರಗಳನ್ನು ಅತಿಯಾಗಿ ಸೇವಿಸುತ್ತಿದ್ದರೆ ಹಿಮೊಕ್ರೊಮಾಟೋಸಿಸ್ ಸ್ಥಿತಿಯು ಇನ್ನಷ್ಟು ಹದಗೆಡುತ್ತದೆ. ವಿಟಾಮಿನ್ ಸಿ ಆಹಾರದಿಂದ ಕಬ್ಬಿಣವನ್ನು ಹೀರಿಕೊಳ್ಳಲು ಶರೀರಕ್ಕೆ ನೆರವಾಗುವುದು ಇದಕ್ಕೆ ಕಾರಣವಾಗಿದೆ.

ಹಿಮೊಕ್ರೊಮಾಟೋಸಿಸ್‌ನ ಶಂಕಿತ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಬೇಕು. ರೋಗ ನಿರ್ಧಾರಕ್ಕಾಗಿ ಅವರು ಹಲವಾರು ಪರೀಕ್ಷೆಗಳನ್ನು ಕೈಗೊಳ್ಳುತ್ತಾರೆ ಮತ್ತು ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಾರೆ.

*ಡಾ.ಮಿನೇಶ ಖತ್ರಿ, ಎಂಡಿ

ಕೃಪೆ:webmd.com

Writer - ಡಾ.ಮಿನೇಶ ಖತ್ರಿ, ಎಂಡಿ

contributor

Editor - ಡಾ.ಮಿನೇಶ ಖತ್ರಿ, ಎಂಡಿ

contributor

Similar News