×
Ad

ಸಂವಿಧಾನವೇ ನಮ್ಮ ರಕ್ಷಾಕವಚ ಹೊರತು ಖಾಕಿ ಚಡ್ಡಿಯಲ್ಲ: ನಿವೃತ್ತ ನ್ಯಾ.ನಾಗಮೋಹನ್‍ದಾಸ್

Update: 2021-03-20 18:46 IST

ಬೆಂಗಳೂರು, ಮಾ.20: ನಮ್ಮ ಪ್ರಗತಿ ಮತ್ತು ರಕ್ಷಣೆಗೆ ಬೇಕಾಗಿರುವ ಮುಖ್ಯ ಅಸ್ತ್ರ ಸಂವಿಧಾನವೇ ಆಗಿದೆ ಹೊರತು ಖಾಕಿ ಚಡ್ಡಿಯಲ್ಲ ಎಂದು ಪರೋಕ್ಷವಾಗಿ ಸಂಘಪರಿವಾರವನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್‍ದಾಸ್ ಟೀಕಿಸಿದರು.

ಶನಿವಾರ ನಗರದ ಕೆಎಎಸ್ ಅಧಿಕಾರಿಗಳ ಸಭಾಂಗಣದಲ್ಲಿ ಫೋರಮ್ ಫಾರ್ ಡೆಮಾಕ್ರಸಿ ಮತ್ತು ಕಮ್ಯುನಲ್ ಅಮಿಟಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ, ‘ದೇಶವು ಎದುರಿಸುತ್ತಿರುವ ಪ್ರಸಕ್ತ ಸಮಸ್ಯೆಗಳು' ಕುರಿತು ವಿಚಾರ ಸಂಕಿರಣವನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶದ ಆಡಳಿತ ವ್ಯವಸ್ಥೆ ನಡೆಯುತ್ತಿರುವುದೇ ಸಂವಿಧಾನದ ಕಾನೂನುಗಳಿಂದ. ಇಡೀ ದೇಶದ ಎಲ್ಲ ಸಮುದಾಯದ ಜನರಿಗೂ ಸಂವಿಧಾನವೇ ಧರ್ಮಗ್ರಂಥ. ಅದು ಮಾತ್ರವಲ್ಲದೆ, ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆ ಸಂವಿಧಾನದ ಅಡಿಪಾಯದ ಮೇಲೆ ನಿಂತಿದೆ. ಹಾಗಾಗಿ, ಇದೇ ನಮ್ಮ ರಕ್ಷಾ ಕವಚ ಆಗಿದೆ ಹೊರತು ಯಾವುದೇ ಖಾಕಿ ಚಡಿಯಲ್ಲ ಎಂದು ಹೇಳಿದರು.

ರಾಜಕೀಯ ಪಕ್ಷಗಳು, ಸರಕಾರಗಳು, ದೇಶದ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಷಯಗಳ ಮೇಲೆ ಚುನಾವಣೆ ಎದುರಿಸಬೇಕು. ಆದರೆ, ಇತ್ತೀಚಿಗೆ ಜಾತಿ ಮತ್ತು ಧರ್ಮ ಆಧಾರಿತ ವಿಷಯಗಳ ಮೇಲೆ ಚುನಾವಣೆ ನಡೆಸಲಾಗುತ್ತಿದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಆತಂಕಕ್ಕೆ ಸಿಲುಕುವಂತೆ ಆಗಿದೆ ಎಂದು ನುಡಿದರು.

ಇನ್ನು, ಎಲ್ಲಿಯವರೆಗೆ ಜಾತಿ ಆಧಾರಿತ ಅಸಮಾನತೆ, ದೌರ್ಜನ್ಯ, ದಬ್ಬಾಳಿಕೆ, ಬೌದ್ಧಿಕ ದಿವಾಳಿತನ ಇರುವುದೋ, ಅಲ್ಲಿಯವರೆಗೆ ಸಮಾನತೆಗಾಗಿ ಹಂಬಲ, ವಿಮೋಚನೆಗಾಗಿ ಹೋರಾಟ, ಜ್ಞಾನ ಮತ್ತು ಶಾಂತಿಗಾಗಿ ಹುಡುಕಾಟ ಇದ್ದೇ ಇರುತ್ತದೆ ಎಂದು ನಾಗಮೋಹನ್‍ದಾಸ್ ಹೇಳಿದರು.

ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಮಾತನಾಡಿ, ರಾಜ್ಯ ಸರಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆ ಅವೈಜ್ಞಾನಿಕ ಮಾತ್ರವಲ್ಲ, ಸಂಪೂರ್ಣ ರೈತ ವಿರೋಧಿಯಾಗಿದೆ. ಅಲ್ಲದೆ, ಜಾನುವಾರುಗಳ ಬಗ್ಗೆ ಸರಕಾರ ಪ್ರಾಮಾಣಿಕವಾದ ಕಾಳಜಿ ಹೊಂದಿದ್ದರೆ ಜಾನುವಾರು ಸಂಬಂಧಿ ಆರ್ಥಿಕ ಮತ್ತು ಸಾಮಾಜಿಕ ಅಧ್ಯಯನವನ್ನು ತಜ್ಞರಿಂದ ನಡೆಸಿ, ಅದರ ವರದಿ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ನಂತರ ಗೋಹತ್ಯೆ ಕಾನೂನು ರೂಪಿಸಲು ಮುಂದಾಗಬೇಕಿತ್ತು ಎಂದು ಸಲಹೆ ನೀಡಿದರು.

ವಿಚಾರ ಸಂಕಿರಣದಲ್ಲಿ ಅಜೀಮ್ ಪ್ರೇಮ್‍ಜಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎ.ನಾರಾಯಣ, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು, ಆರೋಗ್ಯ ತಜ್ಞ ಡಾ.ತಾಹಾ ಮತೀನ್, ಅಮಿಟಿ ಕಾರ್ಯದರ್ಶಿ ಎಂ.ಎಫ್.ಪಾಷ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

‘ದೇಶದ್ರೋಹ ಕಾನೂನು ಪುಸ್ತಕದಿಂದ ತೆಗೆಯಿರಿ’

ದೇಶದ್ರೋಹ, ಮಾನಹಾನಿ ಹಾಗೂ ನ್ಯಾಯಾಂಗ ನಿಂದನೆ ಕಾಯ್ದೆಗಳನ್ನು ಕಾನೂನಿನ ಪುಸ್ತಕದಿಂದಲೇ ತೆಗೆದುಹಾಕಬೇಕು. ಇವೆಲ್ಲಾ ವಸಾಹತುಶಾಹಿ ಕಾಯ್ದೆಗಳಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿವೆ ಎಂದು ನಾಗಮೋಹನ್‍ದಾಸ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News