ರಾಜ್ಯದಲ್ಲಿ ಅರಣ್ಯ ಮತ್ತಷ್ಟು ವಿಸ್ತರಿಸುವ ಮೂಲಕ ವನ್ಯಜೀವಿ ಸಂರಕ್ಷಣೆಗೆ ಆದ್ಯತೆ: ಯಡಿಯೂರಪ್ಪ

Update: 2021-03-21 13:24 GMT

ಬೆಂಗಳೂರು, ಮಾ. 21: ರಾಜ್ಯದಲ್ಲಿ ಅರಣ್ಯವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎರಡು ಅರಣ್ಯ ಪ್ರದೇಶಗಳ ನಡುವೆ ಆನೆ ಕಾರಿಡಾರ್ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ರವಿವಾರ ಇಶಾ ಫೌಂಡೇಶನ್ ವತಿಯಿಂದ ನಗರದ ಆರಮನೆ ಮೈದಾನದಲ್ಲಿ ಆಯೋಜಿಸಿದ್ದ ಕಾವೇರಿ ಕೂಗು ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಸ್ಯ ಸಂಪತ್ತಿನ ರಕ್ಷಣೆ ಅರಣ್ಯ ಉಳಿಸುವ ನಿಟ್ಟಿನಲ್ಲಿ ಮಹತ್ವದ್ದಾಗಿದೆ. ರಾಜ್ಯದ ಎರಡು ಅರಣ್ಯ ಪ್ರದೇಶದ ನಡುವೆ ಕಾರಿಡಾರ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಅರಣ್ಯ ಸ್ಯಾಟಲೈಟ್ ನಕ್ಷೆ ತಯಾರಿಸಿ, ವೈಜ್ಞಾನಿಕ ಪದ್ಧತಿ ಅಳವಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಸಂಸ್ಕೃತಿ, ಪರಂಪರೆ ರಕ್ಷಣೆಗೆ 2,900 ಕೋಟಿ ರೂ. ಮೀಸಲಿಡಲಾಗಿದೆ. 9 ಜಿಲ್ಲೆಗಳಲ್ಲಿ ರೈತರಿಗೆ ಬೀಜಗಳನ್ನು ನೀಡಲಾಗುತ್ತದೆ. ಹಣ್ಣು ಬಿಡುವ ಮರಗಳನ್ನು ಹೆಚ್ಚು ಬೆಳೆಸಲಾಗುತ್ತದೆ. ಉತ್ತರ ಕನ್ನಡದಲ್ಲಿ ಶೀಘ್ರವೇ ಅಪ್ಸರಕೊಂಡ ಆಭಯಾರಣ್ಯ ಉದ್ಘಾಟನೆ ಮಾಡಲಾಗುತ್ತದೆ. ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಅರಣ್ಯ ಮತ್ತು ರೈತರ ಭೂ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ನಗರಗಳಲ್ಲಿ ಪಾರ್ಕ್ ಗಳು ಇರಲೇಬೇಕು. ಪಾರ್ಕ್ ಗಳು ನಗರ ಅರಣ್ಯದ ಒಂದು ಭಾಗ. ಕಬ್ಬನ್ ಪಾರ್ಕ್‍ನಲ್ಲಿ ವಾಕ್ ಮಾಡುತ್ತಿದ್ದರೆ ನಗರದಲ್ಲಿ ಅರಣ್ಯಗಳು ಎಷ್ಟು ಮುಖ್ಯ ಅಂತ ಅನ್ನಿಸುತ್ತದೆ. ದೇಶದ 200 ನಗರಗಳಲ್ಲಿ ನಗರ ಅರಣ್ಯೀಕರಣದ ಪ್ರಕ್ರಿಯೆ ಆರಂಭವಾಗಿದೆ. ದೇಶದಲ್ಲೇ ಕರ್ನಾಟಕ ಸಮೃದ್ಧವಾದ ಅರಣ್ಯ ಪ್ರದೇಶ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಗುರು ಜಗ್ಗಿ ವಾಸುದೇವ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ನಾವು ನದಿಗಳ ಬಗ್ಗೆ ಕಳೆದ 2-3 ವರ್ಷದಲ್ಲಿ ಮಾತಾಡಿದಷ್ಟು, ಹಿಂದೆ ಎಂದೂ ಮಾತನಾಡಿರಲಿಲ್ಲ. ಅರಣ್ಯದಲ್ಲಿ ಹುಲಿಗಳು, ಆನೆಗಳ ಸಂಖ್ಯೆ ಹೆಚ್ಚಾಗಿದೆ. ದೊಡ್ಡ ದೊಡ್ಡ ಪ್ರಾಣಿಗಳ ಜೊತೆ ಚಿಕ್ಕಪುಟ್ಟ ವನ್ಯಜೀವಿಗಳ ಸಂಕುಲವೂ ಹೆಚ್ಚಾಗಬೇಕಾಗಿದೆ. ಪ್ರಾಣಿಗಳ ಸಂಖ್ಯೆ ಹೆಚ್ಚಾದಂತೆ ಅವುಗಳು ನಾಡಿಗೆ ಬರುವುದು ಸಾಮಾನ್ಯ. ಹೀಗಾಗಿ ಅರಣ್ಯ ಹಾಗೂ ವನ್ಯಜೀವಿಗಳು ಉಳಿಯಬೇಕಾದರೆ ಮೊದಲು ಜನಸಂಖ್ಯೆ ಕಡಿಮೆ ಆಗಬೇಕಾಗಿದೆ ಎಂದು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News