ಅಮೆರಿಕದವರು ನಮ್ಮನ್ನು 200 ವರ್ಷ ಆಳ್ವಿಕೆ ಮಾಡಿದ್ದರು ಎಂದ ಉತ್ತರಾಖಂಡ ನೂತನ ಸಿಎಂ!

Update: 2021-03-21 16:51 GMT

ಹೊಸದಿಲ್ಲಿ: ಮಹಿಳೆಯರು ಹರಿದ ಜೀನ್ಸ್‌ ಪ್ಯಾಂಟ್‌ ಗಳನ್ನು ಹಾಕಿ ಮೊಣಕಾಲು ತೋರಿಸಿ ಅದೇನು ಸಂದೇಶ ನೀಡುತ್ತಾರೋ? ಇದು ನಮ್ಮ ಸಂಪ್ರದಾಯವಲ್ಲ ಎಂಬ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದ ಉತ್ತರಾಖಂಡದ ನೂತನ ಮುಖ್ಯಮಂತ್ರಿ ಥಿರತ್‌ ಸಿಂಗ್‌ ರಾವತ್‌ ಇದೀಗ ಮೂರ್ಖತನದ ಹೇಳಿಕೆಯೊಂದನ್ನು ನೀಡಿ ನಗೆಪಾಟಲಿಗೀಡಾಗಿದ್ದಾರೆ. ಅಮೆರಿಕಾದವರು ನಮ್ಮನ್ನು 200 ವರ್ಷಗಳ ಕಾಲ ಆಳ್ವಿಕೆ ಮಾಡಿದ್ದರು ಎಂಬ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ನಮ್ಮ ಪ್ರಧಾನಿ ನರೇಂದ್ರ ಮೋದಿ ಕೋವಿಡ್‌ ನಿಂದ ನಮ್ಮನ್ನೆಲ್ಲಾ ರಕ್ಷಿಸಲು ಪ್ರಯತ್ನಿಸಿದರು. ಜನರು ಅವರು ಹೇಳಿದಂತೆ ಕೇಳಿದ ಕಾರಣ ಕೋವಿಡ್‌ ನಿಯಂತ್ರಣಕ್ಕೆ ಬಂತು. ನರೇಂದ್ರ ಮೋದಿಯಲ್ಲದೇ ಬೇರೆ ಯಾರಾದರೂ ಭಾರತದಲ್ಲಿ ಆಡಳಿತ ನಡೆಸುತ್ತಿದ್ದರೆ ಪರಿಸ್ಥಿತಿ ಹೇಗಿರಬಹುದಿತ್ತೆಂದು ಊಹಿಸಲೂ ಸಾಧ್ಯವಿಲ್ಲ."

"ಭಾರತದಲ್ಲಿನ ೧೩೦-೧೩೫ ಕೋಟಿ ಜನಸಂಖ್ಯೆಯ ನಡುವೆಯೂ ಇಲ್ಲಿನ ಜನರು ಬೇರೆ ಎಲ್ಲಾ ದೇಶದಲ್ಲಿನ ಜನರಿಗಿಂತ ಹೆಚ್ಚು ಸುರಕ್ಷಿತರಾಗಿದ್ದಾರೆ. ನೀವು ಅಮೆರಿಕಾದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಅಮೆರಿಕಾವು ನಮ್ಮನ್ನು 200 ವರ್ಷಕ್ಕಿಂತ ಹೆಚ್ಚು ಆಳ್ವಿಕೆ ನಡೆಸಿತ್ತು. ಆ ಸಾಮ್ರಾಜ್ಯದಲ್ಲಿ ಸೂರ್ಯ ಮುಳುಗುತ್ತಲೇ ಇರಲಿಲ್ಲ. ಆದರೆ ಇವತ್ತು ಆ ದೇಶವೂ ಕಷ್ಟಪಡುತ್ತಿದೆ. ಮರಣ ಸಂಖ್ಯೆಯು ಮೂರು ಲಕ್ಷ ದಾಟಿದೆ" ಎಂದು ಹೇಳಿಕೆ ನೀಡಿದ್ದಾರೆ.

ಅವರು ಮಾತನಾಡುತ್ತಿರುವ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದ್ದು, ಬಳಕೆದಾರರು ಮುಖ್ಯಮಂತ್ರಿಯ ಹೇಳಿಕೆಯ ಕುರಿತು ವ್ಯಂಗ್ಯವಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News