ಅಶೋಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಪತ್ರ ಬರೆದ ಪ್ರತಾಪ್ ಭಾನು ಮೆಹ್ತಾ

Update: 2021-03-22 16:57 GMT
ಪ್ರತಾಪ್ ಭಾನು ಮೆಹ್ತಾ (Photo: cprindia.org)

ರಾಜಕೀಯ ವಿಶ್ಲೇಷಕ, ಅಂಕಣಕಾರ ಹಾಗೂ ಮೋದಿ ಸರಕಾರದ ಕಟು ಟೀಕಾಕಾರರಾಗಿರುವ ಪ್ರತಾಪ್ ಭಾನು ಮೆಹ್ತಾ ಮತ್ತು ಆರ್ಥಿಕ ತಜ್ಞ ಅರವಿಂದ ಸುಬ್ರಮಣಿಯನ್ ಅವರು ಕಳೆದ ವಾರ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಹರ್ಯಾಣದ ಸೋನೆಪತ್ನ ಅಶೋಕ ವಿವಿಯ ಪ್ರಾಧ್ಯಾಪಕ ಹುದ್ದೆಗಳಿಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಇದನ್ನು ವಿರೋಧಿಸಿ ವಿವಿಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇದೀಗ ಮೆಹ್ತಾ ತನ್ನ ವಿದ್ಯಾರ್ಥಿಗಳನ್ನುದ್ದೇಶಿಸಿ ಪತ್ರವೊಂದನ್ನು ಬರೆದಿದ್ದು ಅದರ ಪೂರ್ಣಪಾಠ ಇಲ್ಲಿದೆ.......

ನನ್ನ ಪ್ರೀತಿಯ ಸೂಪರ್ ಹೀರೋಗಳೇ,

ಇದು ನಾನು ಈವರೆಗೆ ಬರೆದಿರುವ ಪತ್ರಗಳಲ್ಲಿ ಅತ್ಯಂತ ಕಷ್ಟಕರ ಪತ್ರವಾಗಿದೆ. ನಾನು ಈ ಪತ್ರವನ್ನು ಮೊದಲೇ ಬರೆಯಲು ಬಯಸಿದ್ದೆ. ಆದರೆ ನಾನು ಮತ್ತು ಪ್ರೊ.ಸುಬ್ರಮಣಿಯನ್ ಈಗಲೂ ನಮ್ಮ ರಾಜೀನಾಮೆಗಳಿಗೆ ಕಾರಣವಾಗಿದ್ದ ಘಟನಾವಳಿಗಳನ್ನು ವಿಶ್ಲೇಷಿಸುತ್ತಿದ್ದೇವೆ. ಕಳೆದೊಂದು ವಾರದಲ್ಲಿ ನೀವು ತೋರಿಸಿರುವ ಪ್ರೀತಿ ಮತ್ತು ಬೆಂಬಲದಿಂದಾಗಿ ನನ್ನ ಹೃದಯ ತುಂಬಿಬಂದಿದೆ. ನೀವು ನನ್ನೊಡನೆ ವ್ಯಕ್ತಪಡಿಸಿರುವ ಏಕತೆಯನ್ನು ಬಣ್ಣಿಸಲು ನನಗೆ ಶಬ್ದಗಳೇ ಸಿಗುತ್ತಿಲ್ಲ. ಈ ವಾರವನ್ನು ನಾನು ಸ್ಮರಿಸಿಕೊಂಡಗಲೆಲ್ಲ ನಿಮ್ಮ ಈ ಪ್ರೀತಿ ನನ್ನನ್ನು ಭಾವಪರವಶಗೊಳಿಸಲಿದೆ.
  
ಈ ಪತ್ರವನ್ನು ಬರೆಯುವುದು ನನಗೆ ಕಷ್ಟಕರವಾಗಿರುವುದಕ್ಕೆ ಆಳವಾದ ಕಾರಣವಿದೆ. ನಿಮ್ಮ ಬಲವಾದ ನೈತಿಕ ಸ್ಪಷ್ಟತೆ ಮತ್ತು ಆಳವಾದ ರಾಜಕೀಯ ವಿವೇಚನೆಯ ಮುಂದೆ ಅಶೋಕ ವಿವಿಯು ಆರೋಪಿ ಸ್ಥಾನದಲ್ಲಿ ನಿಂತಿದೆ. ನಿಮ್ಮ ಪ್ರತಿಭಟನೆಗಳು ನಾವು...ನಿಮ್ಮ ಹಿರಿಯರು ತಿಳಿದುಕೊಳ್ಳಲು ವಿಫಲವಾಗಿದ್ದನ್ನು ತಕ್ಷಣ ಗ್ರಹಿಸಿವೆ. ನಿಮ್ಮ ಪ್ರತಿಭಟನೆಗಳು ಇಬ್ಬರು ವ್ಯಕ್ತಿಗಳ ಕುರಿತಾಗಿರಲಿಲ್ಲ,ಅದು ಅಶೋಕ ವಿವಿಯ ಸಾಂಸ್ಥಿಕ ಸಮಗ್ರತೆಯ ಕುರಿತಾಗಿತ್ತು. ಆದರೆ ಅದು ಭಾರತೀಯ ಪ್ರಜಾಪ್ರಭುತ್ವವನ್ನು ಮಬ್ಬಾಗಿಸಿರುವ ಕರಾಳ ಮತ್ತು ಅನಿಷ್ಠಕರ ಛಾಯೆಗಳ ಕುರಿತೂ ಆಗಿದೆ. ಅಶೋಕ ವಿವಿಯ ಬಗ್ಗೆ ನಾವು ಕಳವಳಗೊಂಡಿರುವಾಗ ಭಾರತದ ಇತರೆಡೆಗಳಲ್ಲಿಯ ವಿವಿಗಳಲ್ಲಿಯ ನಮ್ಮ ಶೈಕ್ಷಣಿಕ ಸಹೋದ್ಯೋಗಿಗಳು ಎದುರಿಸುತ್ತಿರುವ ಸವಾಲುಗಳಿಗೆ ಹೋಲಿಸಿದರೆ ನಾವು ಎದುರಿಸುತ್ತಿರುವ ಸವಾಲುಗಳು ಪೇಲವವಾಗಿವೆ ಎನ್ನುವುದನ್ನು ನೀವು ನಮಗೆ ನೆನಪಿಸಿದ್ದೀರಿ. ನೀವು ಚುಕ್ಕಿಗಳನ್ನು ಸೇರಿಸಿದ್ದೀರಿ. ನಿಮ್ಮ ಪ್ರತಿಭಟನೆಗಳು ಅಶೋಕ ವಿವಿಯನ್ನು ಕೇಂದ್ರೀಕರಿಸಿದ್ದವು,ಆದರೆ ಅದು ಅಶೋಕಕ್ಕಿಂತ ಮಿಗಿಲಾದ ವೌಲ್ಯಗಳ ಕುರಿತಾಗಿತ್ತು. 

ನಿಮ್ಮಲ್ಲಿ ಹೆಚ್ಚಿನವರಿಗೆ ಗೊತ್ತಿರುವಂತೆ ‘ಬಂಡಾಯವೇಳುವ ಹಕ್ಕು ಉನ್ನತ ಆಳ್ವಿಕೆಯನ್ನು ಕೋರುವ ಹಕ್ಕು ಆಗಿದೆಯೇ ಹೊರತು ಅರಾಕತೆಯಲ್ಲಿ ಅಲೆದಾಡುವ ಹಕ್ಕು ಅಲ್ಲ ’ಎಂಬ ಜಾರ್ಜ್ ಈಲಿಯಟ್ನ ಮಾತು ನನ್ನ ನೆಚ್ಚಿನ ಉಕ್ತಿಗಳಲ್ಲೊಂದಾಗಿದೆ. ನಿಮ್ಮ ‘ಬಂಡಾಯ ’ವು ಸ್ವಾತಂತ್ರ ಮತ್ತು ಪ್ರಜಾಪ್ರಭುತ್ವಕ್ಕಾಗಿ ನಿಮ್ಮ ಕಾಳಜಿಯನ್ನು ಆಧರಿಸಿತ್ತು. ನೀವು ಅದನ್ನು ಘನತೆ ಮತ್ತು ಗೌರವದಿಂದ ನಿರ್ವಹಿಸಿದ್ದೀರಿ. ನೀವು ಶೇರ್ ಮಾಡಿಕೊಂಡಿದ್ದ ಕೆಲವು ಮೆಮೆಗಳ ಆಧಾರದಲ್ಲಿ ಅದು ಕೊಂಚ ಗಂಭೀರ ಕಲಾತ್ಮಕ ಸೃಜನಶೀಲತೆಯನ್ನು ಹೊಂದಿತ್ತು ಎಂದೂ ನಾನು ಹೇಳಬಹುದು.
  
ಹೀಗಾಗಿ ನಿಮ್ಮನ್ನು ನಿರಾಶೆಗೊಳಿಸಿರುವ ನಾವು ನಿಮಗೆ ಏನನ್ನು ಹೇಳಬಹುದು? ಮೊದಲನೆಯದಾಗಿ ಈ ಮಾತನ್ನು ಹೇಳಲು ನಾನು ಬಯಸುತ್ತೇನೆ. ಎಲ್ಲ ಯತಾರ್ಥತೆಗಳಲ್ಲಿಯೂ ಈ ಪ್ರಕರಣವು ಅಶೋಕ ವಿವಿಯ ವರ್ಚಸ್ಸಿಗೆ ಹಾನಿಯನ್ನುಂಟು ಮಾಡಿದೆ ಎಂದು ಕಂಡುಬರಬಹುದು. ಆದರೆ ವಿಶಾಲ ಅರ್ಥದಲ್ಲಿ ಅಶೋಕದ ವರ್ಚಸ್ಸು ಹೆಚ್ಚಲಿದೆ,ವಿವಿಯು ಏನು ಮಾಡಿದೆಯೇ ಅದರಿಂದಲ್ಲ,ಆದರೆ ನೀವೇನು ಮಾಡಿರುವಿರೋ ಅದರಿಂದ. ನೀವು ಇಬ್ಬರು ಪ್ರೊಫೆಸರ್ಗಳನ್ನು ಕಳೆದುಕೊಳ್ಳಬಹುದು,ಆದರೆ ನಿಮ್ಮತ್ತ ನೋಡುವ ಯಾರೇ ಆದರೂ ಮೆಚ್ಚಿಕೆಯಿಂದ ಅಚ್ಚರಿಪಟ್ಟುಕೊಳ್ಳುತ್ತಾರೆ. ಮಹತ್ವದ ವೌಲ್ಯಗಳನ್ನು ಸಮರ್ಥಿಸಿಕೊಂಡ ಮತ್ತು ಉತ್ತರದಾಯಿತ್ವಕ್ಕೆ ಆಗ್ರಹಿಸುವುದರಲ್ಲಿ ನೀವು ಪ್ರದರ್ಶಿಸಿದ ಸಮತೋಲನ ಮತ್ತು ಅಭಿವ್ಯಕ್ತಿ ಯಾರೇ ಆದರೂ ಈ ವಿವಿಯೊಂದಿಗೆ ಗುರುತಿಸಿಕೊಳ್ಳಲು ಬಯಸುವಂತೆ ಮಾಡುತ್ತದೆ. ನೀವು ವಿವಿಯ ಹೃದಯ ಮತ್ತು ಆತ್ಮವಾಗಿದ್ದೀರಿ ಮತ್ತು ಯಾವುದೂ ಅದಕ್ಕೆ ಹಾನಿಯನ್ನುಂಟು ಮಾಡಲು ಸಾಧ್ಯವಿಲ್ಲ. 

ಎರಡನೆಯದಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುವುದು ನನ್ನ ಕೆಲಸವಲ್ಲ. ಆದರೆ ನಿಮ್ಮ ಕೂಗು ದೀರ್ಘಾವಧಿಯಲ್ಲಿ ಅಶೋಕವನ್ನು ಇನ್ನಷ್ಟು ಉತ್ತಮ ವಿವಿಯನ್ನಾಗಿ ಮಾಡುತ್ತದೆ ಮತ್ತು ಅದು ತನ್ನ ಆದರ್ಶಗಳು ಮತ್ತು ವೌಲ್ಯಗಳಿಗೆ ಪುನಃ ಕಟಿಬದ್ಧವಾಗುವಂತೆ ಮಾಡುತ್ತದೆ ಎಂದು ನಾನು ಭಾವಿಸಿದ್ದೇನೆ. ನಾವು ನಿಮಗೆ ಉಪನ್ಯಾಸಗಳ ಮೂಲಕ ಏನನ್ನು ಕಲಿಸಲು ಕೆಟ್ಟದಾಗಿ ಪ್ರಯತ್ನಿಸುತ್ತಿದ್ದೇವೋ ಅದನ್ನು ನೀವು ಉದಾಹರಣೆಯೊಂದಿಗೆ ನಮಗೆ ಕಲಿಸಿದ್ದೀರಿ. ಇದಕ್ಕಾಗಿ ನಿಮ್ಮ ಬಗ್ಗೆ ನೀವು ಹೆಮ್ಮೆಪಟ್ಟುಕೊಳ್ಳಬೇಕು. ಉತ್ತಮ ವಿಶ್ವವೊಂದನ್ನು ನೀವು ಸೃಷ್ಟಿಸಬಲ್ಲಿರಿ ಎಂಬ ವಿಶ್ವಾಸ ನಿಮ್ಮಲ್ಲಿರಬೇಕು. ನೀವು ಈಗಾಗಲೇ ಅಶೋಕದ ಉದ್ದಿಷ್ಟ ಕಾರ್ಯವನ್ನು ಪೂರ್ಣಗೊಳಿಸಿದ್ದೀರಿ.
   
ಮತ್ತೊಮ್ಮೆ ಅನಗತ್ಯ ಅಪಾಯಗಳನ್ನು ಮೈಮೇಲೆಳೆದುಕೊಳ್ಳಲು ನಾನು ಬಯಸದಿರುವುದಕ್ಕೆ ನೀವು ನನ್ನನ್ನು ಕ್ಷಮಿಸಬಹುದು. ನನ್ನ ರಾಜೀನಾಮೆಗೆ ಕಾರಣವಾಗಿದ್ದ ಸನ್ನಿವೇಶಗಳು ನನ್ನ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಸದ್ಯೋಭವಿಷ್ಯದಲ್ಲಿ ಬದಲಾಗುವುದಿಲ್ಲ. ಹೀಗಾಗಿ ನಾನು ಈ ಅಧ್ಯಾಯವನ್ನು ಮುಗಿಸಲೇಬೇಕಿದೆ. ಈ ವಿಷಯಲ್ಲಿ ನನ್ನ ಮೇಲೆ ಒತ್ತಡ ಹೇರದಂತೆ ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ನಿಮಗೆ ನಿರಾಶೆಯಾಗುತ್ತದೆ ಎನ್ನುವುದು ನನಗೆ ಗೊತ್ತು. ನನ್ನ ವೃತ್ತಿಪರ ವಿವೇಚನೆಯನ್ನು ಬಳಸಿ ಹೇಳುವುದಾದರೆ ನಿಮ್ಮ ಧ್ಯೇಯವು ಇಬ್ಬರು ಪ್ರೊಫೆಸರ್ಗಳ ವಿಧಿಗಿಂತ ದೊಡ್ಡದಾಗಿದೆ. ನೀವು ನಂಬಿಕೆ ಮತ್ತು ವಿಶ್ವಾಸವನ್ನು ಮರಳಿ ಪಡೆದುಕೊಳ್ಳುವಂತಾಗಲು ವಿವಿಯ ಟ್ರಸ್ಟಿಗಳು ಮತ್ತು ಬೋಧಕ ವೃಂದ ನಿವ್ಮೊಂದಿಗೆ ಜೊತೆಗೂಡಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಆಶಿಸಿದ್ದೇನೆ. 

ನಿಮ್ಮ ಮಾರ್ಗದರ್ಶನದಿಂದ ಅಶೋಕಕ್ಕೆ ಅಗತ್ಯವಿರುವ ಸಾಂಸ್ಥಿಕ ಸ್ವಾಯತ್ತತೆ ಮತ್ತು ಸ್ವಾತಂತ್ರವನ್ನು ಕಾಯ್ದುಕೊಳ್ಳಲು ಅವರಿಗೆ ಸಾಧ್ಯವಾಗಲಿದೆ. ನಿಮ್ಮ ಧೈರ್ಯ,ನ್ಯಾಯಪರತೆ ಮತ್ತು ಪ್ರಜಾಪ್ರಭುತ್ವ ವೌಲ್ಯಗಳ ತಿಳುವಳಿಕೆ ವಿವಿಯನ್ನು ಮುನ್ನಡೆಸಲಿದೆ. ಅಶೋಕವನ್ನು ಯಶಸ್ವಿಯಾಗಿಸಲು ಅವರೊಂದಿಗೆ ಶ್ರಮಿಸುವಂತೆ ನಾನು ನಿಮ್ಮನ್ನು ಕೋರಿಕೊಳ್ಳುತ್ತೇನೆ. ನಾವು ಕಠಿಣ ಸಮಯದಲ್ಲಿ ಬದುಕುತ್ತಿದ್ದೇವೆ. ಭಾರತವು ಸೃಜನಶೀಲತೆಯಿಂದ ನಳನಳಿಸುತ್ತಿದೆ. 

ಆದರೆ ಸರ್ವಾಧಿಕಾರದ ಕರಿನೆರಳು ಕೂಡ ನಮ್ಮ ಮೇಲಿದೆ ಮತ್ತು ಹಲವೊಮ್ಮೆ ಅಹಿತಕರ ಮತ್ತು ಕೆಲವೊಮ್ಮೆ ಅವಮಾನಕರ ಸ್ಥಿತಿಗಳಿಗೆ ನಮ್ಮನ್ನೆಲ್ಲ ತಳ್ಳುತ್ತಿದೆ. ಈ ಸ್ಥಿತಿಯನ್ನು ಎದುರಿಸಲು ನಾವು ತಾತ್ವಿಕ ಮತ್ತು ಜಾಣತನದ ಮಾರ್ಗಗಳನ್ನು ಕಂಡುಕೊಳ್ಳಬೇಕಿದೆ. ನಮ್ಮಲ್ಲಿ ಹೆಚ್ಚಿನವರು ದೇಶವನ್ನಾವರಿಸಿರುವ ಕರಾಳ ಛಾಯೆಯ ಬಗ್ಗೆ ವಿಷಾದ ಪಟ್ಟುಕೊಳ್ಳಲಷ್ಟಕ್ಕೇ ಸೀಮಿತವಾಗಿದ್ದೇವೆ.

ನಮಗೆ ಅಗತ್ಯವಿದೆ ಎಂದು ವಿವೇಕಾನಂದರು ಹೇಳಿದ್ದನ್ನು ಒದಗಿಸಬಲ್ಲ ಯುವ ಪೀಳಿಗೆಯು ಹೊರಹೊಮ್ಮುತ್ತಿದೆ ಎಂಬ ನಿಶ್ಚಿತಾಭಿಪ್ರಾಯದೊಂದಿಗೆ ನಾನು ಅಶೋಕ ವಿವಿಯನ್ನು ತೊರೆಯುತ್ತಿದ್ದೇನೆ. ಅಂಧಕಾರದ ಬಗ್ಗೆ ಗೋಳಿಡುವವರು ನಮಗೆ ಬೇಕಿಲ್ಲ, ಬೆಳಕನ್ನು ಮೂಡಿಸುವವರು ಬೇಕು. ನೀವು ಅದನ್ನು ಮಾಡಬಲ್ಲಿರಿ ಮತ್ತು ಮಾಡುತ್ತೀರಿ ಎಂಬ ವಿಶ್ವಾಸ ನನಗಿದೆ.

ನಾನು ಜೋಧಪುರ ಎಂಬ ಸಣ್ಣ ಪಟ್ಟಣದಿಂದ ಬಂದಿರುವ ವ್ಯಕ್ತಿ. ಮಾರವಾಡಿ ಭಾಷೆಯಲ್ಲಿ ‘ಧರಮ್ ರೆಹ ಸಿ,ರೆಹ ಸಿ ಧರಾ (ಧರ್ಮ ಉಳಿದರೆ ಈ ಭೂಮಿ ಉಳಿಯುತ್ತದೆ) ’ಎಂದು ಆರಂಭಗೊಳ್ಳುವ ಹೇಳಿಕೆಯೊಂದಿದೆ. ಈ ವಿಷಯಗಳ ಬಗ್ಗೆ ನಿಮೊಂದಿಗೆ ನನ್ನ ಮಾತುಕತೆ ಅತ್ಯಂತ ಸಂತೋಷವನ್ನು ನೀಡಿದೆ. ಇದರ ಒಳ್ಳೆಯ ವಿಷಯವೆಂದರೆ ನಾವು ಎಲ್ಲಿಯೇ ಇದ್ದರೂ ನಾನು ಈ ವರ್ಷ ನಿಮ್ಮೆಂದಿಗೆ ಆನಂದಿಸಿದ್ದ ಪ್ಲಾಟೊ,ಮಹಾಭಾರತ,ಹೋಬ್ಸ್,ಮಾರ್ಕ್ಸ್ ಮತ್ತು ಇತರ ಹಲವಾರು ಪಠ್ಯಗಳ ಮೂಲಕ ಈ ಮಾತುಕತೆಯು ಮುಂದುವರಿಯುತ್ತದೆ. ಆದರೆ ನೀವು ನಮಗೆ ಕಲಿಸಿರುವುದು ಹೆಚ್ಚು ಮೌಲಿಕವಾಗಿದೆ. ನಾನು ನಮಗೆ ಸದಾ ಕೃತಜ್ಞನಾಗಿದ್ದೇನೆ. 

ನಿಮ್ಮ ಪ್ರತಾಪ್ ಭಾನು ಮೆಹ್ತಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News