ಕೋಮುವಾದಿ ಕಾರ್ಗತ್ತಲಲ್ಲೊಂದು ಬೆಳಕು-ಭಗತ್ ಸಿಂಗ್

Update: 2021-03-23 04:42 GMT

 ಕೋಮುವಾದವನ್ನು ನಿಯಂತ್ರಿಸಲು ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸಬೇಕು. ನಮಗೆ ಯಾವುದೇ ಧರ್ಮದಲ್ಲಿ ನಂಬಿಕೆ ಇದ್ದರೂ ಧರ್ಮವನ್ನು ರಾಜಕೀಯದಿಂದ ಬೇರ್ಪಡಿಸುವುದರಿಂದ ದೇಶದ ಒಳಿತಿಗಾಗಿ ನಾವು ಒಗ್ಗಟ್ಟಾಗಿ ನಿಲ್ಲಬಹುದು. ನಿಜವಾಗಿಯೂ ದೇಶದ ಬಗ್ಗೆ ಕಾಳಜಿ ಹೊಂದಿರುವವರು ನಾನು ನೀಡಿರುವ ಸಲಹೆಯ ಬಗ್ಗೆ ಯೋಚಿಸುವರು. 1927ರಲ್ಲಿ ‘ಪಂಜಾಬಿನ ಕೀರ್ತಿ’ ಎಂಬ ಪತ್ರಿಕೆಗೆ ಬರೆದ ಲೇಖನದಲ್ಲಿ ಈ ರೀತಿ ಉಲ್ಲೇಖಿಸಿದ ಭಗತ್ ಸಿಂಗ್ ಬದುಕಿದ್ದು ಕೇವಲ ಇಪ್ಪತ್ಮೂರೇ ವರ್ಷ!! ದೇಶವನ್ನು ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಲು ಸಾವಿರಾರು ಯುವಕರಲ್ಲಿ ಕ್ರಾಂತಿಯ ಕಿಡಿಹೊತ್ತಿಸಿದ ಭಗತ್‌ನ ಹೃದಯ ಸಹಬಾಳ್ವೆ, ಧಾರ್ಮಿಕ ಸಾಮರಸ್ಯಕ್ಕಾಗಿ ಮಿಡಿದ ಪರಿ ಅಪಾರ.

ಅದು ದೇಶದ ಸ್ವಾತಂತ್ರ್ಯ ಹೋರಾಟ ಕಾವು ಪಡೆಯುತ್ತಿದ್ದ ಕಾಲ. 1919ರ ಎಪ್ರಿಲ್ 13ರಂದು ಪಂಜಾಬಿನ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ವೈಶಾಖಿ ಹಬ್ಬವನ್ನು ಆಚರಿಸಲು ಸೇರಿದ ದೇಶಪ್ರೇಮಿ ಜನಸ್ತೋಮ ಕೂಗುತ್ತಿದ್ದ ಘೋಷಣೆ ‘‘ಹಿಂದೂ ಮುಸ್ಲಿಮರ ಐಕ್ಯತೆ ಚಿರಾಯುವಾಗಲಿ! ರೌಲತ್ ಕಾಯ್ದೆ ರದ್ದಾಗಲಿ’’; ಇದನ್ನು ಸಹಿಸದ ಬ್ರಿಟಿಷ್ ಪೊಲೀಸ್ ಅಧಿಕಾರಿ ಡಯರ್ ತನ್ನ ಪಡೆಯೊಂದಿಗೆ ಬಂದು ಅಮಾಯಕ ಜನಸ್ತೋಮದ ಮೇಲೆ ಸಾವಿರಾರು ಗುಂಡುಗಳ ಮಳೆಗರೆದ. ಪರಿಣಾಮ ಬ್ರಿಟಿಷ್ ವರದಿಯ ಪ್ರಕಾರವೇ 400 ಜನ ಅಸುನೀಗಿದರು. 1,100ಕ್ಕೂ ಹೆಚ್ಚು ಜನ ಮಾರಣಾಂತಿಕ ಪೆಟ್ಟು ತಿಂದರು!

ಈ ಘಟನೆಯಿಂದ ತೀವ್ರವಾಗಿ ಮನನೊಂದಿದ್ದ 12 ವರ್ಷದ ಬಾಲಕ ಭಗತ್ ನೇರವಾಗಿ ಜಲಿಯನ್ ವಾಲಾಬಾಗ್‌ಗೆ ಬಂದಿಳಿದ. ಅಲ್ಲಿದ್ದ ದೇಶಪ್ರೇಮಿಗಳ ರಕ್ತದಲ್ಲಿ ತೊಯ್ದಿದ್ದ ಮಣ್ಣನ್ನು ಒಂದು ಶೀಷೆಯಲ್ಲಿ ತುಂಬಿಟ್ಟುಕೊಂಡು ಮನೆಗೆ ಬಂದು ತನ್ನ ತಂಗಿಯನ್ನು ಕರೆದು ಅತ್ಯಂತ ಶ್ರದ್ಧೆಯಿಂದ ಅದಕ್ಕೆ ಮಾಲಾರ್ಪಣೆ ಮಾಡಿದ. ಪ್ರಾಯಶಃ ಬಾಲಕ ಭಗತ್ ಅಂದೇ ತಿರ್ಮಾನಿಸಿರಬೇಕು ಮುಂದೆ ಅಗತ್ಯ ಬಂದಾಗ ರಕ್ತತರ್ಪಣ ನೀಡಲು ನಾನೂ ಹಿಂಜರಿಯಲಾರೆ.

ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ ಬ್ರಿಟಿಷ್ ಸರಕಾರ ಭಾರತದ ರಾಜಕೀಯದಲ್ಲಿ ಕೋಮು ವಿಭಜನೆಯನ್ನು ಹರಡಲಾರಂಭಿಸಿತು. ಇದರ ಪರಿಣಾಮವಾಗಿ ಹಿಂದೂ-ಮುಸ್ಲಿಮರ ನಡುವೆ ಕೊಹತ್‌ನಲ್ಲಿ ಭಯಾನಕ ಹತ್ಯಾಕಾಂಡ ಜರುಗಿತು. ಇದಾದ ನಂತರ ರಾಷ್ಟ್ರರಾಜಕಾರಣದಲ್ಲಿ ಕೋಮು ಸಮಸ್ಯೆಗಳ ಬಗ್ಗೆ ದೀರ್ಘ ಚರ್ಚೆಗಳು ನಡೆದವು. ಆಗಿನ ವಿದ್ಯಮಾನಗಳ ಬಗ್ಗೆ ಸದಾ ಆಸಕ್ತಿದಾಯಕ ಚರ್ಚೆ ನಡೆಸುತ್ತಿದ್ದ ಭಗತ್ ಸಾರ್ವಜನಿಕ ಜೀವನದಲ್ಲಿ ಜನಗಳ ನಾಯಕರು ಎಂದುಕೊಳ್ಳುವವರ ಬಗ್ಗೆ ಹೀಗೆನ್ನುತ್ತಾರೆ: ‘‘ರಾಷ್ಟ್ರೀಯ ಏಕತೆಯ ಬಗ್ಗೆ ಭಾಷಣಗಳನ್ನು ಮಾಡುವ ಮತ್ತು ಸ್ವರಾಜ್ಯಕ್ಕಾಗಿ ಅಬ್ಬರದಿಂದ ಆಗ್ರಹಿಸುವ ಈ ನಾಯಕರು ಕೋಮುದ್ವೇಷ ಹರಡುವ ಸಂದರ್ಭದಲ್ಲಿ ಸ್ತಬ್ಧರಾಗಿದ್ದಾರೆ ಹಾಗೂ ನಾಚಿಕೆಯಿಂದ ಮಾತನಾಡಲಾಗದೆ ತಲೆತಗ್ಗಿಸಿದ್ದಾರೆ. ಇವರಲ್ಲಿ ಕೆಲ ನಾಯಕರು ಧರ್ಮಾಂಧರ ನಿಯಂತ್ರಣದಲ್ಲಿದ್ದರೆ, ಇನ್ನು ಕೆಲವರು ಬಹಿರಂಗವಾಗಿ ಕೋಮುವಾದಿಗಳೇ ಆಗಿದ್ದಾರೆ. ಎಲ್ಲರ ಬಗ್ಗೆಯೂ ಯೋಚಿಸುವ ಕೆಲವೇ ಕೆಲವು ನಾಯಕರಿದ್ದರೂ ಅವರಿಂದ ಬೆಳೆಯುತ್ತಿರುವ ಕೋಮುವಾದವನ್ನು ತಡೆಯಲು ಸಾಧ್ಯವಿಲ್ಲ ಇದು ಭಾರತದ ನಾಯಕತ್ವದಲ್ಲಿನ ಬಹುದೊಡ್ಡ ಕೊರತೆ!

ಮತೀಯವಾದದ ಅಗ್ನಿಗೆ ತುಪ್ಪಸುರಿಯುವ ಮಾಧ್ಯಮಗಳ ಕುರಿತು ಭಗತ್ ಹೇಳಿದ್ದು: ‘‘ಒಂದು ಕಾಲದಲ್ಲಿ ಗೌರವಾನ್ವಿತ ವೃತ್ತಿಯಾಗಿದ್ದ ಪತ್ರಿಕೋದ್ಯಮ ಇಂದು ಕೀಳು ಮಟ್ಟಕ್ಕಿಳಿದಿದೆ. ಒಂದು ಧರ್ಮದ ವಿರುದ್ಧ ಬರೆಯುವುದು ಧರ್ಮ-ಧರ್ಮಗಳಲ್ಲಿ ದ್ವೇಷ ಭಾವನೆಗಳನ್ನು ಬಿತ್ತುತ್ತದೆ. ಪತ್ರಿಕೆಗಳಲ್ಲಿನ ಬರಹಗಳು ಕೋಮುಗಲಭೆಯನ್ನು ಹುಟ್ಟುಹಾಕಿದ ಅನೇಕ ಉದಾಹರಣೆಗಳಿವೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಮನಸ್ಸು ಮತ್ತು ಭಾವನೆಗಳಲ್ಲಿ ಸಮತೋಲನ ಹೊಂದಿದ ಕೆಲವೇ ಕೆಲವು ವರದಿಗಾರರಿದ್ದಾರೆ.

ಧರ್ಮಾಂಧತೆಯಲ್ಲಿ ಮುಳುಗಿರುವವರನ್ನು ಹೊರತೆಗೆಯುವುದು ಹಾಗೂ ಜನರಲ್ಲಿನ ಕೋಮುವಾದಿ ಭಾವನೆಗಳ ಜಾಗದಲ್ಲಿ ಕೋಮುಸೌಹಾರ್ದ ಭಾವನೆಗಳನ್ನು ಬಿತ್ತುವುದರ ಮೂಲಕ ಜನರನ್ನು ರಾಷ್ಟ್ರೀಯ ಐಕ್ಯತೆಯಡೆಗೆ ಕೊಂಡೊಯ್ಯುವುದೇ ಪತ್ರಿಕೋದ್ಯಮದ ನಿಜವಾದ ಜವಾಬ್ದಾರಿ.’’

ತಮ್ಮ ಸಂಘಟನೆ ಹಿಂದೂಸ್ಥಾನ್ ಸೋಷಲಿಸ್ಟ್ ರಿಪಬ್ಲಿಕನ್ ಅಸೋಶಿಯೇಶನ್‌ನಲ್ಲಿ ಚರ್ಚಿಸಿ ನಿರ್ಧರಿಸಿದಂತೆ ತಮ್ಮ ಸಹವರ್ತಿ ಬುಟ್ಟುಕೇಶ್ವರ ದತ್‌ರೊಂದಿಗೆ ಸೇರಿ ಜನ ವಿರೋಧಿ ಮಸೂದೆಗಳನ್ನು ಜಾರಿಗೆ ತರಲು ಹೊರಟಿದ್ದ ಬ್ರಿಟಿಷ್ ಶಾಸನಸಭೆಯಲ್ಲಿ ಅಪಾಯಕಾರಿಯಲ್ಲದ ಬಾಂಬ್‌ನ್ನು ಸ್ಫೋಟಿಸುವ ಮೂಲಕ ಪೂರ್ವಯೋಜನೆಯಂತೆ ತಪ್ಪಿಸಿಕೊಳ್ಳಲೆತ್ನಿಸದೆ ಬ್ರಿಟಿಷರಿಗೆ ಸೆರೆಯಾದರು.

ತಮ್ಮ ಕ್ರಾಂತಿಕಾರಿ ವಿಚಾರಧಾರೆಯನ್ನು ದೇಶವಾಸಿಗಳೆಲ್ಲರಿಗೂ ವಿಚಾರಣೆಯ ವೇಳೆ ಹರಡಲು ಕೋರ್ಟ್‌ನ ಕಟಕಟೆಯನ್ನು ಬಳಸಬೇಕೆಂದು ತೀರ್ಮಾನಿಸಿ ಕೊಂಡಿದ್ದ ಭಗತ್ ಹಾಗೂ ಸಂಗಾತಿಗಳು 1930 ಜನವರಿ 21ರಂದು ವಿಚಾರಣೆ ವೇಳೆ ಧರಿಸಿದ್ದು ಕೆಂಪು ಕೊರಳ ವಸ್ತ್ರಗಳನ್ನು; ಕೂಗಿದ್ದ ಘೋಷಣೆಗಳು ‘‘ಸಮಾಜವಾದಿ ಕ್ರಾಂತಿ ಚಿರಾಯುವಾಗಲಿ, ಕಮ್ಯುನಿಸ್ಟ್ ಇಂಟರ್‌ನ್ಯಾಷನಲ್ ಚಿರಾಯುವಾಗಲಿ, ಚಿರಾಯುವಾಗಲಿ ಜನ-ಜನತೆ, ಲೆನಿನ್ ಹೆಸರಿಗೆ ಆಳಿವಿಲ್ಲ, ಸಾಮ್ರಾಜ್ಯಶಾಹಿಗಳಿಗೆ ಧಿಕ್ಕಾರ...’’ ಇತ್ಯಾದಿ.

 ತಮ್ಮ ಜೀವನದ ಕೊನೆಯ ಅಪೇಕ್ಷೆಯಾಗಿದ್ದ ಕಾಮ್ರೇಡ್ ಲೆನಿನ್ ರವರ ಜೀವನ ಚರಿತ್ರೆಯ ವಿಮರ್ಶೆಯನ್ನು ಓದುತ್ತಿದ್ದಾಗ ಜೈಲರ್ ಬಂದು ನೇಣುಗಂಬಕ್ಕೇರಲು ಸೂಚಿಸಿದರು. ಇದರಿಂದ ಸ್ವಲ್ಪವು ವಿಚಲಿತರಾಗದೆ ಪುಸ್ತಕದಿಂದ ತಲೆ ಎತ್ತದೆ ಹೇಳಿದರು: ‘‘ಸ್ವಲ್ಪತಡೆಯಿರಿ, ಒಬ್ಬ ಕ್ರಾಂತಿಕಾರಿ ಇನ್ನೊಬ್ಬ ಕ್ರಾಂತಿಕಾರಿಯೊಡನೆ ಸಂವಾದದಲ್ಲಿದ್ದಾನೆ.’’ ನಂತರ ಕೆಲವೇ ಕ್ಷಣಗಳಲ್ಲಿ ಪುಸ್ತಕ ಮುಚ್ಚಿಟ್ಟು, ಶಾಂತಚಿತ್ತರಾಗಿ ‘‘ಇನ್ನು ನಡೆಯಿರಿ’’ ಎಂದು ಹೇಳಿ ತಮ್ಮ ಸಂಗಾತಿಗಳಾದ ರಾಜಗುರು, ಸುಖದೇವ್‌ರೊಂದಿಗೆ 1931 ಮಾರ್ಚ್ 23ರಂದು ಗಲ್ಲಿಗೇರಿದರು.

ಜನಗಳು ತಮ್ಮಲ್ಲೇ ಪರಸ್ಪರ ಕಿತ್ತಾಡುವುದನ್ನು ತಪ್ಪಿಸಲು ಅವರಲ್ಲಿ ವರ್ಗ ಪ್ರಜ್ಞೆಯನ್ನು ಬೆಳೆಸುವುದು ಇಂದಿನ ಅವಶ್ಯಕತೆಯಾಗಿದೆ. ಬಡ ಕಾರ್ಮಿಕರು ಮತ್ತು ರೈತರಿಗೆ ಅವರ ನಿಜವಾದ ಶತ್ರುಗಳು ಬಂಡವಾಳಿಗರು ಎಂಬುದನ್ನು ತಿಳಿಸಬೇಕಿದೆ. ‘‘ಬಂಡವಾಳಿಗರ ತಂತ್ರಗಳ ಬಗ್ಗೆ ಎಚ್ಚರವಹಿಸಿ, ಅವರನ್ನು ಪ್ರಶ್ನಿಸದೆ ಹಿಂಬಾಲಿಸುವುದನ್ನು ತಡೆಯಬೇಕು. ಯಾವುದೇ ಜಾತಿ, ಧರ್ಮ, ಬಣ್ಣ ದೇಶಕ್ಕೆ ಸೇರಿದ ಶೋಷಿತ ಜನರಿಗೆ ಒಂದೇ ರೀತಿಯ ಹಕ್ಕುಗಳಿವೆ’’ ಎಂಬ ಇಂದಿಗೂ ಪ್ರಸ್ತುತವೆನಿಸುವ ಭಗತ್ ಸಿಂಗ್‌ರ ಮಾತು ಅವರ ಒಲವು-ನಿಲುವುಗಳನ್ನು ನಿಚ್ಚಳಗೊಳಿಸುತ್ತವೆ.

Writer - ಎಲ್ದೋ ಹೊನ್ನೇಕುಡಿಗೆ

contributor

Editor - ಎಲ್ದೋ ಹೊನ್ನೇಕುಡಿಗೆ

contributor

Similar News