ಶಿಕ್ಷಣ ತಜ್ಞ ಪ್ರೊ. ಎಂ.ಅಬೂಬಕರ್ ತುಂಬೆ ನಿಧನ

Update: 2021-03-23 04:49 GMT

ಬಂಟ್ವಾಳ, ಮಾ.23: ಶಿಕ್ಷಣ ತಜ್ಞ, ಯುಎಇ ರಾಸ್ ಅಲ್ ಖೈಮಾದ ಸ್ಕಾಲರ್ಸ್ ಇಂಡಿಯನ್ ಹೈಸ್ಕೂಲ್ ಪ್ರಾಂಶುಪಾಲ ಪ್ರೊ.ಎಂ.ಅಬೂಬಕರ್ ತುಂಬೆ ಅವರು ಮಂಗಳವಾರ ಮುಂಜಾನೆ ಯುಎಇಯ ರಾಸ್ ಅಲ್ ಖೈಮಾದಲ್ಲಿರುವ ತನ್ನ ಸ್ವ ಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು.

1962ರ ಆಗಸ್ಟ್ 15ರಲ್ಲಿ ಜನಿಸಿದ ಅವರು 1982ರಲ್ಲಿ ಮಂಗಳೂರಿನ ಬದ್ರಿಯಾ ಪ್ರಾಥಮಿಕ‌ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಜೀವನ‌ ಆರಂಭಿಸಿದ್ದರು. 1987ರವರೆಗೆ ಅಲ್ಲಿ ಶಿಕ್ಷಕರಾಗಿದ್ದರು. ಕೆಲಕಾಲ ಬಿ.ಎ.ಗ್ರೂಪ್ ತುಂಬೆ ಇದರ ಎಕ್ಸಿಕ್ಯೂಟಿವ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದರು. 1988ರಿಂದ ತುಂಬೆ ಬಿ.ಎ. ಕಾಲೇಜಿನ ಪ್ರಾಂಶುಪಾಲರಾಗಿದ್ದ ಅವರು 1995ರ ವರೆಗೆ ಸೇವೆ ಸಲ್ಲಿಸಿದ್ದರು.

1996ರಲ್ಲಿ ಕೋಟೆಕಾರ್ ಮುಸ್ಲಿಮ್ ವಸತಿ ಶಾಲೆಯ ಪ್ರಾಂಶುಪಾಲರಾಗಿದ್ದ  ಪ್ರೊ.ಎಂ.ಅಬೂಬಕರ್ ತುಂಬೆ, 1997ರಿಂದ ಯುಎಇ ನಿಮ್ಸ್ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿ ‌ಕಾರ್ಯನಿರ್ವಹಿಸಿದ್ದರು‌. ಬಳಿಕ ಯುಎಇ ರಾಸ್ ಅಲ್ ಖೈಮಾ ಸ್ಕಾಲರ್ಸ್ ಇಂಡಿಯನ್ ಸ್ಕೂಲ್‌ನ ಪ್ರಾಂಶುಪಾಲರಾಗಿದ್ದ ಅವರು ಪ್ರಸಕ್ತ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದರು.

 ಯುಎಇ ಇದರ ಸಿಬಿಎಸ್ಇ ಇದರ ಅಧಿಕೃತ ಕೌನ್ಸಿಲರ್ ಆಗಿದ್ದ ಅವರು,‌ ತವರಿನಲ್ಲಿ ಬ್ರಹ್ಮರಕೂಟ್ಲುವಿನ ಡೈಮಂಡ್ ಇಂಟರ್‌ನ್ಯಾಶನಲ್ ಸ್ಕೂಲ್ ನ ನಿರ್ದೇಶಕರಾಗಿದ್ದರು.

 ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ  ಪ್ರೊ.ಎಂ.ಅಬೂಬಕರ್ ತುಂಬೆ, ಶಿಕ್ಷಣ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದ ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗಾಗಿ ಬ್ಯಾರೀಸ್ ವೆಲ್ಫೇರ್ ಫೋರಂ ತನ್ನ ದಶಮಾನೋತ್ಸವ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಗೌರವಿಸಿತ್ತು. ಮೂಲತಃ ತುಂಬೆಯ ನಿವಾಸಿಯಾಗಿರುವ ಪ್ರೊ.ಅಬೂಬಕರ್ ಅವರ ಕುಟುಂಬ ತುಂಬೆಯಲ್ಲಿ ವಾಸ್ತವ್ಯವಿದೆ.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು, ಅಪಾರ ಬಂಧು ಬಳಗ, ಶಿಷ್ಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News