ಉತ್ತರ ಪ್ರದೇಶದಲ್ಲಿ ಮತಾಂತರ ಆರೋಪಿಸಿ ರೈಲಿನಲ್ಲಿ ಕ್ರೈಸ್ತ ಸನ್ಯಾಸಿನಿಯರಿಗೆ ಹಲ್ಲೆಗೈದ ಬಜರಂಗದಳ ಸದಸ್ಯರು

Update: 2021-03-23 14:17 GMT
photo: keralakaumudy.com

ಜಾನ್ಸಿ: ಉತ್ತರಪ್ರದೇಶದಲ್ಲಿ ಹಲವಾರು ಕ್ರಿಮಿನಲ್‌ ಕೃತ್ಯಗಳ ಕುರಿತಾದಂತೆ ದೈನಂದಿನ ವರದಿಯಾಗುತ್ತಿದ್ದು, ಇದೀಗ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಕ್ರೈಸ್ತ ಸನ್ಯಾಸಿನಿಯರು ಬಲವಂತದ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಜರಂಗದಳ ಸದಸ್ಯರು ಹಲ್ಲೆಗೈದ ಘಟನೆಯು ಝಾನ್ಸಿಯಲ್ಲಿ ವರದಿಯಾಗಿದೆ. ಕೃತ್ಯದ ಕುರಿತಾದಂತೆ ಕೇರಳದ ಸೀರೋ ಮಲಬಾರ್‌ ಚರ್ಚ್‌ ಖಂಡನೆ ವ್ಯಕ್ತಪಡಿಸಿದೆ.

ನಾಲ್ವರು ಕ್ರೈಸ್ತ ನನ್‌ ಗಳು ನೂತನವಾಗಿ ಧಾರ್ಮಿಕ ವಿಧ್ಯಾಭ್ಯಾಸ ಕಲಿಕೆಗೆಂದು ತೆರಳುತ್ತಿದ್ದ  ವಿದ್ಯಾರ್ಥಿಗಳೊಂದಿಗೆ ರೈಲಿನಲ್ಲಿ ಯಾತ್ರೆಗೈಯುತ್ತಿದ್ದರು. ಈ ವೇಳೆ ಹೃಷಿಕೇಶದ ರೈಲ್ವೆ ನಿಲ್ದಾಣದಲ್ಲಿ ಕೆಲವು ಬಜರಂಗದಳದ ಸದಸ್ಯರು ರೈಲು ಹತ್ತಿದ್ದು, ಬಲವಂತದ ಮತಾಂತರ ನಡೆಸುತ್ತಿದ್ದಾರೆಂದು ಗಲಭೆ ಎಬ್ಬಿಸಿದ್ದಾಗಿ ವರದಿ ತಿಳಿಸಿದೆ.

ಬಳಿಕ ಝಾನ್ಸಿ ರೈಲ್ವೆ ನಿಲ್ದಾಣ ತಲುಪಿದಾಗ ಸುಮಾರು ೧೫೦ಕ್ಕೂ ಹೆಚ್ಚಿನ ಬಜರಂಗದಳ ಸದಸ್ಯರು ಜೈ ಶ್ರೀರಾಮ್‌ ಘೋಷಣೆ ಕೂಗುತ್ತಾ ಹಲ್ಲೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ. ವಿದ್ಯಾರ್ಥಿಗಳು ತಾವು ಕ್ರೈಸ್ತ ಕುಟುಂಬದಲ್ಲೇ ಹುಟ್ಟಿದವರು ಎನ್ನುವುದಕ್ಕೆ ಎಲ್ಲ ದಾಖಲೆಗಳನ್ನು ತೋರಿಸಿದರೂ ತೃಪ್ತರಾಗದ ದುಷ್ಕರ್ಮಿಗಳು ನಾಲ್ವರು ನನ್‌ ಗಳಿಗೆ ಹಾಗೂ ಇಬ್ಬರು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 

ಬಳಿಕ ಈ ಕುರಿತಾದಂತೆ ಪೊಲೀಸರಿಗೆ ದುಷ್ಕರ್ಮಿಗಳು ತಪ್ಪು ಮಾಹಿತಿ ನೀಡಿದ್ದು, ಪೊಲೀಸರು ಹಲ್ಲೆಗೈದವರನ್ನು ಬಂಧಿಸುವ ಬದಲು ಹಲ್ಲೆಗೊಳಗಾದವರನ್ನು ಬಂಧಿಸಿದ್ದರು ಎನ್ನಲಾಗಿದೆ. ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿದ ನಂತರ ಸನ್ಯಾಸಿಗಳನ್ನು  ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಸುಮಾರು 150 ಭಜರಂಗದಳದ ಕಾರ್ಯಕರ್ತರು ರೈಲ್ವೆ ನಿಲ್ದಾಣದಲ್ಲಿ  ಸೂಚನೆ ಮೇರೆಗೆ ಜಮಾಯಿಸಿರುವುದನ್ನು ಪರಿಗಣಿಸಿ ಪೂರ್ವನಿಯೋಜಿತ ದಾಳಿಯನ್ನು ಶಂಕಿಸಲಾಗಿದೆ ಎಂದು ಚರ್ಚ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News