ಸಚಿವರ ಮನೆ ಮುಂದೆ ಸಿಬ್ಬಂದಿ ಗಲಾಟೆ: ಎಫ್‍ಐಆರ್ ದಾಖಲು
Update: 2021-03-23 23:30 IST
ಬೆಂಗಳೂರು, ಮಾ.23: ಆರೋಗ್ಯ ಸಚಿವ ಡಾ.ಸುಧಾಕರ್ ಮನೆ ಮುಂದೆ ನಡೆದಿದ್ದ ಸಿಬ್ಬಂದಿಗಳ ನಡುವಿನ ಮಾರಾಮಾರಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಈ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿಂದು ಎಫ್‍ಐಆರ್ ದಾಖಲಾಗಿದೆ.
ಮಾ.19ರಂದು ಸಚಿವರ ಭದ್ರತಾ ಸಿಬ್ಬಂದಿ ತಿಮ್ಮಯ್ಯ ಹಾಗೂ ಚಾಲಕ ಸೋಮಶೇಖರ್ ಪರಸ್ಪರ ಬಡಿದಾಡಿಕೊಂಡಿದ್ದಾರೆಂಬ ಆರೋಪ ಕೇಳಿಬಂದಿತ್ತು. ಆನಂತರ ತಿಮ್ಮಯ್ಯನ ವಿರುದ್ಧ ಚಾಲಕನ ಪತ್ನಿ ರತ್ನಮ್ಮ ದೂರು ನೀಡಿದ್ದರು.
ಕೆಲಸಕ್ಕೆ ಹೋಗಿದ್ದ ವೇಳೆ ನನ್ನ ಪತಿಯನ್ನ ತಡೆದ ತಿಮ್ಮಯ್ಯ ಸಚಿವರ ಬಳಿ ಹಾಗೂ ಅವರ ಪತ್ನಿಯ ಬಳಿ ನನ್ನ ಬಗ್ಗೆ ಇಲ್ಲಸಲ್ಲದನ್ನು ಹೇಳಿದ್ದೀಯಾ ಎಂದು ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ನೀಡಿದ ದೂರಿನ್ವಯ ಸದಾಶಿವನಗರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.