ಕಾಶ್ಮೀರ: ಕೋವಿಡ್ ಕರ್ತವ್ಯ‌ ನಿರತ ಪ್ರೊಫೆಸರ್ ಗೆ ಯುಎಪಿಎ ಅಡಿ ತಲೆಮರೆಸಿಕೊಂಡಿದ್ದ ಆರೋಪಿಯ ಪಟ್ಟ ಕಟ್ಟಿದ ಪೊಲೀಸರು!

Update: 2021-03-25 12:17 GMT

ಶ್ರೀನಗರ,ಮಾ.25: ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಸರಕಾರಿ ಕಾಲೇಜೊಂದರ ಸಹಾಯಕ ಪ್ರೊಫೆಸರ್ ಅಬ್ದುಲ್ ಬಾರಿ ನಾಯ್ಕ್‌ (40) ಅವರನ್ನು ಬಂಧಿಸಿರುವ ಪೊಲೀಸರು ಅವರು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯಡಿ ಆರೋಪಿಯಾಗಿದ್ದು, 2018ರಿಂದಲೂ ಬಂಧನದಿಂದ ನುಣುಚಿಕೊಳ್ಳುತ್ತಿದ್ದರು ಎಂದು ಹೇಳಿದ್ದಾರೆ. ವಿಪರ್ಯಾಸವೆಂದರೆ ಇದೇ ನಾಯ್ಕ್ ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ಕ್ವಾರಂಟೈನ್ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದರು. 

ಇಷ್ಟೇ ಅಲ್ಲ,‌ ಕಳೆದ ಜನವರಿಯಲ್ಲಿ ಉಧಮಪುರದ ಕಾಲೇಜಿಗೆ ವರ್ಗಾವಣೆಗೊಳ್ಳುವವರೆಗೂ ತನ್ನ ವಿರುದ್ಧ ಪ್ರಕರಣಗಳು ದಾಖಲಾಗಿರುವ ಪೊಲೀಸ್ ಠಾಣೆ ಮತ್ತು ಎಸ್ಪಿ ಕಚೇರಿ ಬಳಿಯಲ್ಲಿಯೇ ಇರುವ ಕಾಲೇಜಿನಲ್ಲಿ ಅವರು ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಪೊಲೀಸರು ಏಕಾಏಕಿ ಅವರನ್ನು ಬಂಧಿಸಿ ಯುಎಪಿಎ ಅಡಿ ತಲೆಮರೆಸಿಕೊಂಡ ಆರೋಪಿ ಎಂಬ ಪಟ್ಟ ಕಟ್ಟಿದ್ದಾರೆ. ನಾಯ್ಕಾ ಆರ್ಟಿಐ ಕಾರ್ಯಕರ್ತರಾಗಿದ್ದು ಸರಕಾರದ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುತ್ತಿದ್ದರು,ಭಾರತೀಯ ಸೇನೆಯಿಂದ ಗ್ರಾಮದಲ್ಲಿಯ ಜಮೀನಿನ ಅತಿಕ್ರಮಣ ಯತ್ನವನ್ನು ವಿಫಲಗೊಳಿಸಿದ್ದರು ಮತ್ತು ಜನರ ಸಮಸ್ಯೆಗಳನ್ನು ಬಗೆಹರಿಸಲು ಹೋರಾಡುತ್ತಿದ್ದರು. ಇದೇ ಕಾರಣದಿಂದ ಅವರನ್ನು ಬಂಧಿಸಲಾಗಿದೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

2015ರಿಂದ ಈ ವರ್ಷದ ಜನವರಿವರೆಗೂ ಕುಲ್ಗಾಮ್ ಜಿಲ್ಲೆಯ ಸರಕಾರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ನಾಯ್ಕಾ ಬಳಿಕ ಉಧಮಪುರದ ಸರಕಾರಿ ಮಹಿಳಾ ಕಾಲೇಜಿಗೆ ವರ್ಗಾವಣೆಗೊಂಡಿದ್ದರು. ‘ವಿಶ್ವಾಸಾರ್ಹ ಮಾಹಿತಿ ’ಯ ಮೇರೆಗೆ ತಾವು ನಾಯ್ಕ್ ರನ್ನು ಮಾ.7ರಂದು ಉಧಮಪುರದಿಂದ ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ತನ್ನ ಮಗ ನಿಯಮಿತವಾಗಿ ಕೆಲಸಕ್ಕೆ ಹಾಜರಾಗುತ್ತಿದ್ದ. ಆತ ತಲೆಮರೆಸಿಕೊಂಡ ಆರೋಪಿಯಾಗಿದ್ದರೆ ಸರಕಾರಿ ಉದ್ಯೋಗಿಯಾಗಿ ಕೆಲಸ ಮಾಡಲು ಹೇಗೆ ಸಾಧ್ಯ ಎಂದು ನಾಯ್ಕ್‌ ರ ತಂದೆ, ಅನಂತನಾಗ್ನ ಸರಕಾರಿ ಅಧೀನದ ಸಹಕಾರಿ ಮಾರುಕಟ್ಟೆಯ ಮ್ಯಾನೇಜರ್ ಆಗಿ ನಿವೃತ್ತರಾಗಿರುವ ಗುಲಾಂ ಮುಹಿಯುದ್ದೀನ್ ನಾಯ್ಕ್‌ ಪ್ರಶ್ನಿಸಿದರು. ನಾಯ್ಕ್‌ ಸಾರ್ವಜನಿಕ ಹಿತಾಸಕ್ತಿಯ ತನ್ನ ಚಟುವಟಿಕೆಗಳಿಗಾಗಿ ಬಂಧಿಸಲ್ಪಟ್ಟಿದ್ದಾರೆ ಎಂದು ಅವರ ಕುಟುಂಬವು ಪ್ರತಿಪಾದಿಸಿದೆ. ಇದಕ್ಕೆ ಪ್ರತಿಕ್ರಿಯಿಸಲು ಕುಲ್ಗಾಮ್ ಪೊಲೀಸರು ನಿರಾಕರಿಸಿದ್ದಾರೆ. ನಾಯ್ಕ್‌ ಕುಲ್ಗಾಮ್ ಜಿಲ್ಲೆಯ ಚಿದ್ದರ್ ಗ್ರಾಮದವರಾಗಿದ್ದು, ಇಡೀ ಗ್ರಾಮದಲ್ಲಿ ಅತ್ಯಂತ ಸುಶಿಕ್ಷಿತ ಕುಟುಂಬ ಅವರದ್ದಾಗಿದೆ. ನಾಯ್ಕ್‌ ಸೇರಿದಂತೆ ತನ್ನ ಎಲ್ಲ ಏಳೂ ಮಕ್ಕಳು ಅಲಿಗಡ ಮುಸ್ಲಿಂ ವಿವಿಯಲ್ಲಿ ಉನ್ನತ ವ್ಯಾಸಂಗವನ್ನು ಪೂರೈಸಿದ್ದಾರೆ ಎಂದು ಗುಲಾಂ ತಿಳಿಸಿದರು.

ಎರಡು ಪಿಎಚ್ಡಿ ಪದವಿಗಳನ್ನು ಪಡೆದಿರುವ ನಾಯ್ಕ ಸರಕಾರಿ ಉದ್ಯೋಗಕ್ಕೆ ಸೇರುವ ಮುನ್ನ 2014ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿಫಲ ಸ್ಪರ್ಧೆ ನಡೆಸಿದ್ದರು. ನಾಯ್ಕ್‌ ಅವರಿಗೆ ತನ್ನ ವಿರುದ್ಧ ಪೊಲೀಸರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ ಎನ್ನುವುದು 2019ರಲ್ಲಿ ಕುಲ್ಗಾಮ್ ಎಸ್ಪಿ ತನಗೆ ಶೋಕಾಸ್ ನೋಟಿಸ್ ಕಳಿಸಿದಾಗ ಮೊದಲ ಬಾರಿಗೆ ಗೊತ್ತಾಗಿತ್ತು. ಐಪಿಸಿ ಅಡಿ ಮಾನನಷ್ಟ,ಕ್ರಿಮಿನಲ್ ಬೆದರಿಕೆ,ಹಲ್ಲೆ ,ಸರಕಾರಿ ಉದ್ಯೋಗಿಯ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ ಆರೋಪಗಳ ಜೊತೆಗೆ ಯುಎಪಿಎ ಅಡಿಯೂ ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ. ನೋಟಿಸಿಗೆ ನೀಡಿದ್ದ ಉತ್ತರದಲ್ಲಿ ಅಬ್ದುಲ್‌ ಬಾರಿ ನಾಯ್ಕ್‌ ತನ್ನ ವಿರುದ್ಧ ಪೊಲೀಸರು ಮಾಡಿರುವ ಪ್ರತಿಯೊಂದು ಆರೋಪಕ್ಕೂ ವಿವರಣೆಯನ್ನು ನೀಡಿದ್ದರು.

2019ರಲ್ಲಿ ಅಬ್ದುಲ್‌ ಬಾರಿ ನಾಯ್ಕ್ ಮತ್ತು ಕುಲ್ಗಾಮ್ ಪೊಲೀಸರ ನಡುವಿನ ಅಧಿಕೃತ ಸಂವಹನವು ಅವರು 2018ರಿಂದಲೂ ತಲೆಮರೆಸಿಕೊಂಡಿದ್ದ ಆರೋಪಿಯಾಗಿದ್ದಾರೆ ಎಂಬ ಪೊಲೀಸರ ಹೇಳಿಕೆಯ ಪೊಳ್ಳುತನವನ್ನು ಬಟಾಬಯಲಾಗಿಸಿದೆ. ಅಬ್ದುಲ್‌ ಬಾರಿ ನಾಯ್ಕ್ ಅಮಾಯಕ ಎನ್ನುವುದಕ್ಕೆ ಬೇರೆ ಏನು ಸಾಕ್ಷಿ ಬೇಕು ಎಂದು ಗುಲಾಂ ನಾಯ್ಕ್ ಪ್ರಶ್ನಿಸಿದರು.

ನಾಯ್ಕ್ ಕ್ವಾರಂಟೈನ್ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಇಬ್ಬರು ಕೋವಿಡ್-19 ರೋಗಿಗಳು ಅಲ್ಲಿಂದ ತಪ್ಪಿಸಿಕೊಂಡಿದ್ದರು. ಅವರ ಪತ್ತೆಗೆ ನೆರವಾಗುವಂತೆ ಪೊಲೀಸರು ನಾಯ್ಕೆರನ್ನು ಕೋರಿದ್ದರು. ನಾಯ್ಕೆ ಈ ರೋಗಿಗಳನ್ನು ಪತ್ತೆ ಹಚ್ಚಲು ಸಹಾಯವನ್ನೂ ಮಾಡಿದ್ದರು. ನಾಯ್ಕೆ ತಲೆಮರೆಸಿಕೊಂಡ ಆರೋಪಿಯಾಗಿದ್ದರೆ ಪೊಲೀಸರು ಆಗಲೇ ಅವರನ್ನು ಬಂಧಿಸುತ್ತಿರಲಿಲ್ಲವೇ ಎಂದು ಸೋದರ,ಕಾಶ್ಮೀರ ವಿವಿಯಲ್ಲಿ ಬೋಧಕರಾಗಿರುವ ಅಬ್ದುಲ್ ಬಾಸಿತ್ ಪ್ರಶ್ನಿಸಿದರು.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News