ರಮೇಶ್ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯಬೇಕು ಅನಿಸುತ್ತಿದೆ: ಸಂತ್ರಸ್ತೆಯದ್ದೆನ್ನಲಾದ 4ನೇ ವೀಡಿಯೊ ಬಿಡುಗಡೆ
ಬೆಂಗಳೂರು, ಮಾ.27: ಕಳೆದ 25 ದಿನಗಳಿಂದ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಅಶ್ಲೀಲ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಯುವತಿಯದ್ದೆನ್ನಲಾದ ನಾಲ್ಕನೇ ವಿಡಿಯೊವೊಂದು ಶನಿವಾರ ಬೆಳಗ್ಗೆ ಬಿಡುಗಡೆಯಾಗಿದ್ದು, ‘ರಮೇಶ ಜಾರಕಿಹೊಳಿ ಹೆಸರು ಬರೆದಿಟ್ಟು ಸಾಯುವಷ್ಟು ನನಗೆ ಕಿರುಕುಳವಾಗುತ್ತಿದೆ’ ಎಂದಿದ್ದಾರೆ.
‘ಮಾರ್ಚ್ 2ರಂದು ಸಿ.ಡಿ. ಹೊರಗೆ ಬರುತ್ತಿದ್ದಂತೆ, ನನಗೆ ಏನು ಮಾಡಬೇಕು ಎಂಬುದು ತಿಳಿಯಲಿಲ್ಲ. ಕೂಡಲೇ ಸುದ್ದಿವಾಹಿನಿಯಲ್ಲಿದ್ದ ನರೇಶ್ ಅಣ್ಣನನ್ನು ಸಂಪರ್ಕಿಸಿದೆ. ಅವರು, ಇದಕ್ಕೆಲ್ಲ ರಾಜಕೀಯ ಬೆಂಬಲ ಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡೋಣ’ ಎಂದಿದ್ದರು. ಈ ನಡುವೆ ‘ಮನೆಯಿಂದಲೂ ನಿರಂತರವಾಗಿ ಕರೆಗಳು ಬರುತ್ತಿದ್ದವು. ಅವರೆಲ್ಲ ಭಯಗೊಂಡಿದ್ದರು. ಅವರನ್ನು ಸಮಾಧಾನ ಮಾಡಿದ್ದೆ. ಬಳಿಕ ಡಿ.ಕೆ.ಶಿವಕುಮಾರ್ ಭೇಟಿಯಾಗಲು ಆಗಲು ಹೋದರೂ ಅದು ಸಾಧ್ಯವಾಗಿಲ್ಲ. ವಾಪಸು ಬಂದೆ ಎಂದೂ ಯುವತಿ ವೀಡಿಯೊದಲ್ಲಿ ತಿಳಿಸಿದ್ದಾರೆ.
‘ತಂದೆ-ತಾಯಿ, ಸಹೋದರನ ಮೊಬೈಲ್ ಸಂಭಾಷಣೆ ಎಲ್ಲೆಡೆ ಹರಿದಾಡುತ್ತಿದೆ. ಇದೆಲ್ಲ ಅವರಿಗೆ ಎಲ್ಲಿ ಸಿಕ್ಕಿತು ಅಂತ ಗೊತ್ತಿಲ್ಲ. ಇದನ್ನೆಲ್ಲ ನೋಡ್ತಾ ಇದ್ದಾರೆ ನನ್ನ ಅಪ್ಪ-ಅಮ್ಮನಿಗೆ ಒಂದಿಷ್ಟು ರಕ್ಷಣೆ ಇಲ್ಲ ಅನಿಸುತ್ತಿದೆ. ಅವರು ಸದ್ಯ ಎಲ್ಲಿ ಇದ್ದಾರೆ ಅಂತ ಗೊತ್ತಿಲ್ಲ. ದಯವಿಟ್ಟು ಅವರನ್ನು ಪೊಲೀಸರು ರಕ್ಷಿಸಬೇಕು. ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ಸುರಕ್ಷಿತವಾಗಿದ್ದೇನೆ. ಅಮ್ಮ-ಅಪ್ಪ, ಇಬ್ಬರೂ ಸಹೋದರರನ್ನು ಬೆಂಗಳೂರಿಗೆ ಕರೆತಂದು ಭದ್ರತೆ ನೀಡಬೇಕು. ನಾನೇ ಏನೇ ಹೇಳಿಕೆ ನೀಡುವುದಿದ್ದರೂ ನನ್ನ ಅಪ್ಪ-ಅಮ್ಮ, ಇಬ್ಬರು ತಮ್ಮಂದಿರು ಹಾಗೂ ಅಜ್ಜಿ ನನ್ನ ಕಣ್ಣ ಮುಂದೆ ಇದ್ದರೆ ಮಾತ್ರ’ ಎಂದೂ ತಿಳಿಸಿದ್ದಾರೆ.
‘ಟಿ.ವಿ.ಯವರು ಯಾವುದೇ ಸುದ್ದಿ ಮಾಡಿದರೂ, ಅದು ನಿಜವೂ ಸುಳ್ಳೂ ಎಂದು ತಿಳಿದುಕೊಂಡು ಮಾಡಬೇಕು. ಇಲ್ಲಸಲ್ಲದ ಸುದ್ದಿ ಹಾಗೂ ಏನು ಮಾಡಲು ಹೋಗಿ ಇನ್ನೇನು ಆಗುತ್ತಿದೆ. ಇದರಿಂದ ತುಂಬಾ ಕಿರುಕುಳವಾಗುತ್ತಿದೆ’ ಎಂದೂ ಯುವತಿ ಹೇಳಿದ್ದಾರೆ.
ಒಂದೇ ದಿನದಲ್ಲಿ ಸರಕಾರ ಉರುಳಿಸಬಲ್ಲೆ, ಎಷ್ಟೇ ದುಡ್ಡು ಖರ್ಚಾದರೆ ಎಲ್ಲರನ್ನೂ ಜೈಲಿಗೆ ಕಳುಹಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳ್ತಾ ಇದ್ದಾರೆ. ಎಷ್ಟು ದುಡ್ಡು ಖರ್ಚಾದರೂ ಪರವಾಗಿಲ್ಲ ಅಂದ್ರೆ ಏನಿದರ ಅರ್ಥ? ಅವರು ನನ್ನ ಅಪ್ಪ-ಅಮ್ಮ ಅಥವಾ ನನ್ನನ್ನು ಸಾಯಿಸಬಹುದು ಎಂದು ಯುವತಿ ವೀಡಿಯೊದಲ್ಲಿ ಆತಂಕ ವ್ಯಕ್ತಪಡಿಸಿದ್ದಾಳೆ.