×
Ad

ಸವರ್ಣೀಯರ ಕಿರುಕುಳ, ಪೊಲೀಸರ ನಿರ್ಲಕ್ಷ್ಯ ಆರೋಪ; ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಲಿತ ಕುಟುಂಬ

Update: 2021-03-27 21:26 IST

ಬೆಂಗಳೂರು, ಮಾ. 27: ಕ್ಷುಲ್ಲಕ ಕಾರಣಕ್ಕೆ ದಲಿತ(ಮಾದಿಗ) ಸಮುದಾಯದ ಕುಟುಂಬವೊಂದರ ಮೇಲೆ ಹಲ್ಲೆ ನಡೆಸಿ, ಅವರ ವಿರುದ್ಧವೇ ಪೊಲೀಸ್ ಠಾಣೆಗೆ ದೂರು ನೀಡಿದ ಮೇಲ್ಜಾತಿಯವರ ಕಿರುಕುಳ ಹಾಗೂ ಪೊಲೀಸರ ನಿರ್ಲಕ್ಷದಿಂದ ಬೇಸತ್ತ ದಲಿತ ಕುಟುಂಬವೊಂದು ವಿಷ ಸೇವಿಸಿ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ ಘಟನೆ ಇಲ್ಲಿನ ಕಾಡುಗೊಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಸಂದ್ರದಲ್ಲಿ ನಡೆದಿದೆ.

ಮಹದೇವಪುರ, ಚನ್ನಸಂದ್ರ ಗ್ರಾಮದ ಎ.ಕೆ.ಗೋಪಾಲಶೆಟ್ಟಿ ಬಡಾವಣೆಯಲ್ಲಿ ಶ್ರೀನಿವಾಸ್ ಕುಟುಂಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಶ್ರೀನಿವಾಸ್(51) ಹಾಗೂ ಅವರ ಪತ್ನಿ ರಾಧಾ, ಪುತ್ರಿ ದೀಪಿಕಾ ಅವರು ತೀವ್ರವಾಗಿ ಅಸ್ವಸ್ಥರಾಗಿದ್ದು, ಹೊಸಕೋಟೆಯಲ್ಲಿರುವ ಎಂವಿಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

ಘಟನೆ ವಿವರ: ಇಲ್ಲಿನ ಕಾಡುಗೊಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವೈಟ್‍ಫೀಲ್ಡ್ ಚನ್ನಸಂದ್ರದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಶ್ರೀನಿವಾಸ ಕುಟುಂಬ ವಾಸವಾಗಿದ್ದು, ಎರಡು ದಿನಗಳ ಹಿಂದೆ ಅವರ ನಾಯಿ ತಿಗಳ ಸಮುದಾಯದ ಬೀದಿಯಲ್ಲಿನ ಭಾಗ್ಯ ಎಂಬವರ ಮನೆ ಬಳಿಗೆ ಹೋಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗಿದ್ದು, ದೀಪಿಕಾ ಮತ್ತು ಅವರ ಪುತ್ರ ಲಲಿತ್ ಕುಮಾರ್(13) ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಆ ಬಳಿಕ ಹಲ್ಲೆಗೊಳಗಾದ ಲಲಿತ್ ಕುಮಾರ್, ಆತನ ತಾಯಿ ದೀಪಿಕಾ ಸಹಿತ ನಾಲ್ಕೈದು ಮಂದಿ ವಿರುದ್ಧ ಕಾಡುಗೊಡಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ನಂತರ ದೀಪಿಕಾ ಅವರು ಕಾಡುಗೊಡಿ ಪೊಲೀಸ್ ಠಾಣೆಗೆ ದೂರು ನೀಡಲು ತೆರಳಿದ್ದು, ಪೊಲೀಸರು ದೂರು ಪಡೆದಿಲ್ಲ ಎಂದು ಆರೋಪಿಸಲಾಗಿದೆ.

ಮೇಲ್ಜಾತಿಯವರ ಹಲ್ಲೆ, ಕಿರುಕುಳ ಹಾಗೂ ಬೆದರಿಕೆ, ಮತ್ತೊಂದು ಕಡೆ ಪೊಲೀಸರ ನಿರ್ಲಕ್ಷ್ಯ ಆರೋಪಿಸಿ ಶ್ರೀನಿವಾಸ್, ರಾಧಾ ಮತ್ತು ದೀಪಿಕಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ನಡೆಸಿ, ಅದರ ವಿಡಿಯೋ ಮಾಡಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಾದಿಗರಾಗಿ ಹುಟ್ಟಿದ್ದು ತಪ್ಪೇ: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸುವ ಮೂಲಕ ದೀಪಿಕಾ, ರಾಧಾ ಹಾಗೂ ಶ್ರೀನಿವಾಸ್ ಅವರು, ‘ನಾವು ಈ ಭೂಮಿಯ ಮೇಲೆ ಮಾದಿಗ ಸಮುದಾಯದಲ್ಲಿ ಹುಟ್ಟಿದ್ದೇ ತಪ್ಪೇ. ನಮಗೇಕೆ ಈ ಕಿರುಕುಳ, ನಮ್ಮನ್ನು ಕಾಪಾಡುವವರು, ನ್ಯಾಯ ಕೊಡಿಸುವವರು ಯಾರೂ ಇಲ್ಲವೇ? ನಾವು ಸತ್ತ ಮೇಲಾದರೂ ನಮಗೆ ನ್ಯಾಯ ಸಿಗಲಿ' ಎಂದು ಅಳಲು ತೋಡಿಕೊಂಡಿರುವ ದೃಶ್ಯಗಳು ವಿಡಿಯೋದಲ್ಲಿದೆ.

ಅಲ್ಲದೆ, ಮೂರು ಮಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ವಾಂತಿ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆ ಬಳಿಕ ಅಕ್ಕಪಕ್ಕದ ನಿವಾಸಿಗಳು ಹಾಗೂ ಅವರ ಕುಟುಂಬದ ಉಳಿದ ಸದಸ್ಯರು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಗೊತ್ತಾಗಿದೆ. ಆತ್ಮಹತ್ಯೆ ಯತ್ನದ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ದಲಿತ ಕುಟುಂಬದ ದೂರು ಸ್ವೀಕರಿಸಿದ್ದಾರೆಂದು ಗೊತ್ತಾಗಿದೆ.

ರಕ್ಷಣೆಗೆ ಮನವಿ

‘ಚನ್ನಸಂದ್ರ ಎ.ಕೆ.ಗೋಪಾಲಶೆಟ್ಟಿ ಕಾಲನಿ ನಿವಾಸಿಗಳಾದ ದಲಿತ ಸಮುದಾಯದ ಮೇಲೆ ಮೇಲ್ಜಾತಿಯವರು ಹಲ್ಲೆ ನಡೆಸಿದ್ದು, ಇದರಿಂದ ಬೇಸತ್ತ ಕುಟುಂಬ ಆತ್ಮಹತ್ಯೆಗೆ ಯತ್ನಿಸಿದ ವಿಡಿಯೋ ಗಮನಿಸಿದ್ದೇವೆ. ಆ ಹಿನ್ನೆಲೆಯಲ್ಲಿ ವೈಟ್‍ಫೀಲ್ಡ್ ಡಿಸಿಪಿ ದೇವರಾಜ್ ಹಾಗೂ ಜಿಲ್ಲಾಧಿಕಾರಿಗೆ ಕೂಡಲೇ ದಲಿತ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಬೇಕು. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ'

-ಎಚ್.ವೆಂಕಟೇಶ ದೊಡ್ಡೇರಿ, ಸದಸ್ಯರು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆಯೋಗ ಕರ್ನಾಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News