ಈ ಐದು ಮುಖ್ಯ ಕೆಲಸಗಳನ್ನು ಮಾ.31ರೊಳಗೆ ಮುಗಿಸಿಕೊಳ್ಳಿ

Update: 2021-03-27 18:41 GMT

2020-21ನೇ ಹಣಕಾಸು ವರ್ಷ ಸದ್ಯವೇ ಅಂತ್ಯಗೊಳ್ಳಲಿದೆ. ಈ ವೇಳೆಗಾಗಲೇ ನೀವು ನಿರ್ದಿಷ್ಟ ಹಣಕಾಸು ಸಾಧನಗಳಲ್ಲಿ ನಿಮ್ಮ ಎಲ್ಲ ತೆರಿಗೆ ಉಳಿತಾಯ ಹೂಡಿಕೆಗಳು ಮತ್ತು ಖರ್ಚುಗಳ ಬಗ್ಗೆ ಕಾಳಜಿ ವಹಿಸಿರಬೇಕು. ಆದರೆ 2021,ಮಾ.31ರೊಳಗೆ ನೀವು ಪೂರ್ಣಗೊಳಿಸಬೇಕಾದ ಕೆಲವು ಇತರ ಹೂಡಿಕೆ ಮತ್ತು ತೆರಿಗೆ ಸಂಬಂಧಿತ ಕೆಲಸಗಳೂ ಇವೆ. ಈ ಹಣಕಾಸು ವರ್ಷದಲ್ಲಿ ನೀವು ಮಾಡದೆ ಉಳಿದಿರಬಹುದಾದ ಇಂತಹ ಕೆಲವು ಕೆಲಸಗಳ ಬಗ್ಗೆ ಮಾಹಿತಿಯಿಲ್ಲಿದೆ.....

ವಿಳಂಬಿತ ಐಟಿಆರ್ ಸಲ್ಲಿಕೆ

 2019-20ನೇ ಹಣಕಾಸು ವರ್ಷಕ್ಕಾಗಿ ಅಥವಾ 2020-21ನೇ ಅಸೆಸ್‌ಮೆಂಟ್ ವರ್ಷಕ್ಕಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಕೊನೆಯ ಘಳಿಗೆಯಲ್ಲಿ ಸಲ್ಲಿಸಲು ನೀವು ಕಾಯುತ್ತಿದ್ದರೆ ಆ ಕೆಲಸವನ್ನು ಮಾಡಲು ಇದು ಸಕಾಲವಾಗಿದೆ. ವಿಳಂಬಿತ ಐಟಿಆರ್‌ನ್ನು 10,000 ರೂ.ದಂಡದೊಡನೆ ಸಲ್ಲಿಸಲು ನಿಮಗೆ 2021,ಮಾ.31ರವರೆಗೆ ಅವಕಾಶವಿದೆ.

ಫಾರ್ಮ್ 12ಬಿ

2020-21ನೇ ಹಣಕಾಸು ವರ್ಷದಲ್ಲಿ ನೀವು ಉದ್ಯೋಗವನ್ನು ಬದಲಿಸಿದ್ದರೆ ನಿಮ್ಮ ಹೊಸ ಉದ್ಯೋಗದಾತರಿಗೆ ಫಾರ್ಮ್ 12 ಬಿ ಅನ್ನು ಸಲ್ಲಿಸಿದ್ದೀರಿ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಹಿಂದೆ ನೀವು ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ನೀವು ತೆರಿಗೆ ಉಳಿತಾಯದ ಉದ್ದೇಶಕ್ಕಾಗಿ ಆದಾಯ ಘೋಷಣೆಯನ್ನು ಸಲ್ಲಿಸಿದ್ದಿರಬಹುದು ಮತ್ತು ಇದಕ್ಕನುಗುಣವಾಗಿ ನಿಮ್ಮ ಉದ್ಯೋಗದಾತರು ತೆರಿಗೆಗಳನ್ನು ಕಡಿತಗೊಳಿಸಿರುತ್ತಾರೆ.

ಫಾರ್ಮ್ 12 ಬಿ ಎನ್ನುವುದು ನಿಮ್ಮ ಹಿಂದಿನ ಸಂಸ್ಥೆಯಲ್ಲಿನ ಆದಾಯ ಮತ್ತು ಕಡಿತಗೊಂಡ ತೆರಿಗೆಗಳ ವಿವರಗಳನ್ನು ನಿಮ್ಮ ಹೊಸ ಉದ್ಯೋಗದಾತರಿಗೆ ಒದಗಿಸುವ ಹೇಳಿಕೆಯಾಗಿದೆ. ಈ ಫಾರ್ಮ್‌ನಲ್ಲಿ ಒದಗಿಸಲಾದ ಮಾಹಿತಿಗಳನ್ನು ಆಧರಿಸಿ ಉದ್ಯೋಗದಾತರು ತಮ್ಮ ಉದ್ಯೋಗಿಗಳಿಗೆ ಫಾರ್ಮ್ 16ನ್ನು ವಿತರಿಸುತ್ತಾರೆ. ಫಾರ್ಮ್ 12 ಬಿ ಅನ್ನು ಸಲ್ಲಿಸದಿದ್ದರೆ ಉದ್ಯೋಗಿಗೆ ತೆರಿಗೆ ಹೊರೆಯು ಹೆಚ್ಚುತ್ತದೆ.

ಕನಿಷ್ಠ ಹೂಡಿಕೆಗಳು ಪಿಪಿಎಫ್,ಎನ್‌ಪಿಎಸ್‌ನಂತಹ ಕೆಲವು ಹೂಡಿಕೆಗಳನ್ನು ಸಕ್ರಿಯವಾಗಿರಿಸಲು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ ಮೊತ್ತವೊಂದನ್ನು ಖಾತೆಗಳಿಗೆ ಜಮಾ ಮಾಡುವುದು ಅಗತ್ಯವಾಗುತ್ತದೆ. ಇಲ್ಲದಿದ್ದರೆ ಇಂತಹ ಖಾತೆಗಳು ನಿಷ್ಕ್ರಿಯಗೊಳ್ಳುತ್ತವೆ ಮತ್ತು ಅವುಗಳಲ್ಲಿ ಹೊಸ ಹೂಡಿಕೆಗಳನ್ನು ಮಾಡುವ ಮುನ್ನ ಅವುಗಳನ್ನು ಕ್ರಮಬದ್ಧ ಅಥವಾ ಸಕ್ರಿಯಗೊಳಿಸಬೇಕಾಗುತ್ತದೆ. ಹೀಗೆ ಮರುಸಕ್ರಿಯಗೊಳಿಸುವ ಪ್ರಕ್ರಿಯೆಯು ಸಮಯವನ್ನು ತೆಗೆದುಕೊಳ್ಳಬಹುದು ಮತ್ತು ದಂಡವನ್ನೂ ಪಾವತಿಸಬೇಕಾಗಬಹುದು. ಇದನ್ನು ತಪ್ಪಿಸಲು ಹಣಕಾಸು ವರ್ಷ ಅಂತ್ಯಗೊಳ್ಳುವ ಮುನ್ನ ಕನಿಷ್ಠ ಮೊತ್ತವನ್ನು ಹೂಡಿಕೆಗಳ ಖಾತೆಗಳಲ್ಲಿ ಜಮಾ ಮಾಡಬೇಕು.

ಫಾರ್ಮ್ 15ಜಿ/ಫಾರ್ಮ್‌ಎಚ್

ನೀವು ಬ್ಯಾಂಕುಗಳಲ್ಲಿ ನಿರಖು ಠೇವಣಿಗಳನ್ನು ಹೊಂದಿದ್ದರೆ ಹಣಕಾಸು ವರ್ಷದಲ್ಲಿ ನೀವು ಗಳಿಸುವ ಬಡ್ಡಿ ಆದಾಯ 40,000 ರೂ.ಗಿಂತ ಹೆಚ್ಚಿದ್ದರೆ (ಹಿರಿಯ ನಾಗರಿಕರಿಗೆ 50,000 ರೂ.) ಅದು ಮೂಲದಲ್ಲಿ ತೆರಿಗೆ ಕಡಿತ (ಟಿಡಿಎಸ್)ಕ್ಕೆ ಒಳಪಡುತ್ತದೆ. ಆದರೆ ನೀವು ಬ್ಯಾಂಕಿಗೆ ಫಾರ್ಮ್ 15ಜಿ/ಫಾರ್ಮ್ 15ಎಚ್ ಅನ್ನು ಸಲ್ಲಿಸಿದ್ದರೆ ನಿಮ್ಮ ಆದಾಯದ ಮೇಲೆ ಯಾವುದೇ ಟಿಡಿಎಸ್ ಮಾಡಲಾಗುವುದಿಲ್ಲ. ಈ ಫಾರ್ಮ್‌ಗಳನ್ನು ಮಾ.31ರೊಳಗೆ ನಿಮ್ಮ ಬ್ಯಾಂಕುಗಳಿಗೆ ಸಲ್ಲಿಸಲು ಮರೆಯಬೇಡಿ. ಫಾರ್ಮ್ 15ಎಚ್ 60 ವರ್ಷ ಅಥವಾ ಅದಕ್ಕೆ ಮೇಲ್ಪಟ್ಟ ಪ್ರಾಯದ ವ್ಯಕ್ತಿಗಳಿಗಾಗಿದ್ದರೆ,ಫಾರ್ಮ್15ಜಿ ಆದಾಯ ತೆರಿಗೆ ಅನ್ವಯವಾಗದ ಮೊತ್ತವನ್ನು ಮೀರದ ಒಟ್ಟು ಆದಾಯವನ್ನು ಹೊಂದಿದ ಇತರ ವ್ಯಕ್ತಿಗಳಿಗಾಗಿದೆ. ನೀವು ಈ ಫಾರ್ಮ್‌ಗಳನ್ನು ಹಣಕಾಸು ವರ್ಷದ ಆರಂಭದಲ್ಲಿಯೇ ಸಲ್ಲಿಸಿದ್ದರೆ ಮುಂದಿನ ಹಣಕಾಸು ವರ್ಷದ ಆರಂಭದಲ್ಲಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಲು ಮರೆಯಬೇಡಿ.

ಹೂಡಿಕೆಗೆ ಪುರಾವೆಗಳು

ಎಲ್ಲ ತೆರಿಗೆ ಉಳಿತಾಯಗಳ ಬಗ್ಗೆ ನೀವೀಗಾಗಲೇ ಕಾಳಜಿಯನ್ನು ವಹಿಸಿದ್ದರೆ ಎಲ್ಲ ದಾಖಲೆಗಳನ್ನು ನಿಮ್ಮ ಉದ್ಯೋಗದಾತರಿಗೆ ಸಲ್ಲಿಸಿ. ಹೆಚ್ಚಿನ ಉದ್ಯೋಗದಾತರು ಇಂತಹ ಪುರಾವೆಗಳನ್ನು ಜನವರಿ ಅಥವಾ ಫೆಬ್ರವರಿಯಲ್ಲಿಯೇ ಕೇಳುತ್ತಾರೆ ಮತ್ತು ಅದರ ಬಳಿಕ ಅವುಗಳನ್ನು ಸ್ವೀಕರಿಸದಿದ್ದರೆ ಮುಂದಿನ ಹಣಕಾಸು ವರ್ಷದಲ್ಲಿ ಐಟಿಆರ್ ಸಲ್ಲಿಸುವಾಗ ನಿಮ್ಮ ತೆರಿಗೆ ಮರುಪಾವತಿಯನ್ನು ಕೋರಲು ಅವುಗಳನ್ನು ಬಳಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News