ಕಿವಿಗಳಲ್ಲಿ ತುರಿಕೆ ಅಥವಾ ನೋವು ಇದೆಯೇ? ನೀವು ಈ ಕಿವಿಸೋಂಕುಗಳಿಗೆ ತುತ್ತಾಗಿರಬಹುದು

Update: 2021-03-28 15:59 GMT

 ನಮ್ಮ ಇಡೀ ಶರೀರವು ಒಂದು ಸಂಕೀರ್ಣ ಯಂತ್ರವಾಗಿದ್ದು,ಅದರ ಪ್ರತಿಯೊಂದು ಭಾಗ,ಸ್ನಾಯು ಮತ್ತು ಅಂಗಾಂಶ ಸರಿಯಾಗಿ ಕಾರ್ಯ ನಿರ್ವಹಿಸುವುದು ಅಗತ್ಯವಾಗಿದೆ. ಕಣ್ಣುಗಳು,ಕಿವಿಗಳು,ಮೂಗು,ನಾಲಿಗೆ ಮತ್ತು ತ್ವಚೆ ಇವು ನಮ್ಮ ಪಂಚೇಂದ್ರಿಯಗಳಾಗಿದ್ದು,ಇವು ಪ್ರತಿ ಮಾನವ ಜೀವಿಗೂ ಅತ್ಯಂತ ಮುಖ್ಯವಾಗಿವೆ. ಇವುಗಳಲ್ಲಿ ಯಾವುದೇ ಒಂದರಲ್ಲಿ ಸೋಂಕು ಅಥವಾ ಸಮಸ್ಯೆಯುಂಟಾದರೆ ಅದು ನಮ್ಮ ಆರೋಗ್ಯಕ್ಕೆ ಗಂಭೀರ ಬೆದರಿಕೆಯನ್ನೊಡ್ಡುತ್ತದೆ.

ಕಿವಿಯ ಸೋಂಕುಗಳು ಮುಖ್ಯವಾಗಿ ಶಿಲೀಂಧ್ರದಿಂದ ಉಂಟಾಗುತ್ತವೆ. ಸೂಕ್ತ ಮುಂಜಾಗ್ರತೆಗಳನ್ನು ವಹಿಸದಿದ್ದರೆ ಕಿವಿಸೋಂಕು ಯಾರಿಗೂ ಬರಬಹುದು. ಶಿಲೀಂಧ್ರ ಸೋಂಕುಗಳು ಕಿವಿಯಲ್ಲಿನ ಮೇಣ ಅಥವಾ ಗುಗ್ಗೆಯಿಂದ ಉಂಟಾಗುವುದರಿಂದ ಸಾಮಾನ್ಯವಾಗಿವೆ. ಕಿವಿಯಲ್ಲಿನ ಗುಗ್ಗೆಯು ತೆಳುವಾದ ಪದರದ ರೂಪದಲ್ಲಿ ಶಿಲೀಂಧ್ರ ಸೃಷ್ಟಿಯಾಗುವುದನ್ನು ತಡೆಯುವ ಮೂಲಕ ಕಿವಿಗಳಿಗೆ ರಕ್ಷಣೆಯನ್ನು ನೀಡುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಜನರು ಇದನ್ನು ತ್ಯಾಜ್ಯವೆಂದು ಪರಿಗಣಿಸಿ ಈ ಪದರವನ್ನು ಇಯರ್ ಬಡ್‌ಗಳನ್ನು ಬಳಸಿ ಅಥವಾ ಇತರ ವಿಧಾನಗಳಿಂದ ಹೊರತೆಗೆಯುತ್ತಾರೆ. ಇದು ಸೋಂಕಿಗೆ ಕಾರಣವಾಗುತ್ತದೆ ಮತ್ತು ಕಿವಿಯೊಳಗೆ ಬೆಳೆಯುವ ಶಿಲೀಂಧ್ರವು ಸಮಸ್ಯೆಗಳನ್ನುಂಟು ಮಾಡುತ್ತದೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಒಟೊಮೈಕೊಸಿಸ್ ಎಂದು ಕರೆಯಲಾಗುತ್ತದೆ. ಹಲವಾರು ಸಂಭಾವ್ಯ ಕಾರಣಗಳಿಂದಾಗಿ ಸೋಂಕುಗಳು ಸಾಮಾನ್ಯವಾಗಿ ಹೊರಕಿವಿ ಮತ್ತು ಮಧ್ಯಕಿವಿಯಲ್ಲಿ ಉಂಟಾಗುತ್ತವೆ. ಸೂಕ್ತ ಗಮನವನ್ನು ಹರಿಸದಿದ್ದರೆ ಅದು ದೀರ್ಘಕಾಲಿಕ ಸಮಸ್ಯೆಯಾಗಬಹುದು.

ಮಧ್ಯಕಿವಿ ಸೋಂಕು:ಈ ವಿಧದ ಕಿವಿ ಸೋಂಕು ಉಸಿರಾಟ ಸಮಸ್ಯೆಗಳು ಅಥವಾ ಶೀತದಿಂದ ಉಂಟಾಗುತ್ತದೆ. ಪ್ರಾಥಮಿಕವಾಗಿ ಸೋಂಕು ಯುಸ್ಟೇಷಿಯನ್ ಟ್ಯೂಬ್ ಎಂದು ಕರೆಯಲಾಗುವ ಕೊಳವೆಯ ಮೂಲಕ ಕಿವಿಯನ್ನು ತಲುಪುತ್ತದೆ. ಈ ಕೊಳವೆಯು ಕಿವಿಯಲ್ಲಿನ ಒತ್ತಡವನ್ನು ನಿಯಂತ್ರಿಸುವ ಕೆಲಸವನ್ನು ಮಾಡುತ್ತದೆ. ಮಧ್ಯಕಿವಿಯಲ್ಲಿ ಸೋಂಕು ಈ ಕೊಳವೆಯಲ್ಲಿ ಕೆರಳುವಿಕೆಯನ್ನುಂಟು ಮಾಡುತ್ತದೆ ಮತ್ತು ಇದು ಊತಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಕಿವಿಯಲ್ಲಿನ ಕಾಲುವೆಯಲ್ಲಿ ತಡೆಯುಂಟಾಗುತ್ತದೆ ಮತ್ತು ಕಿವಿಯ ತಮಟೆಯಲ್ಲಿ ದ್ರವವು ಸಂಗ್ರಹಗೊಳ್ಳುತ್ತದೆ ಹಾಗೂ ಇದು ಸೋಂಕನ್ನುಂಟು ಮಾಡುತ್ತದೆ.

ಹೊರಕಿವಿ ಸೋಂಕು: ಹೊರಕಿವಿಯ ಸೋಂಕು ಬರಿಗಣ್ಣಿಗೆ ಗೋಚರಿಸುವುದರಿಂದ ಇದನ್ನು ಪತ್ತೆ ಹಚ್ಚುವುದು ಸುಲಭವಾಗಿದೆ. ಪಿನ್ನಾ ಎಂದು ಕರೆಯಲಾಗುವ ನಮ್ಮ ಕಿವಿಯ ಹೊರಭಾಗದಲ್ಲಿ ಸಾಮಾನ್ಯವಾಗಿ ಸೋಂಕುಗಳು ಉಂಟಾಗುತ್ತವೆ. ಕೀಟಗಳ ಕಡಿತ, ಚುಚ್ಚುವಿಕೆ, ಹೊಡೆದಾಟದ ವೇಳೆ ಗಾಯಗಳು ಈ ಸೋಂಕಿಗೆ ಕಾರಣವಾಗುತ್ತವೆ.

 ಸ್ವಿಮ್ಮರ್ಸ್ ಇಯರ್: ಇದು ಸಾಮಾನ್ಯವಾದ ಸೋಂಕು ಆಗಿದ್ದು,ನೀರು ನಮ್ಮ ಕಿವಿಯ ಒಳಗಾಲುವೆಯಲ್ಲಿ ಸಿಕ್ಕಿಕೊಂಡಾಗ ಉಂಟಾಗುತ್ತದೆ. ಸ್ನಾನ ಮಾಡಿದಾಗ ಅಥವಾ ಈಜಿದ ಬಳಿಕ ನಾವು ಕಿವಿಯನ್ನು ಚೆನ್ನಾಗಿ ಒರೆಸಿಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಗುಗ್ಗೆಯ ಹಿಂದಿನ ಒಳಕಾಲುವೆಯಲ್ಲಿ ನೀರು ಸಿಕ್ಕಿಕೊಳ್ಳುತ್ತದೆ. ಇದು ಆ ಜಾಗದಲ್ಲಿ ನೋವನ್ನುಂಟು ಮಾಡುತ್ತದೆ. ಕಿವಿಯು ಊದಿಕೊಳ್ಳುತ್ತದೆ ಮತ್ತು ಕೆಟ್ಟ ವಾಸನೆ ಬೀರುವ ಹಳದಿ ಬಣ್ಣದ ದ್ರವ ಹೊರಬರಬಹುದು.

ಶಿಲೀಂಧ್ರ ಸೋಂಕು: ಫಂಗಲ್ ಒಟಿಟಿಸ್ ಎಕ್ಸ್‌ಟರ್ನಾ,ಒಟೊಮೈಕೊಸಿಸ್ ಮತ್ತು ಮೈಕೊಟಿಕ್ ಒಟಿಟಿಸ್ ಎಕ್ಸ್‌ಟರ್ನಾ ಇವು ಮೂರು ಪ್ರಮುಖ ವಿಧಗಳ ಶಿಲೀಂಧ್ರ ಸೋಂಕುಗಳಾಗಿವೆ.

 ಒಳಗಿವಿ ಸೋಂಕು:ಇದು ತಪ್ಪು ಆರೋಗ್ಯರಕ್ಷಣೆ ಕ್ರಮಗಳಿಂದ ಉಂಟಾಗುವುದರಿಂದ ಅತ್ಯಂತ ಭೀತಿಕಾರಕ ಸೋಂಕು ವಿಧವಾಗಿದೆ. ಏಕೆಂದರೆ ಒಳಗಿವಿಯು ಮಿದುಳಿನ ತೀರ ಸಮೀಪದಲ್ಲಿರುತ್ತದೆ ಮತ್ತು ಸಂವಹನ ಉಂಟಾಗಲು ಅಗತ್ಯ ದ್ರವವನ್ನು ಒಳಗೊಂಡಿರುತ್ತದೆ. ಹೀಗಾಗಿ ಈ ಜಾಗದಲ್ಲಿ ಉರಿಯೂತ ಅಥವಾ ಸೋಂಕು ಸಮತೋಲನ ನಷ್ಟ,ವಾಕರಿಕೆ,ವಾಂತಿ,ಅಷ್ಟೇ ಏಕೆ ಶಾಶ್ವತ ಶ್ರವಣ ಶಕ್ತಿ ನಷ್ಟಕ್ಕೂ ಸಹ ಕಾರಣವಾಗಬಲ್ಲದು. ಓಳಗಿವಿಯ ಸೋಂಕುಗಳು ಹೆಚ್ಚಾಗಿ ಬ್ಯಾಕ್ಟೀರಿಯಾಗಳಿಗಿಂತ ವೈರಸ್ ರೂಪದಲ್ಲಿರುತ್ತವೆ.

ಕಿವಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು,ಸ್ನಾನದ ಬಳಿಕ ಅವುಗಳನ್ನು ಚೆನ್ನಾಗಿ ಒಣಗಿಸುವುದು,ಧೂಮ್ರಪಾನ ವರ್ಜನೆ ಮತ್ತು ಧೂಮ್ರಪಾನಿಗಳಿಂದ ದೂರವಿರುವುದು ಇತ್ಯಾದಿ ಮುಂಜಾಗ್ರತೆಗನ್ನು ವಹಿಸುವ ಮೂಲಕ ಕಿವಿಸೋಂಕುಗಳನ್ನು ತಡೆಯಬಹುದು.

* ಪುರು ಬನ್ಸಾಲ್

* ಪೂರಕ ಮಾಹಿತಿ

ಡಾ.ಎಚ್.ಕೆ.ಶರ್ಮಾ

ಕೃಪೆ:ಕೃಪೆ: Onlymyhealth

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News