ನಾಯಕನಾಗಿ 200ನೇ ಅಂತರ್‌ರಾಷ್ಟ್ರೀಯ ಪಂದ್ಯ ಪೂರೈಸಿದ ವಿರಾಟ್

Update: 2021-03-29 03:54 GMT

 ಪುಣೆ: ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುವ ಮೂಲಕ 200 ನೇ ಅಂತರ್‌ರಾಷ್ಟ್ರೀಯ ಪಂದದಲ್ಲಿ ಭಾರತವನ್ನು ಮುನ್ನಡೆಸಿದ ದಾಖಲೆ ಬರೆದಿದ್ದಾರೆ.

 ಮಹೇಂದ್ರ ಸಿಂಗ್ ಧೋನಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಬಲಗೈ ಬ್ಯಾಟ್ಸ್ ಮನ್ ಕೊಹ್ಲಿ ಅವರನ್ನು 2017ರ ಜನವರಿಯಲ್ಲಿ ಭಾರತ ತಂಡದ ನಾಯಕರಾಗಿ ನೇಮಕ ಮಾಡಲಾಗಿತ್ತು. ಇಲ್ಲಿಯವರೆಗೆ ಕೊಹ್ಲಿ 60 ಟೆಸ್ಟ್ , 95 ಏಕದಿನ ಮತ್ತು 45 ಟ್ವೆಂಟಿ-20 ಪಂದ್ಯಗಳಲ್ಲಿ ಭಾರತದ ತಂಡವನ್ನು ನಾಯಕರಾಗಿ ಮುನ್ನಡೆಸಿದ್ದಾರೆ ಮತ್ತು ರವಿವಾರ ಅವರು ತಮ್ಮ 95ನೇ ಏಕದಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಒಟ್ಟಾರೆಯಾಗಿ ಹೆಚ್ಚು ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. 332 ಪಂದ್ಯಗಳಲ್ಲಿ ಭಾರತದ ನಾಯಕತ್ವ ವಹಿಸಿದ್ದ ಧೋನಿ ಮತ್ತು 221 ಪಂದ್ಯಗಳಲ್ಲಿ ಭಾರತದ ನಾಯಕನಾಗಿದ್ದ ಮುಹಮ್ಮದ್ ಅಝರುದ್ದೀನ್ ಅವರು ಈ ಪಟ್ಟಿಯಲ್ಲಿ ಕೊಹ್ಲಿಗಿಂತ ಮುಂದಿದ್ದಾರೆ.

200 ಅಥವಾ ಅದಕ್ಕಿಂತ ಹೆಚ್ಚು ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಭಾರತದ ನಾಯಕರು ಕೊಹ್ಲಿ, ಧೋನಿ ಮತ್ತು ಅಝರುದ್ದೀನ್. ಸೌರವ್ ಗಂಗುಲಿ (ನಾಯಕನಾಗಿ 196 ಪಂದ್ಯಗಳು) ಮತ್ತು ಕಪಿಲ್ ದೇವ್ (ನಾಯಕನಾಗಿ 108 ಪಂದ್ಯಗಳು) ಪಟ್ಟಿಯಲ್ಲಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.

  

ಸತತ 6ನೇ ಬಾರಿ ಟಾಸ್ ಸೋತ ಕೊಹ್ಲಿ

 ಪುಣೆ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಮತ್ತೊಮ್ಮೆ ಟಾಸ್ ಸೋತರು. ಇದರೊಂದಿಗೆ ಸತತ 6ನೇ ಬಾರಿ ಕೊಹ್ಲಿ ಟಾಸ್ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

  ಇಂಗ್ಲೆಂಡ್ ವಿರುದ್ಧದ ಸರಣಿಯನ್ನು ನೋಡಿದರೆ ಭಾರತವು 12ರಲ್ಲಿ 2 ಬಾರಿ ಮಾತ್ರ ಟಾಸ್ ಜಯಿಸಿದೆ. ಕೊನೆಯ ಬಾರಿಗೆ ಭಾರತ ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದಿದ್ದು ಅಹಮದಾಬಾದ್‌ನಲ್ಲಿ ನಡೆದ 2ನೇ ಟ್ವೆಂಟಿ-20 ಪಂದ್ಯದಲ್ಲಿ. ಇಶಾನ್ ಕಿಶನ್ ಪಾದಾರ್ಪಣೆ ಮಾಡಿದ್ದ ಈ ಪಂದ್ಯವನ್ನು ಭಾರತ ಗೆದ್ದುಕೊಂಡಿತ್ತು.

 ಕುಲದೀಪ್ ಯಾದವ್ ಕೈಬಿಟ್ಟರು: ಸರಣಿ-ನಿರ್ಧಾರಕ್ಕಾಗಿ ಭಾರತ ಮಾಡಿರುವ ಒಂದು ಬದಲಾವಣೆ ಯೆಂದರೆ ಎರಡನೇ ಏಕದಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಅಂತಿಮ ಹನ್ನೊಂದರ ಬಳಗದಿಂದ ಕೈ ಬಿಟ್ಟು ಎಡಗೈ ವೇಗಿ ಟಿ.ನಟರಾಜನ್‌ರನ್ನು ಸೇರಿಸಿಕೊಂಡಿತ್ತು. ಕುಲ್‌ದೀಪ್ ಕಳೆದ ಪಂದ್ಯದಲ್ಲಿ 10 ಓವರ್‌ಗಳಲ್ಲಿ 8 ಸಿಕ್ಸರ್‌ಗಳನ್ನು ಒಳಗೊಂಡ 84 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.ವಿಕೆಟ್ ಪಡೆಯದೆ ಕೈ ಸುಟ್ಟುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News