ಮ್ಯಾನ್ಮಾರ್: ಶವಸಂಸ್ಕಾರದಲ್ಲಿದ್ದ ಜನರ ಮೇಲೆ ಗುಂಡು ಹಾರಿಸಿದ ಸೈನಿಕರು

Update: 2021-03-29 16:04 GMT
ಸಾಂದರ್ಭಿಕ ಚಿತ್ರ

ಯಾಂಗನ್ (ಮ್ಯಾನ್ಮಾರ್), ಮಾ. 29: ಮ್ಯಾನ್ಮಾರ್‌ನಲ್ಲಿ ಸೇನಾಡಳಿತವನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟಿಸುತ್ತಿದ್ದ ಜನರ ಮೇಲೆ ಗುಂಡು ಹಾರಿಸಿ 114 ಮಂದಿಯನ್ನು ಕೊಂದ ಒಂದು ದಿನದ ಬಳಿಕ, ಸೇನೆಯು ರವಿವಾರ ಅಂತ್ಯಸಂಸ್ಕಾರವೊಂದರಲ್ಲಿ ಭಾಗವಹಿಸುತ್ತಿದ್ದ ಜನರ ಮೇಲೆ ಗುಂಡು ಹಾರಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಶನಿವಾರ ಸೈನಿಕರ ಗುಂಡಿಗೆ ಬಲಿಯಾದ 114 ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಲು ರವಿವಾರ ಜನರು ಒಟ್ಟು ಸೇರಲಾರಂಭಿಸುತ್ತಿದ್ದಂತೆಯೇ ಸೇನೆ ಮತ್ತೆ ಜನರ ಮೇಲೆ ಮುಗಿಬಿದ್ದಿದೆ.

 ಸೈನಿಕರ ಗುಂಡಿಗೆ ಬಲಿಯಾದ 20 ವರ್ಷದ ವಿದ್ಯಾರ್ಥಿಯೊಬ್ಬನ ಶವ ಸಂಸ್ಕಾರ ಯಾಂಗನ್ ಸಮೀಪದ ಬಾಗೊ ಎಂಬಲ್ಲಿ ನಡೆದಾಗ ಸೈನಿಕರು ಜನರ ಮೇಲೆ ಗುಂಡು ಹಾರಿಸಿದರು. ಗುಂಡಿನ ದಾಳಿಯಿಂದ ತಪ್ಪಿಸಿಕೊಳ್ಳಲು ಜನರು ಓಡಿದರು. ಈ ಸಂದರ್ಭದಲ್ಲಿ ಸಂಭವಿಸಿರಬಹುದಾದ ಸಾವು-ನೋವಿನ ಬಗ್ಗೆ ತಕ್ಷಣಕ್ಕೆ ವರದಿಗಳು ಬಂದಿಲ್ಲ.

‘‘ಸೈನಿಕರು ಕೊಂದ ವಿದ್ಯಾರ್ಥಿಗಾಗಿ ನಾವು ಕ್ರಾಂತಿ ಗೀತೆಯನ್ನು ಹಾಡುತ್ತಿದ್ದಾಗ ಧಾವಿಸಿದ ಸೈನಿಕರು ನಮ್ಮ ಮೇಲೆ ಗುಂಡು ಹಾರಿಸಿದರು’’ ಎಂದು ಮಹಿಳೆಯೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು. ‘‘ಸೈನಿಕರು ಗುಂಡು ಹಾರಿಸಲು ಆರಂಭಿಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಜನರು ಓಡಿದರು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News