ಭ್ರಷ್ಟಾಚಾರ ಆರೋಪ: ಸಿಎಂ ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ಧರಣಿ

Update: 2021-04-01 11:08 GMT

ಬೆಂಗಳೂರು, ಎ.1: ಸರಣಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ಸದಸ್ಯರು ಬೃಹತ್ ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ರೇಸ್‍ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನ ಮುಂಭಾಗ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ನೇತೃತ್ವದಲ್ಲಿ ಜಮಾಯಿಸಿದ ಕಾಂಗ್ರೆಸ್ ಸದಸ್ಯರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಕೆ.ಎಸ್.ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿ ಮುಖವಾಡ ತೊಟ್ಟು ವಿಭಿನ್ನವಾಗಿ ಪ್ರತಿಭಟನೆ ನಡೆಸಿ, ಆಕ್ರೋಶ ಹೊರಹಾಕಿದರು.

ಭ್ರಷ್ಟಾಚಾರ, ಆಪರೇಷನ್ ಕಮಲ, ಡಿನೋಟಿಫಿಕೇಶನ್ ಹಗರಣಗಳಲ್ಲೇ ನಿರಂತರವಾಗಿ ತನಿಖೆಗೆ ಒಳಪಡುತ್ತಿರುವ ಯಡಿಯೂರಪ್ಪ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡದೆ ಮುಂದುವರಿದಿರುವುದು ಅತ್ಯಂತ ದುರದೃಷ್ಟಕರ. ಈ ಕೂಡಲೇ ಅವರು ರಾಜೀನಾಮೆ ಸಲ್ಲಿಸಲಿ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಎಸ್. ಮನೋಹರ್, 2019ರಲ್ಲಿ ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರ್ ಗೆ ಬಿಜೆಪಿ ಸೇರಲು 10 ಕೋಟಿ ರೂ. ಆಮಿಷವನ್ನು ಯಡಿಯೂರಪ್ಪ ಒಡ್ಡಿದ್ದರು. ಇದರ ಬಗ್ಗೆ ಅವರ ವಿರುದ್ಧ ಎಫ್‍ಐಆರ್ ಕೂಡ ದೇವದುರ್ಗ ತಾಲೂಕಿನ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು ಎಂದು ತಿಳಿಸಿದರು.

ಇದಾದ ನಂತರ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರ ಪಡೆದ ಯಡಿಯೂರಪ್ಪ, ಆ ಸಂದರ್ಭದಲ್ಲಿ ಜೆಡಿಎಸ್ ಕಾಂಗ್ರೆಸ್ ಶಾಸಕರನ್ನು ಕೋಟ್ಯಂತರ ಹಣ ನೀಡಿ ಖರೀದಿಸಿ ಅವರಿಗೆ ಅಧಿಕಾರದ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿದ್ದು ಒಂದು ಇತಿಹಾಸ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಅವರ ಮೇಲೆ ಹೂಡಿದ್ದ ದಾವೆಗೆ ಅವರೆ ತಡೆಯಾಜ್ಞೆಯನ್ನ ನ್ಯಾಯಾಲಯದಲ್ಲಿ ತಂದಿದ್ದರು. ಇಂದು ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿ ತನಿಖೆಗೆ ಆದೇಶಿಸಿದೆ. ತನಿಖೆಗೆ ಒಳಗಾಗಿರುವ ಯಡಿಯೂರಪ್ಪ ಒಂದು ಕ್ಷಣವೂ ಸಹ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಅವಶ್ಯಕತೆ ರಾಜ್ಯದ ಜನತೆಗೆ ಇಲ್ಲ. ಕೂಡಲೇ ಅವರು ರಾಜೀನಾಮೆ ನೀಡಬೇಕು ಇಲ್ಲದೆ ಹೋದರೆ ರಾಜ್ಯಪಾಲರು ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಜಿ.ಜನಾರ್ಧನ್ ಎ.ಆನಂದ್ ಈ. ಶೇಖರ್.ಆದಿತ್ಯ ವೆಂಕಟೇಶ್ ಪುಟ್ಟರಾಜು ಚಂದ್ರಶೇಖರ ಉಮೇಶ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News