×
Ad

ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಸರಕಾರದ ಆದ್ಯತೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-04-02 18:03 IST

ಬೆಂಗಳೂರು, ಎ. 2: ‘ರಾಜ್ಯದಲ್ಲಿನ ಪೊಲೀಸ್ ಸಿಬ್ಬಂದಿಯ ಕ್ಷೇಮಾಭಿವೃದ್ಧಿ ಜೊತೆಗೆ ಪೊಲೀಸ್ ಇಲಾಖೆಯ ಆಧುನೀಕರಣಕ್ಕೂ ನಮ್ಮ ಸರಕಾರ ಆದ್ಯತೆ ನೀಡಿದೆ' ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಹೇಳಿದ್ದಾರೆ.

ಶುಕ್ರವಾರ ನಗರದ ಕೆಎಸ್‍ಆರ್‍ಪಿ ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪೊಲೀಸ್ ಪಡೆಗಳ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದ ಅವರು, ಪೊಲೀಸ್ ಸಿಬ್ಬಂದಿ ಕ್ಷೇಮಾಭಿವೃದ್ಧಿಯ ನಿಟ್ಟಿನಲ್ಲಿ ಆರೋಗ್ಯಭಾಗ್ಯ ಯೋಜನೆಯಡಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಚಿಕಿತ್ಸೆ ನೀಡಿದ ವಿವಿಧ ಆಸ್ಪತ್ರೆಗಳಿಗೆ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.

ನಿವೃತ್ತ ಪೊಲೀಸ್ ಸಿಬ್ಬಂದಿಯ ಆರೋಗ್ಯ ಸೇವೆಗಳಿಗೆ 20 ಕೋಟಿ ರೂ. ತೆಗೆದಿರಿಸಲಾಗಿದ್ದು, ಅದರಲ್ಲಿ 7.50 ಕೋಟಿ ರೂ.ಹಣವನ್ನು ಬಿಡುಗಡೆ ಮಾಡಲಾಗಿದೆ. ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ವಸತಿ ಸೌಲಭ್ಯ ಒದಗಿಸಲು 1,034 ಕೋಟಿ ರೂ.ಗಳನ್ನು ಒದಗಿಸಲಾಗಿದ್ದು, ಹಂತ-ಹಂತವಾಗಿ ಕಾಮಗಾರಿಗಳು ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕದ ಪೊಲೀಸ್ ವ್ಯವಸ್ಥೆಯು ದೇಶದಲ್ಲೆ ಮುಂಚೂಣಿಯಲ್ಲಿದೆ. ಅಪರಾಧ ತಡೆ, ಪತ್ತೆ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗಾಗಿ ಹಬ್ಬ-ಹರಿದಿನಗಳೆನ್ನದೆ ದಣಿವಿಲ್ಲದೆ ಪೊಲೀಸರು ಶ್ರಮಿಸುತ್ತಿದ್ದಾರೆ ಎಂದ ಅವರು, ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಶ್ರಮಿಸಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆ ಮಾಡಿಕೊಡದೆ ಕಾರ್ಯನಿರ್ವಹಿಸಿದ್ದಾರೆಂದು ತಿಳಿಸಿದರು.

ನೈತಿಕ ಸ್ಥೈರ್ಯ ಹೆಚ್ಚಳ: ಪೊಲೀಸ್ ಸಿಬ್ಬಂದಿ ನೈತಿಕ ಸ್ಥೈರ್ಯ ಹೆಚ್ಚಿಸಲು ಸರಕಾರ ಹಲವು ಕ್ರಮಕೈಗೊಂಡಿದೆ. ಸ್ವಂತ ಕಟ್ಟಡಗಳಿಲ್ಲದ ರಾಜ್ಯದ 100 ಪೊಲೀಸ್ ಠಾಣೆಗಳಿಗೆ 5 ವರ್ಷಗಳಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಲು 200 ಕೋಟಿ ರೂ.ತೆಗೆದಿರಿಸಲಾಗಿದೆ ಎಂದ ಅವರು, ಮಹಿಳೆಯರ ಸುರಕ್ಷಿತೆಗಾಗಿ ನಿರ್ಭಯ ಯೋಜನೆಯಡಿ 667 ಕೋಟಿ ರೂ.ವೆಚ್ಚದ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಕರಾವಳಿ ಪ್ರದೇಶದಲ್ಲಿ ಅತ್ಯಾಧುನಿಕ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಕೊಡಗು, ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಂಕೀರ್ಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News