ಏಸು: ಮುಸ್ಲಿಮರ ದೃಷ್ಟಿಯಲ್ಲಿ...

Update: 2021-04-02 19:30 GMT

ಕ್ರೈಸ್ತರಂತೆ ಮುಸ್ಲಿಮರೂ ಏಸುವನ್ನು ಗೌರವಿಸುತ್ತಾರೆ. ಆದರೆ ಮುಸ್ಲಿಮ್ ನಂಬಿಕೆಯ ಪ್ರಕಾರ ಏಸು ಒಬ್ಬ ಶ್ರೇಷ್ಠ ಮಾನವರಾಗಿದ್ದರು. ಆದರ್ಶ ಮಾನವರಾಗಿದ್ದರು. ಮಾನವರ ಮಾರ್ಗದರ್ಶನಕ್ಕೆ ದೇವರು ನಿಯೋಜಿಸಿದ ದೂತರಾಗಿದ್ದರು. ಪರಮ ಸತ್ಯನಿಷ್ಠರಾಗಿದ್ದರು. ಆದರೆ ಅವರು ಸ್ವತಃ ದೇವರಾಗಲಿ, ದೇವರ ಸಂತಾನವಾಗಲಿ ಆಗಿರಲಿಲ್ಲ. ದೇವರನ್ನು ಪರಿಚಯಿಸಲು ಬಂದವರನ್ನೇ ದೇವರಾಗಿಸಿಬಿಡುವ ಭಾವುಕ ಸಂಪ್ರದಾಯ ಜಗತ್ತಿನ ಇತಿಹಾಸದಲ್ಲಿ ಹಲವೆಡೆ ಹಲವು ಬಾರಿ ಕಂಡು ಬಂದಿವೆ. ಆದರೆ ಮನುಷ್ಯನೊಬ್ಬ ಎಷ್ಟೇ ಶ್ರೇಷ್ಠನಾಗಿದ್ದರೂ, ಅವನಿಂದ ಎಷ್ಟು ದೊಡ್ಡ ಅಸಾಮಾನ್ಯ ಪವಾಡಗಳು ಪ್ರದರ್ಶಿತವಾದರೂ ಅವನನ್ನು ಮನುಷ್ಯನ ಸ್ಥಾನದಲ್ಲಿಟ್ಟೇ ಗೌರವಿಸಬೇಕು, ಅವನನ್ನು ದೇವರಿಗೆ ಹೋಲಿಸಬಾರದು ಎಂಬುದು ಮುಸ್ಲಿಮರ ನಂಬಿಕೆ.

ಹಾಗೆಯೇ, ದೇವರು ಅನುಪಮ, ಮಾನವರ ಅಥವಾ ಇತರ ಯಾವುದೇ ಜೀವಿಗಳ ಗುಣ, ಅಗತ್ಯ ಅಥವಾ ದೌರ್ಬಲ್ಯಗಳನ್ನು ದೇವರ ಮೇಲೆ ಆರೋಪಿಸಬಾರದು ಎಂಬುದು ಕೂಡಾ ಮುಸ್ಲಿಮರ ನಂಬಿಕೆ. ಉದಾ: ಹಸಿವು, ದಾಹ, ದಣಿವು, ನಿದ್ದೆ, ಕುಟುಂಬ, ಸಂಸಾರ ಇವೆಲ್ಲಾ ಮಾನವರ ಅಗತ್ಯಗಳು. ದೇವರು ಇಂತಹ ಎಲ್ಲ ಅಗತ್ಯಗಳಿಂದ ಸಂಪೂರ್ಣ ಮುಕ್ತ. ಇಂತಹ ಅಗತ್ಯಗಳನ್ನು ಮತ್ತು ಸಂಬಂಧಗಳನ್ನು ದೇವರ ಮೇಲೆ ಆರೋಪಿಸುವುದು ಅಥವಾ ಯಾವುದಾದರೂ ವಿಧದಲ್ಲಿ ಇವುಗಳನ್ನು ದೇವರ ಜೊತೆ ಜೋಡಿಸುವುದು ಮಹಾಪಾಪ ಎಂದು ಅವರು ನಂಬಿರುತ್ತಾರೆ.

ಏಸುವಿನ ಕುರಿತಂತೆ ಅನೇಕಾರು ಅಸಾಮಾನ್ಯ ಐತಿಹ್ಯಗಳಿವೆ. ಆ ಪೈಕಿ ಹಲವನ್ನು ಮುಸ್ಲಿಮರು ನಂಬುತ್ತಾರೆ. ಉದಾ: ಅವರು ಮೇರಿ ಎಂಬ ಕನ್ಯೆಯ ಗರ್ಭದಿಂದ ಜನಿಸಿದವರು. ಆ ಕಾರಣಕ್ಕಾಗಿ ಏಸು ಅಥವಾ ಅವರ ಮಾತೆ ಮೇರಿಯ ಪಾವಿತ್ರ್ಯಕ್ಕೆ ಯಾವ ಧಕ್ಕೆಯೂ ಬರುವುದಿಲ್ಲ. ಶೂನ್ಯದಿಂದ ಸೃಷ್ಟಿಸಬಲ್ಲ ದೇವರು ತಾಯಿತಂದೆಯರ ಮಧ್ಯಸ್ಥಿಕೆ ಇಲ್ಲದೆ ಆದಮ್‌ರನ್ನು ಸೃಷ್ಟಿಸಿರುವಾಗ ಯಾವುದೇ ಪುರುಷನ ಪಾತ್ರವಿಲ್ಲದೆ ಕನ್ಯೆಯ ಮೂಲಕ ಏಸುವನ್ನು ಸೃಷ್ಟಿಸಿದ್ದರಲ್ಲಿ ಅಚ್ಚರಿಯೇನಿಲ್ಲ ಎಂಬುದು ಅವರ ವಾದ. ಏಸುವಿನ ಜನ್ಮದ ವಿಶೇಷ ಸ್ವರೂಪವು ದೇವರ ಮಹಿಮೆಗೆ ಸಾಕ್ಷಿ ಎಂದು ಅವರು ನಂಬುತ್ತಾರೆ.

ಮುಸ್ಲಿಮರು ಏಸುವನ್ನು ಈಸಾ ಎಂದೂ ಮೇರಿಯನ್ನು ಮರ್ಯಮ್ ಎಂದೂ ಗುರುತಿಸುತ್ತಾರೆ. ಅವರ ಹೆಸರನ್ನು ಉಚ್ಚರಿಸುವಾಗಲೆಲ್ಲಾ ಅಲೈಹಿಸ್ಸಲಾಮ್ (ಅವರಿಗೆ ಶಾಂತಿ ಸಿಗಲಿ) ಎಂದು ಶುಭ ಹಾರೈಸುತ್ತಾರೆ. ಕುರ್‌ಆನ್‌ನಲ್ಲಿ ಹಲವಾರು ಬಾರಿ ಏಸು ಮತ್ತು ಮೇರಿಯ ಪ್ರಸ್ತಾಪವಿದೆ. ಅವರ ಮೇಲೆ ಶತ್ರುಗಳು ಮತ್ತು ಭಕ್ತರು ಹೊರಿಸುವ ವಿವಿಧ ಆರೋಪಗಳ ಖಂಡನೆಯೂ ಇದೆ. ಪ್ರವಾದಿ ಮುಹಮ್ಮದ್ (ಸ) ರ ತಾಯಿಯನ್ನು ಕುರ್‌ಆನ್‌ನಲ್ಲಿ ಹೆಸರಿಸಲಾಗಿಲ್ಲ. ಆದರೆ ಏಸುವಿನ ತಾಯಿಯನ್ನು ಹೆಸರಿಸಲಾಗಿದೆ. ‘ಮರ್ಯಮ್’ ಎಂಬ ಹೆಸರಿನ ಒಂದು ಪ್ರತ್ಯೇಕ ಅಧ್ಯಾಯವೇ ಕುರ್‌ಆನ್‌ನಲ್ಲಿದೆ (ಅಧ್ಯಾಯ - 19).

ಮುಸ್ಲಿಮರ ನಂಬಿಕೆಯ ಪ್ರಕಾರ ದೇವರು ಪರಮ ಕ್ಷಮಾಶೀಲ. ಪಾಪ ಮಾಡಿದವನು ತನ್ನ ಪಾಪಕ್ಕಾಗಿ ಪಶ್ಚಾತ್ತಾಪ ಪಟ್ಟು ದೇವರ ಬಳಿ ಕ್ಷಮೆ ಬೇಡಿದರೆ ಸಾಕು. ಅವನು ಕ್ಷಮಿಸಿ ಬಿಡುತ್ತಾನೆ. ಪ್ರಥಮ ಮಾನವ ಆದಮ್ ತಪ್ಪುಮಾಡಿದ್ದರು. ಆ ಬಳಿಕ ಅವರು ಪಶ್ಚಾತ್ತಾಪ ಪಟ್ಟು ಕ್ಷಮೆ ಕೋರಿದಾಗ ಅವರನ್ನು ಕ್ಷಮಿಸಲಾಯಿತು. ಪ್ರತಿಯೊಬ್ಬರೂ ಹೆಚ್ಚೆಂದರೆ ಸ್ವತಃ ತಮ್ಮ ಪಾಪಕ್ಕೆ ಮಾತ್ರ ಹೊಣೆಗಾರರು. ಒಬ್ಬರ ಪಾಪಕ್ಕೆ ಇನ್ನೊಬ್ಬರು ಹೊಣೆಗಾರರಾಗುವುದಿಲ್ಲ. ಆದ್ದರಿಂದ ಆದಮರು ಮಾಡಿದ ತಪ್ಪಿಗಾಗಿ ಅವರ ಸಂತತಿ ತಪ್ಪಿತಸ್ಥರಾಗುವುದಿಲ್ಲ. ಹಾಗೆಯೇ ಒಬ್ಬರ ತಪ್ಪಿಗಾಗಿ ಇನ್ನೊಬ್ಬರನ್ನು ಶಿಕ್ಷಿಸುವ ಅಥವಾ ಬಲಿ ಕೊಡುವ ಅನ್ಯಾಯವನ್ನೂ ದೇವರು ಮಾಡುವುದಿಲ್ಲ.

ಏಸು ಈ ಜಗತ್ತಿಗೆ ಬಂದ ವಿಧಾನ ಅನನ್ಯವಾಗಿತ್ತು. ಹಾಗೆಯೇ ಏಸು ಈ ಲೋಕದಿಂದ ನಿರ್ಗಮಿಸಿದ ವಿಧಾನವೂ ಅಸಾಮಾನ್ಯವಾಗಿತ್ತು. ಅವರು ಇಲ್ಲಿಂದ ಯಾವ ರೀತಿ ನಿರ್ಗಮಿಸಿದರು ಎಂಬ ವಿಷಯದಲ್ಲಿ ಅವರ ಭಕ್ತರು, ಅನುಯಾಯಿಗಳು ಮತ್ತು ಶತ್ರುಗಳ ಮಧ್ಯೆ ಗೊಂದಲಮಯ ಭಿನ್ನತೆಗಳಿವೆ. ಭಕ್ತರ ಪ್ರಕಾರ, ಎಲ್ಲ ಮಾನವರ ಪಾಪಗಳಿಗೆ ಪರಿಹಾರವಾಗಿ ದೇವರು ಏಸುವನ್ನು ಶಿಲುಬೆಯ ಮೂಲಕ ಬಲಿ ತೆಗೆದುಕೊಂಡನು. ಏಸುವಿನ ಶತ್ರುಗಳು ಅವರನ್ನು ಶಿಲುಬೆಗೇರಿಸಿ ಕೊಲ್ಲಬಯಸಿದ್ದರು ಎಂಬುದು ನಿಜ. ಆದರೆ ಮುಸಲ್ಮಾನರ ನಂಬಿಕೆ ಪ್ರಕಾರ ಶತ್ರುಗಳ ಆ ಸಂಚು ವಿಫಲವಾಯಿತು. ಶತ್ರುಗಳು ತಮ್ಮಲ್ಲೇ ಒಬ್ಬರನ್ನು ಶಿಲುಬೆಗೇರಿಸಿ ತಾವು ಏಸುವನ್ನು ಶಿಲುಬೆಗೇರಿಸಿದ್ದೇವೆ ಎಂದು ಸಂಭ್ರಮಿಸಿದರು. ಅದು ಕೇವಲ ಅವರ ಭ್ರಮೆಯಾಗಿತ್ತು. ದೇವರು ಏಸುವನ್ನು ಶತ್ರುಗಳ ಕೈಯಿಂದ ಮತ್ತು ಶಿಲುಬೆಯಿಂದ ರಕ್ಷಿಸಿದನು.

Writer - ಎ. ಹಾಜಿರಾ ಮೂಡುಬಿದಿರೆ

contributor

Editor - ಎ. ಹಾಜಿರಾ ಮೂಡುಬಿದಿರೆ

contributor

Similar News