ಕ್ರಿಕೆಟ್‌ಗೆ ಹೊಸ ವ್ಯಾಖ್ಯಾನ ಬರೆದ ಆಸ್ಟ್ರೇಲಿಯನ್ನರು

Update: 2021-04-02 19:30 GMT

ನನ್ನ ಬಾಲ್ಯ ಹಾಗೂ ಯೌವನ ಕಾಲದ ಅಚ್ಚುಮೆಚ್ಚಿನ ಆಸ್ಟ್ರೇಲಿಯನ್ನರೆಂದರೆ ಕ್ರಿಕೆಟ್ ಬರಹಗಾರರು ಹಾಗೂ ಕ್ರಿಕೆಟ್ ವೀಕ್ಷಣೆಗಾರರು. ನನಗೆ 20 ವರ್ಷವಾಗಿದ್ದಾಗ 1979ರಲ್ಲಿ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ ನಡೆದಾಗ ಆಸ್ಟ್ರೇಲಿಯ ಕ್ರಿಕೆಟಿಗರನ್ನು ಮೊದಲ ಬಾರಿಗೆ ನಾನು ಪ್ರತ್ಯಕ್ಷವಾಗಿ ಕಂಡಿದ್ದೆ. ಆದರೆ ಆ ಪಂದ್ಯವು ಕೆರ್ರಿ ಪ್ಯಾಕರ್ ಅವರ ‘ಚೆಕ್ ಪುಸ್ತಕದ ಹಾಳೆಯಿಂದಾಗಿ’ ಒಂದು ಕಡೆಗೆ ವಾಲಿತ್ತು. 1980ರ ದಶಕದ ವರ್ಷಗಳು ಆಸ್ಟ್ರೇಲಿಯನ್ನರ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸದೆ ಸಂದುಹೋದವು. ಕೆರ್ರಿ ಪ್ಯಾಕರ್ ಜೊತೆಗೆ ಸಂಧಾನವು ಏರ್ಪಟ್ಟಿತ್ತಾದರೂ, ಆ ದಶಕದಲ್ಲಿ ಪೂರ್ಣ ಸಾಮರ್ಥ್ಯದ ಆಸ್ಟ್ರೇಲಿಯ ತಂಡವು ಸ್ಪರ್ಧಾತ್ಮಕವಾಗಿರಲಿಲ್ಲ. ಅದೃಷ್ಟವಶಾತ್ 1990 ಹಾಗೂ 2000ನೇ ದಶಕದಲ್ಲಿ ಉನ್ನತ ದರ್ಜೆಯ ಆಸ್ಟ್ರೇಲಿಯನ್ ತಂಡಗಳು, ಈಗ ನಾನು ನನ್ನ ಮನೆಯೆಂದು ಕರೆಯುವ ಬೆಂಗಳೂರಿನಲ್ಲಿ ಹಲವಾರು ಟೆಸ್ಟ್ ಪಂದ್ಯಗಳನ್ನು ಆಡಿದ್ದವು ಹಾಗೂ ಪಂದ್ಯಗಳಲ್ಲಿ ನಾನು ಯಾವತ್ತೂ ಉಪಸ್ಥಿತನಿರುತ್ತಿದ್ದೆ ಹಾಗೂ ಪಾಂಟಿಂಗ್ ಮತ್ತು ವಾ ಸಹೋದರರ ಬ್ಯಾಟಿಂಗ್ ಕೌಶಲ್ಯ, ಮೆಗ್ರಾ ಮತ್ತು ವಾರ್ನ್ ಅವರ ಬೌಲಿಂಗ್ ಹಾಗೂ ಹೀಲಿ ಮತ್ತು ಗಿಲ್‌ಕ್ರಿಸ್ಟ್ ಅವರ ವಿಕೆಟ್ ಕೀಪಿಂಗ್ ಚಾತುರ್ಯದಲ್ಲಿ ಮಿಂದೇಳುತ್ತಿದ್ದೆ.


ಮುಖಪುಟದಿಂದ ಹಿಡಿದು ಕೊನೆಯ ಪುಟದವರೆಗೆ ನಾನು ಓದಿದಂತಹ ಮೊದಲ ಪುಸ್ತಕದ ಲೇಖಕ ಓರ್ವ ಆಸ್ಟ್ರೇಲಿಯನ್. ಆತನ ಹೆಸರು ಕೀತ್ ಮಿಲ್ಲರ್. ತನ್ನ ದೇಶವು ಸೃಷ್ಟಿಸಿದ ಅತಿ ಶ್ರೇಷ್ಠ ಸವ್ಯಸಾಚಿ ಆಟಗಾರನೀತ. 1956ರಲ್ಲಿ ಕ್ರಿಕೆಟ್ ರಂಗದಿಂದ ನಿವೃತ್ತಿಹೊಂದಿದ ಬಳಿಕ ಮಿಲ್ಲರ್ ‘ಕ್ರಿಕೆಟ್ ಕ್ರಾಸ್‌ಫೈರ್’ ಎಂಬ ತನ್ನ ಕ್ರೀಡಾ ಬದುಕಿನ ಆತ್ಮಕತೆಯನ್ನು ಪ್ರಕಟಿಸಿದ್ದನು. ಅದನ್ನು ಭಾರತೀಯ ಪ್ರಕಾಶನ ಸಂಸ್ಥೆಯೊಂದು ಮರುಮುದ್ರಿಸಿತ್ತು. ನಾನು ಬೆಳೆದಂತಹ ಹಿಮಾಲಯದ ತಪ್ಪಲಲ್ಲಿರುವ ಪಟ್ಟಣಕ್ಕೆ ಆ ಪುಸ್ತಕದ ಪ್ರತಿಗಳನ್ನು ರವಾನಿಸಿತ್ತು. ಮಿಲ್ಲರ್ ಕ್ರಿಕೆಟ್ ರಂಗವನ್ನು ತೊರೆದ ಆನಂತರ ಬಹುಶಃ ಭಾರತದಲ್ಲಿ ಪ್ರಸಾರವಾಗುತ್ತಿದ್ದ ಆ ಪುಸ್ತಕದ ಕೊನೆಯ ಪ್ರತಿಯನ್ನು ನನ್ನ ತಂದೆ ಡೆಹ್ರಾಡೂನ್‌ನ ರಾಜಪುರ ರಸ್ತೆಯಲ್ಲಿರುವ ಮಳಿಗೆಯೊಂದರಲ್ಲಿ ಖರೀದಿಸಿದ್ದರು ಹಾಗೂ ಅದನ್ನು ನನಗೆ ಹಸ್ತಾಂತರಿಸಿದ್ದರು.

 ‘ಕ್ರಿಕೆಟ್ ಕ್ರಾಸ್‌ಫೈರ್’ ಪುಸ್ತಕ ಓದಿದಾಗ ಆಗಿನ್ನೂ ನಾನು ಬಾಲಕ. ಆಗ ನನಗೆ ಎರಡು ವಿಷಯಗಳು ಮನಸ್ಸಿಗೆ ಹೊಳೆದಿದ್ದವು. ಮೊದಲನೆಯದಾಗಿ ತನ್ನ ಕ್ಯಾಪ್ಟನ್ ಬಗ್ಗೆ ಮಿಲ್ಲರ್‌ಗಿದ್ದ ದ್ವಂದ್ವ ಭಾವನೆಗಳು. ಎರಡನೆಯದಾಗಿ ಭಾರತ ಹಾಗೂ ಭಾರತೀಯರ ಬಗ್ಗೆ ಮಿಲ್ಲರ್ ಪ್ರದರ್ಶಿಸಿದ್ದ ಒಲವು. ಬ್ರಾಡ್‌ಮನ್ ತನ್ನ ಕಾಲದ ಅತಿ ಶ್ರೇಷ್ಠ ಕ್ರಿಕೆಟಿಗ ಎಂಬುದನ್ನು ಮಿಲ್ಲರ್ ಒಪ್ಪಿಕೊಂಡಿದ್ದರು. ಆದಾಗ್ಯೂ ಓರ್ವ ವ್ಯಕ್ತಿಯಾಗಿ ಬ್ರಾಡ್‌ಮನ್ ಏಕಮನಸ್ಕನಾಗಿದ್ದರು ಮತ್ತು ಸ್ವಾರ್ಥಿಯೂ ಹೌದು. ತನ್ನ ವಿರುದ್ಧ ಆಟವಾಡಿದ್ದ ಭಾರತೀಯ ಕ್ರಿಕೆಟಿಗರನ್ನು ಮಿಲ್ಲರ್ ಕ್ರೀಡಾಳುಗಳು ಹಾಗೂ ಮಾನವರು ಎಂಬ ಎರಡೂ ನೆಲೆಯಲ್ಲಿ ಆತ್ಮೀಯತೆಯನ್ನು ಇರಿಸಿಕೊಂಡಿದ್ದರು. ಅರ್ಧಶತಮಾನಕ್ಕೂ ಹೆಚ್ಚು ಸಮಯದ ಅಂತರದಲ್ಲಿ ಮಿಲ್ಲರ್ ಅವರ ಕೃತಿಯು ಮುಷ್ತಾಕ್ ಅಲಿ, ಸಿ.ಎಸ್.ನಾಯ್ಡು, ವಿನೂ ಮಂಕಡ್ ಹಾಗೂ ವಿಜಯ್ ಮರ್ಚಂಟ್ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರಣಗಳನ್ನು ಒಳಗೊಂಡಿತ್ತು.

ಕ್ರಿಕೆಟ್ ಕ್ರಾಸ್‌ಫೈರ್ ಪುಸ್ತಕವನ್ನು ನಾನು 1967 ಅಥವಾ 1968ರಲ್ಲಿ ಓದಿದ್ದಿರಬೇಕು. ಅದೇ ಸಮಯದಲ್ಲಿ ನಾನು, ಈಗ ಪ್ರಕಟಣೆ ನಿಂತುಹೋಗಿರುವ ‘ಸ್ಪೋರ್ಟ್ ಆ್ಯಂಡ್ ಪಾಸ್‌ಟೈಮ್’ ಪತ್ರಿಕೆಯಲ್ಲಿ ಜ್ಯಾಕ್ ಫಿಂಗಲ್‌ಟನ್ ಅವರ ಲೇಖನಗಳನ್ನು ಓದಲು ಆರಂಭಿಸಿದೆ. ಈ ಪತ್ರಿಕೆಯನ್ನು ಮದ್ರಾಸ್ (ಈಗಿನ ಚೆನ್ನೈ)ನಿಂದ ಕಸ್ತೂರಿ ಆ್ಯಂಡ್ ಸನ್ಸ್ ಪ್ರಕಟಿಸುತ್ತಿತ್ತು. ಮಿಲ್ಲರ್‌ಗಿಂತ ಒಂದು ದಶಕಕ್ಕೆ ಮುನ್ನ ಬ್ರಾಡ್‌ಮನ್ ಜೊತೆ ಫಿಂಗಲ್‌ಟನ್ ಆಡಿದ್ದರು. ಆತನ ಪುಸ್ತಕಗಳನ್ನು ಓದಿದಾಗ ಆತ ಕೂಡಾ ಬ್ರಾಡ್‌ಮನ್ ತನ್ನ ಕಾಲದ ಶ್ರೇಷ್ಠ ಬ್ಯಾಟ್ಸ್‌ಮನ್ ಆಗಿದ್ದರು ಎಂದು ಪ್ರತಿಪಾದಿಸಿದ್ದರು. ಆದರೆ ನಿರ್ದಿಷ್ಟ ಮೆಚ್ಚುಗೆಗೆ ಯೋಗ್ಯವಾದ ವ್ಯಕ್ತಿತ್ವ ಅವರದಲ್ಲವೆಂದು ಆತ ಬಣ್ಣಿಸಿದ್ದರು.

ಮಿಲ್ಲರ್ ಹಾಗೂ ಫಿಂಗಲ್‌ಟನ್ ಅವರ ಬರಹಗಳನ್ನು ಓದಿದ ಸಮಯದಲ್ಲಿ, ಆಸ್ಟ್ರೇಲಿಯನ್ ಧ್ವನಿಗಳು ನನ್ನ ಮನೆಯೊಳಗೆ ಬರುತ್ತಿದ್ದುದನ್ನು ನಾನು ಮೊದಲ ಬಾರಿಗೆ ಆಲಿಸಿದೆ. 1960ರ ದಶಕದ ಅಂತ್ಯದಲ್ಲಿ ಭಾರತದ ಮನೆಗಳಲ್ಲಿ ಟಿವಿಗಳಿರಲಿಲ್ಲ. ಹೀಗಾಗಿ ನನ್ನಂತಹ ಕ್ರಿಕೆಟ್ ಮರುಳರು ಮುದ್ರಿತ ಪದಗಳು (ಪತ್ರಿಕೆಗಳಲ್ಲಿ) ಹಾಗೂ ರೇಡಿಯೊದ ಮೂಲಕ ಕ್ರಿಕೆಟ್ ಪಂದ್ಯಗಳನ್ನು ಅನುಸರಿಸಬೇಕಾಗುತ್ತಿತ್ತು. ಪ್ರಾಯಶಃ 1967-68ರಲ್ಲಿ ಆಸ್ಟ್ರೇಲಿಯ ತಂಡದ ಭಾರತ ಪ್ರವಾಸದಲ್ಲಿನ ಪಂದ್ಯಗಳ ವೀಕ್ಷಕ (ಆಗ ನಾವು 4-0 ಪಂದ್ಯಗಳ ಅಂತರದಲ್ಲಿ ಸೋಲುಂಡಿದ್ದೆವು) ವಿವರಣೆಗಳನ್ನು ಕೇಳಿರಬೇಕು ಅನಿಸುತ್ತದೆ. ಆನಂತರದ ಚಳಿಗಾಲದ ಋತುವಿನಲ್ಲಿ ವೆಸ್ಟ್‌ಇಂಡೀಸ್ ತಂಡದ ಆಸ್ಟ್ರೇಲಿಯ ಪ್ರವಾಸದ ಬಗ್ಗೆ ನನಗೆ ಸ್ಪಷ್ಟವಾದ ನೆನಪುಗಳಿವೆ. ಆ ತಂಡದ ನಾಯಕತ್ವವನ್ನು ಡಾನ್ ಬ್ರಾಡ್‌ಮನ್‌ಗಿಂತಲೂ ಶ್ರೇಷ್ಠ ಆಟಗಾರನಾದ ಗ್ಯಾರಿಫೀಲ್ಡ್ ಸೋಬರ್ಸ್ ವಹಿಸಿದ್ದರು. ಆಗ ನಾನು ಪ್ರವಾಸಿ ತಂಡವನ್ನು ಬೆಂಬಲಿಸಿದ್ದೆ. ಎಬಿಸಿ ರೇಡಿಯೊ ನಿಲಯದಲ್ಲಿ ಅಲನ್ ಮೆಗಿಲ್‌ವ್ರೇರ ಪರಿಣಾಮಕಾರಿ ಹಾಗೂ ಲಿಂಡ್‌ಸೆ ಹಾಸೆಟ್ ಅವರ ವಿವೇಕಯುತ ಮತ್ತು ಪ್ರತಿಫಲನಾತ್ಮಕ ವೀಕ್ಷಕ ವಿವರಣೆಯಿಂದ ಪಂದ್ಯಗಳಿಗೆ ಕಾವು ದೊರೆತಿದ್ದರೂ ಕೂಡಾ, ವೆಸ್ಟ್ ಇಂಡಿಯನ್ನರು, ಆತಿಥೇಯರ (ಆಸ್ಟ್ರೇಲಿಯನ್ನರು) ಕೈಯಲ್ಲಿ 3-1 ಅಂತರದಲ್ಲಿ ಸೋಲುಂಡಾಗ ನನಗೆ ತೀವ್ರ ನಿರಾಶೆಯಾಗಿತ್ತು.

ಡೆಹ್ರಾಡೂನ್‌ನಲ್ಲಿ ಆಗ ರಕ್ತವನ್ನು ಹೆಪ್ಪುಗಟ್ಟಿಸುವಂತಹ ಚಳಿಗಾಲವಿತ್ತು. ಡಿಸೆಂಬರ್ ಅಥವಾ ಜನವರಿ ತಿಂಗಳ ಬೆಳಗ್ಗೆ 5:00ಕ್ಕೆ ಎದ್ದು, ನಮ್ಮ ಫಿಲಿಪ್ಸ್ ರೇಡಿಯೊ ಸೆಟ್ ಅನ್ನು ಹಿಡಿದುಕೊಂಡು, ಮನೆಯ ಇತರರಿಗೆ ಎಚ್ಚರವಾಗದೆ ಇರಲೆಂದು, ರೇಡಿಯೋ ವ್ಯಾಲ್ಯೂಮ್ ಅನ್ನು ಸಾಧ್ಯವಿದ್ದಷ್ಟು ಕಡಿಮೆ ಇರಿಸುತ್ತಿದ್ದೆ. ಭಾಗಶಃವಾಗಿ ಚಳಿಯಿಂದಾಗಿ ಮತ್ತು ಬಹುತೇಕವಾಗಿ ಮೆಗಿಲ್‌ವ್ರೇ ಹಾಗೂ ಹಾಸೆಟ್ ಮತ್ತು ಅವರ ಸಹದ್ಯೋಗಿಗಳ ರೋಮಾಂಚಕಾರಿ ವೀಕ್ಷಕ ವಿವರಣೆಯಿಂದಾಗಿ ನನಗೆ ಹಲ್ಲು ಕಡಿಯುವಂತಹ ಹಾಗೂ ಕಾಲು ನಡುಗುವ ಅನುಭವವಾಗುತ್ತಿತ್ತು. 1970ರ ದಶಕದುದ್ದಕ್ಕೂ ನನ್ನ ಚಳಿಗಾಲಗಳು ಇಂಗ್ಲೆಂಡ್, ವೆಸ್ಟ್ ಇಂಡೀಸ್, ಪಾಕಿಸ್ತಾನ ಹಾಗೂ ಭಾರತ ತಂಡಗಳ ಆಸ್ಟ್ರೇಲಿಯ ಪ್ರವಾಸಗಳ ಸಂಭ್ರಮದಿಂದ ತುಂಬಿದ್ದವು. ಈ ತಂಡಗಳು ಆಡಿದ ಪಂದ್ಯಗಳ ರೇಡಿಯೊ ನೇರಪ್ರಸಾರದ ವೀಕ್ಷಕ ವಿವರಣೆಯನ್ನು ಆಲಿಸುತ್ತಿದ್ದೆ ಹಾಗೂ ಮಾರನೇ ದಿನದ ಸುದ್ದಿಪತ್ರಿಕೆಯಲ್ಲಿ ಹಾಗೂ ನಮ್ಮ ಮನೆಗೆ ಬರುತ್ತಿದ್ದ ಕ್ರೀಡಾ ಪತ್ರಿಕೆಗಳಲ್ಲಿ (70ರ ದಶಕದ ಆರಂಭದಲ್ಲಿದ್ದ ಸ್ಪೋರ್ಟ್ ಆ್ಯಂಡ್ ಪಾಸ್‌ಟೈಮ್ ಪತ್ರಿಕೆ ಕೊನೆಯುಸಿರೆಳೆದರೂ, ಆ ಜಾಗವನ್ನು ತುಂಬಲು ಬಾಂಬೆಯಿಂದ ಸ್ಪೋರ್ಟ್ಸ್‌ವೀಕ್ ಪತ್ರಿಕೆ ಆಗಮಿಸಿತ್ತು) ಪಂದ್ಯದ ಕುರಿತಾದ ಸುದ್ದಿಗಳನ್ನು ಆರಾಮವಾಗಿ ಓದುತ್ತಿದ್ದೆ. ನಾನು ಬೆಳೆದು ದೊಡ್ಡವನಾಗುತ್ತಿದ್ದಂತೆಯೇ, ನಾನಾಗಿಯೇ ಪುಸ್ತಕಗಳನ್ನು ಖರೀದಿಸಲು ಆರಂಭಿಸಿದೆ. ಮೇಲೆ ಉಲ್ಲೇಖಿಸಿದ್ದಂತಹ ಜ್ಯಾಕ್ ಫಿಂಗಲ್‌ಟನ್ ಹಾಗೂ ರೇ ರಾಬಿನ್ಸನ್ ಅವರ ಪುಸ್ತಕಗಳನ್ನು ನಾನು ಓದುತ್ತಿದ್ದೆ. ರೇ ರಾಬಿನ್ಸನ್ ಅವರು ಮಿಲ್ಲರ್ ಅಥವಾ ಫಿಂಗಲ್‌ಟನ್ ಅವರ ಮಟ್ಟಕ್ಕೆ ಕ್ರಿಕೆಟ್ ಆಡದಿದ್ದರೂ, ಆತ ತನ್ನ ಆಟದಲ್ಲಿ ಉತ್ತಮ ಶೈಲಿಯ ಗ್ರಹಿಕೆಯನ್ನು ಹೊಂದಿದ್ದರು.

ನನ್ನ ಬಾಲ್ಯ ಹಾಗೂ ಯೌವನ ಕಾಲದ ಅಚ್ಚುಮೆಚ್ಚಿನ ಆಸ್ಟ್ರೇಲಿಯನ್ನರೆಂದರೆ ಕ್ರಿಕೆಟ್ ಬರಹಗಾರರು ಹಾಗೂ ಕ್ರಿಕೆಟ್ ವೀಕ್ಷಣೆಗಾರರು. ನನಗೆ 20 ವರ್ಷವಾಗಿದ್ದಾಗ 1979ರಲ್ಲಿ ಬೆಂಗಳೂರಿನಲ್ಲಿ ಟೆಸ್ಟ್ ಪಂದ್ಯ ನಡೆದಾಗ ಆಸ್ಟ್ರೇಲಿಯ ಕ್ರಿಕೆಟಿಗರನ್ನು ಮೊದಲ ಬಾರಿಗೆ ನಾನು ಪ್ರತ್ಯಕ್ಷವಾಗಿ ಕಂಡಿದ್ದೆ. ಆದರೆ ಆ ಪಂದ್ಯವು ಕೆರ್ರಿ ಪ್ಯಾಕರ್ ಅವರ ‘ಚೆಕ್ ಪುಸ್ತಕದ ಹಾಳೆಯಿಂದಾಗಿ’ ಒಂದು ಕಡೆಗೆ ವಾಲಿತ್ತು. 1980ರ ದಶಕದ ವರ್ಷಗಳು ಆಸ್ಟ್ರೇಲಿಯನ್ನರ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸದೆ ಸಂದುಹೋದವು. ಕೆರ್ರಿ ಪ್ಯಾಕರ್ ಜೊತೆಗೆ ಸಂಧಾನವು ಏರ್ಪಟ್ಟಿತ್ತಾದರೂ, ಆ ದಶಕದಲ್ಲಿ ಪೂರ್ಣ ಸಾಮರ್ಥ್ಯದ ಆಸ್ಟ್ರೇಲಿಯ ತಂಡವು ಸ್ಪರ್ಧಾತ್ಮಕವಾಗಿರಲಿಲ್ಲ. ಅದೃಷ್ಟವಶಾತ್ 1990 ಹಾಗೂ 2000ನೇ ದಶಕದಲ್ಲಿ ಉನ್ನತ ದರ್ಜೆಯ ಆಸ್ಟ್ರೇಲಿಯನ್ ತಂಡಗಳು, ಈಗ ನಾನು ನನ್ನ ಮನೆಯೆಂದು ಕರೆಯುವ ಬೆಂಗಳೂರಿನಲ್ಲಿ ಹಲವಾರು ಟೆಸ್ಟ್ ಪಂದ್ಯಗಳನ್ನು ಆಡಿದ್ದವು ಹಾಗೂ ಪಂದ್ಯಗಳಲ್ಲಿ ನಾನು ಯಾವತ್ತೂ ಉಪಸ್ಥಿತನಿರುತ್ತಿದ್ದೆ ಹಾಗೂ ಪಾಂಟಿಂಗ್ ಮತ್ತು ವಾ ಸಹೋದರರ ಬ್ಯಾಟಿಂಗ್ ಕೌಶಲ್ಯ, ಮೆಗ್ರಾ ಮತ್ತು ವಾರ್ನ್ ಅವರ ಬೌಲಿಂಗ್ ಹಾಗೂ ಹೀಲಿ ಮತ್ತು ಗಿಲ್‌ಕ್ರಿಸ್ಟ್ ಅವರ ವಿಕೆಟ್ ಕೀಪಿಂಗ್ ಚಾತುರ್ಯದಲ್ಲಿ ಮಿಂದೇಳುತ್ತಿದ್ದೆ.

ಜೀವಮಾನದುದ್ದಕ್ಕೂ ನಾನು ಆ ದೇಶದ ಕ್ರಿಕೆಟಿಗರ ಕುರಿತು ಓದುತ್ತಾ, ಕೇಳುತ್ತಾ ಹಾಗೂ ವೀಕ್ಷಿಸುತ್ತಾ ಬಂದಿರುವೆ. ಸಾರ್ವಕಾಲಿಕ ಶ್ರೇಷ್ಠ ಆಸ್ಟ್ರೇಲಿಯನ್ ಟೆಸ್ಟ್ ಇಲೆವೆನ್ ಆಟಗಾರರ ಕುರಿತ ಚರ್ಚಾಕೂಟದಲ್ಲಿ ಉಪಸ್ಥಿತನಿದ್ದೆ. ಆ ಆಟಗಾರರ ಬ್ಯಾಟಿಂಗ್ ಕೌಶಲ್ಯದ ಪ್ರಕಾರ ರ್ಯಾಂಕಿಂಗ್ ನೀಡಿರುವೆ. 1. ವಿಕ್ಟರ್ ಟ್ರಂಪರ್ 2. ಆರ್ಥರ್ ಮೊರಿಸ್ 3. ಡಾನ್ ಬ್ರಾಡ್‌ಮನ್ 4. ರಿಕಿ ಪಾಂಟಿಂಗ್ 5. ಆಲನ್ ಬಾರ್ಡರ್ 6. ಕೀತ್ ಮಿಲ್ಲರ್ 7. ಆ್ಯಡಂ ಗಿಲ್‌ಕ್ರಿಸ್ಟ್ 8. ಶೇನ್ ವಾರ್ನ್ 9. ಡೆನ್ನಿಸ್ ಲಿಲ್ಲಿ 10. ಬಿಲ್ ಒ ರಿಲ್ಲಿ 11. ಗ್ಲೆನ್ ಮೆಗ್ರಾ.

ಸ್ಟೀವ್ ಸ್ಮಿತ್ ಇನ್ನೂ ಆಡುತ್ತಿರುವುದರಿಂದ ಆತನನ್ನು ಈ ಇಲೆವೆನ್ ಪಟ್ಟಿಯಿಂದ ಹೊರಗಿಟ್ಟಿರುವೆ. ಆರಂಭಿಕ ಆಟಗಾರರು ಅತ್ಯಂತ ವಿವಾದಾತ್ಮಕ ಆಯ್ಕೆಗಳೆಂದು ನಾನು ಶಂಕಿಸುತ್ತೇನೆ. ಇತ್ತೀಚಿನ ಪಕ್ಷಪಾತ ಧೋರಣೆಯಿಂದಾಗಿ, ಹಲವು ಕ್ರಿಕೆಟ್ ಪ್ರೇಮಿಗಳು ಮಾರ್ಕ್ ಟೇಲರ್ ಹಾಗೂ ಮ್ಯಾಥ್ಯೂ ಹೇಡನ್ ಅವರನ್ನು ಆಯ್ಕೆ ಮಾಡುವಂತೆ ಮಾಡಿದೆ. ಇವರಿಬ್ಬರ ಸಮೃದ್ಧವಾದ ರನ್ ಸ್ಕೋರಿಂಗ್ ವೈಭವವನ್ನು ಮುಂದಿನ ಪೀಳಿಗೆಗಾಗಿ ಟೆಲಿವಿಶನ್ ಸೆರೆಹಿಡಿದಿದೆ ಹಾಗೂ ಅವುಗಳು ಯೂಟ್ಯೂಬ್‌ನಲ್ಲಿ ಪದೇ ಪದೇ ವೀಕ್ಷಣೆಗೊಳಗಾಗುತ್ತಿವೆ. ಅದರೂ, ಟ್ರಂಪರ್ ಆಸ್ಟ್ರೇಲಿಯದ ಕ್ರಿಕೆಟಿಂಗ್ ಸ್ಮತಿಯಲ್ಲಿ ಹಾಗೂ ಜಾನಪದದಲ್ಲಿ ವಿಶೇಷವಾದ ಸ್ಥಾನವನ್ನು ಪಡೆದಿದ್ದಾರೆ. ಅವರ ಕುರಿತಾಗಿ ಜ್ಯಾಕ್ ಫಿಂಗಲ್‌ಟನ್ ಹಾಗೂ ಗಿಡಿಯೊನ್ ಹೈಗ್ ಅವರ ಬರಹಗಳೂ ಇದಕ್ಕೆ ಸಾಕ್ಷಿಯಾಗಿವೆ. ಟ್ರಂಪರ್ ಅವರಂತೆ ಆರ್ಥರ್ ಮೊರಿಸ್ ಕೂಡಾ ಅದ್ಭುತವಾದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಆಗಿದ್ದು, ಸ್ಪಿನ್ ಹಾಗೂ ಪೇಸ್ ಬೌಲಿಂಗ್‌ನಲ್ಲಿ ಅವರ ಪಾಂಡಿತ್ಯವನ್ನು ಅವರ ತಂಡದ ಸಹ ಆಟಗಾರರು ಹಾಗೂ ಎದುರಾಳಿ ಆಟಗಾರರು ಅಳವಡಿಸಿಕೊಳ್ಳಲು ಯತ್ನಿಸಿದ್ದರು. ನನ್ನ ಅಲ್‌ಟೈಮ್ ಇಲೆವೆನ್ ತಂಡದಲ್ಲಿ ಯಾವುದೇ ರೇಟಿಂಗ್‌ನಲ್ಲಿಯೂ ಮಾರಿಸ್ ತನ್ನ ಸಹ ಎಡಗೈ ಬ್ಯಾಟ್ಸ್‌ಮನ್‌ಗಳಾದ ಟೇಲರ್ ಹಾಗೂ ಹೇಡನ್‌ಗಿಂತ ಮುಂದೆ ನಿಲ್ಲುತ್ತಾರೆ.

ಇನ್ನೂ ಕೆಲವು ವಿವಾದದ ಬಗ್ಗೆ ವಿಮರ್ಶಿಸೋಣ. ಈ ಇಲೆವೆನ್‌ನ ಕ್ಯಾಪ್ಟನ್ ಯಾರು?. ಬ್ರಾಡ್‌ಮನ್ ಅವರು ಸ್ಪಷ್ಟವಾದ ಆಯ್ಕೆ ಎಂಬುದು ನನಗೆ ತಿಳಿದಿದ್ದರೂ, ನಾನು ಆಲನ್ ಬಾರ್ಡರ್ ಪರವಾಗಿರುತ್ತೇನೆ. ಡಾನ್ ಬ್ರಾಡ್‌ಮನ್ ಕ್ರಿಕೆಟ್‌ನ ಎಲ್ಲಾ ವಿಭಾಗಗಳಲ್ಲೂ ತಂಡವನ್ನು ಗೆಲುವಿನೆಡೆಗೆ ಮುನ್ನಡೆಸಬಹುದಾದಂತಹ ಅದ್ಭುತವಾದ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಇನ್ನೊಂದೆಡೆ ಆಲನ್ ಬಾರ್ಡರ್ ಆಸ್ಟ್ರೇಲಿಯ ತಂಡಕ್ಕೆ ಅದರ ಕ್ರಿಕೆಟ್ ಇತಿಹಾಸದ ಅತ್ಯಂತ ಸಂಕಷ್ಟಕರ ಅವಧಿಯಲ್ಲಿ ಮಾರ್ಗದರ್ಶಕರಾಗಿದ್ದರು. ಎಲ್ಲಾ ವಿಧದಲ್ಲೂ ಉದಯೋನ್ಮುಖ ಆಟಗಾರರನ್ನು ಬೆಳೆಸುವುದರಲ್ಲಿ ಹಾಗೂ ತಂಡಸ್ಫೂರ್ತಿಯನ್ನು ರೂಪಿಸುವಲ್ಲಿ ಅತ್ಯುತ್ತಮರಾಗಿದ್ದರು. ಈ ತಂಡ ಹಾಗೂ ಫ್ರಾಂಕ್ ವಾರೆಲ್ ನೇತೃತ್ವದ ವೆಸ್ಟ್ ಇಂಡಿಯನ್ ಆಲ್‌ಟೈಮ್ ತಂಡದ ನಡುವಿನ ಕಾಲ್ಪನಿಕ ಸ್ಪರ್ಧೆಯಲ್ಲಿ ನಾನು ಬ್ರಾಡ್‌ಮನ್‌ಗಿಂತಲೂ ಹೆಚ್ಚಾಗಿ ಬಾರ್ಡರ್ ಅವರಲ್ಲಿ ಹೆಚ್ಚು ವಿಶ್ವಾಸವಿರಿಸುತ್ತೇನೆ.

ಇಂಗ್ಲೆಂಡ್‌ನ ಕ್ರಿಕೆಟ್ ಬರಹಗಾರರ ಪೈಕಿ ಅತ್ಯಂತ ಕನಿಷ್ಠ ಮಟ್ಟದ ಸಂಕುಚಿತ ಧೋರಣೆಯುಳ್ಳವರಾದ ಜಾನ್ ಆರ್ಲಟ್ ಅವರ ಬರಹವನ್ನು ಉಲ್ಲೇಖಿಸುವ ಮೂಲಕ ಆಸ್ಟ್ರೇಲಿಯ ಕ್ರಿಕೆಟಿಗರಿಗೆ ಗೌರವನಮನದೊಂದಿಗೆ ಲೇಖನವನ್ನು ಮುಗಿಸುತ್ತೇನೆ.

 1948ರ ಇಂಗ್ಲೆಂಡ್ ಪ್ರವಾಸದ ಆನಂತರ ಆರ್ಲಟ್ ಅವರು ಆಸ್ಟ್ರೇಲಿಯನ್ನರ ಕ್ರಿಕೆಟ್ ಆಟದ ಬಗ್ಗೆ ಕಿರು ಹಾಗೂ ಅತ್ಯಂತ ಗ್ರಹಿಕೆಯಿಂದ ಕೂಡಾ ಪ್ರಬಂಧವೊಂದನ್ನು ಬರೆದಿದ್ದರು. ಹಲವು ಪ್ರಶ್ನೆಗಳ ಗುಚ್ಛದೊಂದಿಗೆ ಈ ಪ್ರಬಂಧವು ಆರಂಭಗೊಳ್ಳುತ್ತದೆ. ‘‘ಆಸ್ಟ್ರೇಲಿಯದ ಕ್ರಿಕೆಟಿಗರು ಯಾಕೆ ವಿಭಿನ್ನರಾಗಿದ್ದಾರೆ? ಆಸ್ಟ್ರೇಲಿಯ ವಿರುದ್ಧದ ಟೆಸ್ಟ್ ಪಂದ್ಯವು ಇತರ ಯಾವ ದೇಶದ ಟೆಸ್ಟ್ ಪಂದ್ಯಕ್ಕಿಂತ ಯಾಕೆ ವಿಭಿನ್ನವಾಗಿದೆ?. ಅದು ವಿಭಿನ್ನವಾದುದೆಂದು ನಾವು ಯಾಕೆ ಭಾವಿಸಬೇಕು?.’’ ಮುಂದುವರಿದು ಅರ್ಲಟ್ ಅವರು ಆಸ್ಟ್ರೇಲಿಯದ ಕ್ರಿಕೆಟಿಗರು ಕೆಲವು ವಿಶೇಷ ಗುಣಲಕ್ಷಣಗಳನ್ನು ಪ್ರದರ್ಶಿಸಿದಂತಹ ತಾನು ವೀಕ್ಷಿಸಿದ ಅಥವಾ ಓದಿದ ಪಂದ್ಯಗಳ ಬಗ್ಗೆ ಬಣ್ಣಿಸುತ್ತಾರೆ.

‘‘ಇಂಗ್ಲಿಷ್ ತಂಡವು ಆ್ಯಷಸ್ ಟೆಸ್ಟ್ ಆಡುವಾಗಲೆಲ್ಲಾ ಅದು, ಆಸ್ಟ್ರೇಲಿಯನ್ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್, ನಾಯಕತ್ವ ಹಾಗೂ ‘ಆಸ್ಟ್ರೇಲಿಯನಿಸಂ’ ಅನ್ನು ಎದುರಿಸುತ್ತದೆ. ‘ಆಸ್ಟ್ರೇಲಿಯನಿಸಂ’ ಎಂದರೆ ಗೆಲುವನ್ನು ಸಾಧಿಸುವ ಏಕಮನಸ್ಕ ದೃಢನಿರ್ಧಾರವಾಗಿದೆ. ನಿಯಮಗಳ ಮಿತಿಯೊಳಗೆ ಗೆಲುವನ್ನು ಪಡೆಯುವುದು, ಅಗತ್ಯಬಿದ್ದಲ್ಲಿ ನಿಯಮದ ಕಡೆಯ ಮಿತಿಯವರೆಗೂ ಹೋಗುವುದು. ಅಂದರೆ ಮಾನವನ ದೇಹವು ಸಾಧಿಸಬಹುದಾದ ವ್ಯಾಪ್ತಿಯೊಳಗೆ ಅಸಾಧ್ಯವಾದುದನ್ನು ಮಾಡಿ ತೋರಿಸುವುದಾಗಿದೆ. ತಾವು ಹಾಗೆ ಸಾಧಿಸಬಲ್ಲೆವು ಎಂಬುದನ್ನು ನಂಬುವ ಆಸ್ಟ್ರೇಲಿಯನ್ನರಿದ್ದಾರೆ. ತಾವು ಯಾವುದೇ ಪಂದ್ಯವನ್ನು ಅದರಲ್ಲೂ ಟೆಸ್ಟ್ ಪಂದ್ಯವನ್ನು ಕೊನೆಯ ರನ್ ಸ್ಕೋರ್ ಮಾಡುವ ತನಕ ಅಥವಾ ಕೊನೆಯ ವಿಕೆಟ್ ಬೀಳುವವರೆಗೂ ತಾವು ಪಂದ್ಯವನ್ನು ಸೋತಿರುವುದಿಲ್ಲವೆಂದೇ ಅವರು ಭಾವಿಸಿಕೊಳ್ಳುತ್ತಾರೆ.’’

ಮೇಲಿನ ಬರಹವನ್ನು ಇಂಗ್ಲಿಷ್ ವ್ಯಕ್ತಿಯೊಬ್ಬನ ಗ್ರಹಿಕೆಯೊಂದಿಗೆ ಬರೆಯಲಾಗಿದೆ. ಆದಾಗ್ಯೂ ಇದು ಕ್ರಿಕೆಟ್‌ನಲ್ಲಿ ತಮ್ಮ ದೇಶದ ತಂಡವು ಆಸ್ಟ್ರೇಲಿಯನ್ನರ ಜೊತೆ ಆಡುವುದನ್ನು ವೀಕ್ಷಿಸಿದ ಎಲ್ಲಾ ಭಾರತೀಯರ ಭಾವನೆಯನ್ನು ಪ್ರತಿಧ್ವನಿಸುತ್ತದೆ. ಶೀಘ್ರದಲ್ಲೇ ಆಸ್ಟ್ರೇಲಿಯದಲ್ಲಿ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯು, 70 ವರ್ಷಗಳ ಹಿಂದೆ ಆರ್ಲೆಟ್ ವ್ಯಕ್ತಪಡಿಸಿದ ಅನಿಸಿಕೆಗಳನ್ನು ಖಂಡಿತವಾಗಿ ಇನ್ನಷ್ಟು ದೃಢಪಡಿಸಲಿದೆ.
(ರಾಮಚಂದ್ರ ಗುಹಾ ಅವರ ಕಾಮನ್‌ವೆಲ್ತ್ ಆಫ್ ಕ್ರಿಕೆಟ್ ಇತ್ತೀಚೆಗೆ ಪ್ರಕಟವಾಗಿದೆ)
 

Writer - ರಾಮಚಂದ್ರ ಗುಹಾ

contributor

Editor - ರಾಮಚಂದ್ರ ಗುಹಾ

contributor

Similar News