ಮ್ಯಾಕ್ಸ್ ವೆಲ್-ಜಮೀಸನ್ ಸೇರ್ಪಡೆ ಆರ್‌ಸಿಬಿ ತಂಡದ ಪ್ರಶಸ್ತಿಯ ಬರವನ್ನು ಹೋಗಲಾಡಿಸಿತೇ?

Update: 2021-04-04 05:08 GMT

 ಹೊಸದಿಲ್ಲಿ: ಐಪಿಎಲ್‌ನ ಹದಿಮೂರು ಆವೃತ್ತಿಗಳಲ್ಲಿ ಒಮ್ಮೆಯೂ ಪ್ರಶಸ್ತಿ ಎತ್ತದೆ ಪ್ರಶಸ್ತಿಯ ಬರ ಎದುರಿಸುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಬಾರಿ ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ನ್ಯೂಝಿಲ್ಯಾಂಡ್‌ನ ವೇಗಿ ಕೈಲ್ ಜಮೀಸನ್ ಸೇರ್ಪಡೆಯಾಗಿದೆ. ಈ ಬಾರಿ ಇವರ ನೆರವಿನಲ್ಲಿ ಪ್ರಶಸ್ತಿಯ ಬರ ನೀಗಿಸುವ ಪ್ರಯತ್ನದಲ್ಲಿದೆ.

ತಂಡದಲ್ಲಿನ ಸಮತೋಲನ ಸಮಸ್ಯೆಗಳು, ಗಾಯಾಳುಗಳು ಮತ್ತು ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಅವರ ಮೇಲೆ ಹೆಚ್ಚು ಅವಲಂಬನೆ ಕಾರಣದಿಂದಾಗಿ ಕಳೆದ ಋತುವಿನಲ್ಲಿ ಆರ್‌ಸಿಬಿ ಪ್ರಶಸ್ತಿ ಗೆಲ್ಲುವ ಅವಕಾಶಗಳನ್ನು ಕಳೆದುಕೊಂಡಿತು.

  ಕಳೆದ ಬಾರಿ ಆರ್‌ಸಿಬಿಯ ಆರಂಭ ಚೆನ್ನಾಗಿತ್ತು. ಕೊನೆಯ ಹಂತದಲ್ಲಿ ಸತತ ಸೋಲು ಅನುಭವಿಸಿತು. ಎಲಿಮಿನೇಟರ್‌ಗೆ ಏರಿದ್ದರೂ, ಎಲಿಮಿನೇಟರ್‌ನಲ್ಲಿ ಸೋಲು ಅನುಭವಿಸಿ ಅಭಿಯಾನ ಕೊನೆಗೊಳಿಸಿತು. ಈ ಬಾರಿ ಆಟಗಾರರ ಹರಾಜಿಗೆ ಮುಂಚಿತವಾಗಿ 10 ಆಟಗಾರರನ್ನು ಬಿಡುಗಡೆ ಮಾಡಿದ ನಂತರ ತಂಡದ ಆಡಳಿತವು ಬ್ಯಾಟಿಂಗ್ ಮತ್ತು ಪೇಸ್ ಬೌಲಿಂಗ್ ಘಟಕಗಳನ್ನು ಬಲಪಡಿಸುವತ್ತ ಗಮನ ಹರಿಸಿದೆ. ಎಪ್ರಿಲ್ 9ರಂದು ನಡೆಯಲಿರುವ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಆರ್‌ಸಿಬಿ ಎದುರಿಸಲಿದೆ. ಸಾಮರ್ಥ್ಯ:

 ಆರ್‌ಸಿಬಿ ಕಾಗದದ ಮೇಲೆ ಬಲವಾದ ಬ್ಯಾಟಿಂಗ್ ಲೈನ್‌ನ್ನು ಜೋಡಿಸಿದೆ. ರನ್-ಮೆಷಿನ್ ನಾಯಕ ವಿರಾಟ್ ಕೊಹ್ಲಿ ಲೀಗ್‌ನಲ್ಲಿ ಓಪನರ್ ಆಗಿ ಪ್ರಭಾವಶಾಲಿ ದಾಖಲೆಯನ್ನು ಹೊಂದಿದ್ದಾರೆ. ಅವರು ಇನಿಂಗ್ಸ್‌ನ್ನು ಆರಂಭಿಸುವ ಬಗ್ಗೆ ಈಗಾಗಲೇ ದೃಢಪಡಿಸಿದ್ದಾರೆ.

   ಕಳೆದ ಆವೃತ್ತಿಯಲ್ಲಿ ಗಮನ ಸೆಲೆದ ಈಗ ಅತ್ಯುತ್ತಮ ಫಾರ್ಮ್‌ನಲ್ಲಿರುವ ದೇವದತ್ತ ಪಡಿಕ್ಕಲ್ ಅವರು ಕೊಹ್ಲಿಗೆ ಇನಿಂಗ್ಸ್ ಆರಂಭಿಸಲು ಸಾಥ್ ನೀಡಲಿದ್ದಾರೆ. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 194.54ರ ಸ್ಟ್ರೈಕ್ ರೇಟ್ ಹೊಂದಿದ್ದ ಯುವ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಕೇರಳದ ಮುಹಮ್ಮದ್ ಅಝರುದ್ದೀನ್ ಮತ್ತು ನ್ಯೂಝಿಲ್ಯಾಂಡ್‌ನ ಫಿನ್ ಅಲೆನ್ ತಂಡದ ಬ್ಯಾಟಿಂಗ್‌ನಲ್ಲಿ ಆಕ್ರಮಣಕಾರಿ ಆಯ್ಕೆಗಳಾಗಿವೆ. ಡಿವಿಲಿಯರ್ಸ್ ಮತ್ತು ಮ್ಯಾಕ್ಸ್‌ವೆಲ್ ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ಗೆ ಶಕ್ತಿಯಾಗಿದ್ದಾರೆ. ಸಚಿನ್ ಬೇಬಿ, ಅನುಭವಿ ಡೇನಿಯಲ್ ಕ್ರಿಶ್ಚಿಯನ್ ಮತ್ತು ವಾಶಿಂಗ್ಟನ್ ಸುಂದರ್ ತಂಡದ ಬ್ಯಾಟಿಂಗ್‌ಗೆ ಶಕ್ತಿ ತುಂಬಲಿದ್ದಾರೆ.

ಆರ್‌ಸಿಬಿ ತಂಡದ ಸ್ಪಿನ್ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ ಮತ್ತು ಚೆನ್ನೈ ಮತ್ತು ಅಹಮದಾಬಾದ್‌ನಲ್ಲಿನ ನಿಧಾನಗತಿಯ ಟ್ರಾಕ್‌ಗಳಲ್ಲಿ ಅವರು ತಮ್ಮ ಪಂದ್ಯಗಳ ಪ್ರಮುಖ ಭಾಗವನ್ನು ಆಡಲಿದ್ದಾರೆ. ಈ ಕಾರಣದಿಂದಾಗಿ ತಂಡಕ್ಕೆ ವಾತಾವರಣ ಅನುಕೂಲವಾಗಿದೆ.

  ಲೆಗ್-ಸ್ಪಿನ್ನರ್ ಯಜುವೇಂದ್ರ ಚಹಾಲ್ ಲೀಗ್‌ನಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ ಮತ್ತು ಚೆಂಡಿನೊಂದಿಗೆ ಮ್ಯಾಜಿಕ್ ಮಾಡಲು ಉತ್ಸುಕರಾಗುತ್ತಾರೆ. ಅವರೊಂದಿಗೆ ಆಫ್-ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ಸೇರಿಕೊಳ್ಳಲಿದ್ದಾರೆ.

   ವೈಟ್-ಬಾಲ್ ಕ್ರಿಕೆಟ್ ಮತ್ತು ಬಿಗ್ ಬ್ಯಾಷ್ ಲೀಗ್‌ನಲ್ಲಿ ನಿರಂತರವಾಗಿ ಬೌಲಿಂಗ್ ಮಾಡುವ ಮ್ಯಾಕ್ಸ್‌ವೆಲ್ ತಂಡಕ್ಕೆ ನೆರವಾಗಲಿದ್ದಾರೆ. ಆದರೆ ಆಸ್ಟ್ರೇಲಿಯದ ಆ್ಯಡಮ್ ಝಂಪಾ ತಂಡದಲ್ಲಿರುವ ಮತ್ತೊಂದು ಲಭ್ಯವಿರುವ ಲೆಗ್ ಸ್ಪಿನ್ ಆಯ್ಕೆಯಾಗಿದೆ.

  ದೌರ್ಬಲ್ಯ: ಆರ್‌ಸಿಬಿ ವೇಗದ ಬೌಲಿಂಗ್ ವಿಭಾಗವು ಸ್ವಲ್ಪ ಮಟ್ಟಿಗೆ ಅನುಭವಿಗಳ ಕೊರತೆ ಎದುರಿಸುತ್ತಿದೆ. ನವದೀಪ್ ಸೈನಿ ಮತ್ತು ಮುಹಮ್ಮದ್ ಸಿರಾಜ್ ಅವರು ಬಿಳಿ ಚೆಂಡಿನೊಂದಿಗೆ ಬೌಲಿಂಗ್ ಮಾಡಿದ ಅನುಭವವನ್ನು ಹೊಂದಿರುವುದಿಲ್ಲ. ರನ್ ಸೋರಿಕೆಯ ಪ್ರವೃತ್ತಿಗೆ ಅವರು ಕಡಿವಾಣ ಹಾಕಬೇಕಿದೆ.

ಜೇಮೀಸನ್ ಟ್ವೆಂಟಿ -20 ಪಂದ್ಯಗಳಲ್ಲಿ ಕಷ್ಟಪಟ್ಟಿದ್ದಾರೆ. ಭಾರತದಲ್ಲಿ ಆಡಿರುವ ಅನುಭವ ಹೊಂದಿಲ್ಲ. ಇತರ ಆಯ್ಕೆಗಳಲ್ಲಿ ಮಧ್ಯಮ ವೇಗಿ ಹರ್ಷಲ್ ಪಟೇಲ್ ಮತ್ತು ಆಸ್ಟ್ರೇಲಿಯದ ಕ್ರಿಶ್ಚಿಯನ್, ಡೇನಿಯಲ್ ಸ್ಯಾಮ್ಸ್ ಮತ್ತು ಕೇನ್ ರಿಚರ್ಡ್ಸನ್ ಇದ್ದಾರೆ.

  ಅವಕಾಶ: ತಂಡದಲ್ಲಿರುವ ದೊಡ್ಡ- ಹಿಟ್ಟರ್‌ಗಳು ದೊಡ್ಡ ಮೊತ್ತದ ಸವಾಲನ್ನು ಬೆನ್ನಟ್ಟುವಾಗ ಆರ್‌ಸಿಬಿಗೆ ನೆರವಾಗಲಿದ್ದಾರೆ. ಇಬ್ಬರು ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಾದ ಅಝರುದ್ದೀನ್ ಮತ್ತು ಸಚಿನ್‌ಅವಕಾಶಗಳನ್ನು ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ.

ಮ್ಯಾಕ್ಸ್‌ವೆಲ್ ತಂಡದ ಶಕ್ತಿಯನ್ನು ಹೆಚ್ಚಿಸಿದ್ದಾರೆ. ಅವನು ಬ್ಯಾಟ್‌ನೊಂದಿಗೆ ತಳವೂರಿದರೆ ಎದುರಾಳಿ ತಂಡಕ್ಕೆ ಅಪಾಯ ಖಚಿತ.

 ತಂಡ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ಯಜುವೇಂದ್ರ ಚಹಾಲ್, ಮುಹಮ್ಮದ್ ಸಿರಾಜ್, ಕೇನ್ ರಿಚರ್ಡ್ಸನ್, ವಾಶಿಂಗ್ಟನ್ ಸುಂದರ್, ಪವನ್ ದೇಶಪಾಂಡೆ, ಫಿನ್ ಅಲೆನ್, ಶಹಬಾಝ್ ಅಹ್ಮದ್, ನವದೀಪ್ ಸೈನಿ, ಆ್ಯಡಮ್ ಝಾಂಪಾ, ಕೈಲ್ ಜಮೀಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಸಚಿನ್ ಬೇಬಿ, ಮುಹಮ್ಮದ್ ಅಝರುದ್ದೀನ್, ಡೇನಿಯಲ್ ಕ್ರಿಶ್ಚಿಯನ್, ಕೆ.ಎಸ್.ಭರತ್, ಸುಯಾಶ್ ಪ್ರಭುದೇಸಾಯಿ, ಡೇನಿಯಲ್ ಸ್ಯಾಮ್ಸ್, ಹರ್ಷಲ್ ಪಟೇಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News