ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿ ಮುಂಬೈ ಇಂಡಿಯನ್ಸ್

Update: 2021-04-04 18:57 GMT

ಮುಂಬೈ: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮತ್ತೊಮ್ಮೆ ಪ್ರಶಸ್ತಿಯನ್ನು ಗೆಲ್ಲುವ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದೆ. ಈ ಕಾರಣದಿಂದಾಗಿ ತಮ್ಮ ಗೆಲುವಿನ ಹಾದಿಯನ್ನು ಮುಂದುವರಿಸಲು ಪ್ರಯತ್ನಿಸುತ್ತಿದೆ. ಎಂಐ ಕಳೆದ ವರ್ಷ ಐದನೇ ಬಾರಿ ಐಪಿಎಲ್ ಪ್ರಶಸ್ತಿ ಜಯಿಸಿತ್ತು. ಈ ದಾಖಲೆಯನ್ನು ಮುಂದುವರಿಸಲು ಪ್ರಯತ್ನಿಸುತ್ತಿದೆ. ಹ್ಯಾಟ್ರಿಕ್ ಪ್ರಶಸ್ತಿ ಗೆಲುವಿನತ್ತ ನೋಡುತ್ತಿದೆ.

ಯುಎಇಯಲ್ಲಿ ನಡೆದ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆಡಿದ 14 ಪಂದ್ಯಗಳಲ್ಲಿ 9 ಪಂದ್ಯಗಳನ್ನು ಮುಂಬೈ ಇಂಡಿಯನ್ಸ್ ಜಯಿಸಿ, ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ್ನು ಮಣಿಸಿ ಪ್ರಶಸ್ತಿಯನ್ನು ಬಾಚಿಕೊಂಡಿತ್ತು.

 ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕ್ವಿಂಟನ್ ಡಿ ಕಾಕ್ ಮತ್ತು ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃನಾಲ್ ಮತ್ತಿತರ ಆಟಗಾರರು ಪಂದ್ಯಾವಳಿಯುದ್ದಕ್ಕೂ ಅದ್ಭುತ ಫಾರ್ಮ್‌ನಲ್ಲಿದ್ದರು. ಇದು ಮುಂಬೈ ತಂಡ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಐಪಿಎಲ್ 2020ರಲ್ಲಿ ನೀಡಿರುವ ಪ್ರದರ್ಶನ ಕಿಶನ್ ಮತ್ತು ಸೂರ್ಯ ಕುಮಾರ್‌ಗೆ ಭಾರತದ ಟ್ವೆಂಟಿ-20 ತಂಡ ಪ್ರವೇಶಿಸಲು ನೆರವಾಗಿತ್ತು. ಭಾರತದ ತಂಡದಲ್ಲಿರುವ ಬಹುತೇಕ ಆಟಗಾರರು ಐಪಿಎಲ್ 2021ಆವೃತ್ತಿಗೆ ವಿವಿಧ ತಂಡಗಳಲ್ಲಿ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಹೊಸ ನೇಮಕಾತಿ: 2021ರ ಋತುವಿನ ಐಪಿಎಲ್ ಹರಾಜಿನಲ್ಲಿ ಮತ್ತೊಮ್ಮೆ ಆ್ಯಡಮ್ ಮಿಲ್ನೆ, ಜೇಮ್ಸ್ ನೀಶಮ್ ಮತ್ತು ಮಾರ್ಕೊ ಜಾನ್ಸೆನ್ ಅವರಂತಹ ಬಲಿಷ್ಠ ಆಟಗಾರರನ್ನು ಮುಂಬೈ ಇಂಡಿಯನ್ಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ತಮ್ಮ ಬೌಲಿಂಗ್ ದಾಳಿಯನ್ನು ಬಲಿಷ್ಠಗೊಳಿಸಲು ನಾಥನ್ ಕೌಲ್ಟರ್-ನೀಲ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ತಂಡದಲ್ಲಿ ಈಗಾಗಲೇ ಜಸ್‌ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೌಲ್ಟ್ ಇದ್ದಾರೆ.

ಮಿಲ್ನೆ 2 ವರ್ಷಗಳ ನಂತರ ನ್ಯೂಝಿಲ್ಯಾಂಡ್ ತಂಡಕ್ಕೆ ಇತ್ತೀಚೆಗೆ ವಾಪಸಾಗಿದ್ದರು. ಬಾಂಗ್ಲಾದೇಶ ವಿರುದ್ಧ ಅವರು ಆಡಿದ 2 ಟ್ವೆಂಟಿ-20 ಪಂದ್ಯಗಳಲ್ಲಿ 3 ವಿಕೆಟ್ ಪಡೆದರು. 28ರ ಮಿಲ್ನೆ ಎಂಐ ಘಟಕದಲ್ಲಿ ಅತಿ ವೇಗದ ಬೌಲರ್ ಆಗಿದ್ದಾರೆ. ಮಿಲ್ನೆ ಅವರ ಕಿವೀಸ್ ತಂಡದ ಸಹ ಆಟಗಾರ ನೀಶಮ್ ಬಾಂಗ್ಲಾದೇಶ ವಿರುದ್ಧ ಟ್ವೆಂಟಿ-20 ಸರಣಿಯಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದರು. ಈ ಋತುವಿನಲ್ಲಿ ಎಂಐಗೆ ಮತ್ತೊಂದು ಆಸಕ್ತಿದಾಯಕ ಸೇರ್ಪಡೆ ಎಂದರೆ ಅರ್ಜುನ್ ತೆಂಡುಲ್ಕರ್. ಎಡಗೈ ವೇಗಿ ಈ ವರ್ಷ ಐಪಿಎಲ್‌ಗೆ ಪಾದಾರ್ಪಣೆ ಮಾಡಲು ತನ್ನ ತಂದೆ ಸಚಿನ್ ತೆಂಡುಲ್ಕರ್ ಮಾರ್ಗದರ್ಶನದಲ್ಲಿ ತರಬೇತಿ ಪಡೆಯಲಿದ್ದಾರೆ.

 ಮಾಲಿಂಗರ ಅನುಪಸ್ಥಿತಿ : ವೈಯಕ್ತಿಕ ಕಾರಣಗಳಿಂದಾಗಿ ಲಂಕಾದ ವೇಗಿ ಲಸಿತ್ ಮಾಲಿಂಗ ಕಳೆದ ವರ್ಷ ಐಪಿಎಲ್ ತಪ್ಪಿಸಿಕೊಂಡರು. ಬಳಿಕ ಅವರನ್ನು ತಂಡದಿಂದ ಬಿಡುಗಡೆಗೊಳಿಸಲಾಯಿತು. 13 ವರ್ಷಗಳ ಕಾಲ ಐಪಿಎಲ್‌ನಲ್ಲಿದ್ದ ಅವರ ಸಂಬಂಧ ಕೊನೆಗೊಂಡಿತು. ಶ್ರೀಲಂಕಾದ ದಂತಕಥೆ ಮಾಲಿಂಗ ಮುಂಬೈ ತಂಡದಲ್ಲಿ ಉತ್ತಮ ಸ್ಥಾನಮಾನ ಹೊಂದಿದ್ದರು. ಐಪಿಎಲ್‌ನಲ್ಲಿ ಯಶಸ್ವಿ ಬೌಲರ್ ಎನಿಸಿಕೊಂಡಿರುವ ಮಾಲಿಂಗ 122 ಪಂದ್ಯಗಳನ್ನು ಆಡಿದ್ದಾರೆ. 170 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಐಪಿಎಲ್ 2020ರಲ್ಲಿ ಮುಂಬೈ ತಂಡದಲ್ಲಿ ಮಾಲಿಂಗ ಒಂದೇ ಒಂದು ಪಂದ್ಯವನ್ನು ಆಡದಿದ್ದರೂ ಅವರು ತಂಡದಲ್ಲಿದ್ದರು. ಆದರೆ ಈ ಬಾರಿ ಅಧಿಕೃತವಾಗಿ ಮಾಲಿಂಗ ಇಲ್ಲದೆ ಮುಂಬೈ ಐಪಿಎಲ್‌ನಲ್ಲಿ ಹಣಾಹಣಿ ನಡೆಸಲಿದೆ. 37ರ ಹರೆಯದ ಮಾಲಿಂಗ ಈ ವರ್ಷದ ಆರಂಭದಲ್ಲಿ ಫ್ರಾಂಚೈಸ್ ಕ್ರಿಕೆಟ್‌ನಿಂದ ನಿವೃತ್ತರಾದರು. ಕಳೆದ ವರ್ಷ ಮಾಲಿಂಗರ ಅನುಪಸ್ಥಿತಿ ಮುಂಬೈ ತಂಡಕ್ಕೆ ಕಾಡಲಿಲ್ಲ. ಜಸ್‌ಪ್ರೀತ್ ಬುಮ್ರಾ ಅವರಿಗೆ ಐಪಿಎಲ್‌ನಲ್ಲಿ ದಾಳಿಯನ್ನು ಮುನ್ನಡೆಸಲು ಮಾಲಿಂಗ ತರಬೇತಿ ನೀಡಿದ್ದಾರೆ.

  

 ತಂಡದ ಸಮತೋಲನೆ: ಮುಂಬೈ ತಂಡದಲ್ಲಿ ಕೀರನ್ ಪೊಲಾರ್ಡ್, ಹಾರ್ದಿಕ್, ಕೃನಾಲ್ ಮತ್ತು ಕೌಲ್ಟರ್-ನೀಲ್ ಅವರಂತಹ ವಿಶ್ವದರ್ಜೆಯ ಆಲ್‌ರೌಂಡರ್‌ಗಳಿದ್ದಾರೆ. ಕ್ವಿಂಟನ್ ಡಿ ಕಾಕ್ ದಕ್ಷಿಣ ಆಫ್ರಿಕಾ ತಂಡದೊಂದಿಗಿನ ಅಂತರ್‌ರಾಷ್ಟ್ರೀಯ ಬದ್ಧತೆಯಿಂದಾಗಿ ಮುಂಬೈ ತಂಡದ ಮೊದಲ ಕೆಲವು ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ. ಕಳೆದ ತಿಂಗಳು ಭಾರತ ಪರ ಚೊಚ್ಚಲ ಸರಣಿಯಲ್ಲಿ ಬ್ಯಾಟ್‌ನೊಂದಿಗೆ ಮಿಂಚಿದ್ದ ಸೂರ್ಯ ತಮ್ಮ ಎಂದಿನ 4ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬರಲಿದ್ದಾರೆ. ನಂತರ ಕಿಶನ್, ಪೊಲಾರ್ಡ್, ಹಾರ್ದಿಕ್, ಕ್ರನಾಲ್ ಮತ್ತು ಕೌಲ್ಟರ್-ನೀಲ್ ನಂತರದ ಸ್ಥಾನದಲ್ಲಿದ್ದಾರೆ.

 ಸ್ಪಿನ್ನರ್ ಸ್ಲಾಟ್‌ಗಾಗಿ ಲೆಗ್ ಸ್ಪಿನ್ನರ್‌ಗಳಾದ ರಾಹುಲ್ ಚಹಾರ್, ಪಿಯೂಷ್ ಚಾವ್ಲಾ ಮತ್ತು ಜಯಂತ್ ಯಾದವ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಅವರು ಬ್ಯಾಟ್‌ನೊಂದಿಗೆ ತಮ್ಮದೇ ಆದ ಹಿಡಿತ ಸಾಧಿಸಬಹುದು.

 ಮುಂಬೈ ತಂಡ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್ ), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ರಿಸ್‌ಲಿನ್, ಅನ್ಮೊಲ್‌ಪ್ರೀತ್ ಸಿಂಗ್, ಸೌರಭ್ ತಿವಾರಿ, ಆದಿತ್ಯ ತಾರೆ, ಕೀರನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕ್ರನಾಲ್ ಪಾಂಡ್ಯ, ಅನುಕುಲ್ ರಾಯ್, ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ರಹುಲ್ ಚಹಾರ್, ಜಯಂತ್ ಯಾದವ್, ಧವಲ್ ಕುಲಕರ್ಣಿ, ಮೊಹ್ಸಿನ್ ಖಾನ್, ಆ್ಯಡಮ್ ಮಿಲ್ನೆ, ನಾಥನ್ ಕೌಲ್ಟರ್-ನೀಲ್, ಪಿಯೂಷ್ ಚಾವ್ಲಾ, ಜೇಮ್ಸ್ ನೀಶಮ್, ಯದುವೀರ್ ಚರಕ್, ಮಾರ್ಕೊ ಜಾನ್ಸೆನ್, ಅರ್ಜುನ್ ತೆಂಡುಲ್ಕರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News