ಕಾಂಗ್ರೆಸ್ ಧ್ವನಿ ಎತ್ತುತ್ತಿರುವುದು ಸಂತ್ರಸ್ತೆ ಗಾಗಿ ಅಲ್ಲ, ಸಿದ್ದರಾಮಯ್ಯಗಾಗಿ: ಬಿಜೆಪಿ

Update: 2021-04-05 11:19 GMT

ಬೆಂಗಳೂರು, ಎ.5: ಸಿಡಿ ಪ್ರಕರಣದಲ್ಲಿ ಕಾಂಗ್ರೆಸ್ ಧ್ವನಿಯೆತ್ತುತ್ತಿರುವುದು ಸಂತ್ರಸ್ತೆಗೆ ನ್ಯಾಯ ಒದಗಿಸುವುದಕ್ಕಾಗಿ ಅಲ್ಲ, ಬದಲಿಗೆ ಸಿದ್ದರಾಯ್ಯರಿಗಾಗಿ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸಿಕ್ಕಿಸಿ ಹಾಕಲು ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ ಬಳಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, ಸದನದಲ್ಲಿ ಸಿಡಿ ಪ್ರಕರಣ ಪ್ರಸ್ತಾಪಿಸುವಾಗ ಡಿ.ಕೆ.ಶಿವಕುಮಾರ್ ಹೆಸರು ಪ್ರಕರಣದಲ್ಲಿ ಪ್ರಸ್ತಾಪವಾಗಿರಲಿಲ್ಲ. ಹೀಗಾಗಿ ಸದನದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ರೋಷಾವೇಶ ಪ್ರದರ್ಶಿಸಿದರು. ಈಗ ಷಡ್ಯಂತ್ರದಲ್ಲಿ ಡಿಕೆಶಿ ಹೆಸರು ಕೇಳಿ ಬರುತ್ತಿದೆ. ಡಿಕೆಶಿ ಮೌನವಾಗಿದ್ದಾರೆ. ಸಿದ್ದರಾಮಯ್ಯ ಮತ್ತೆ ಮತ್ತೆ ಕೆದಕುತ್ತಿದ್ದಾರೆ ಎಂದು ಆರೋಪಿಸಿದೆ.

ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಸಿದ್ದರಾಮಯ್ಯ ಬಣ ಎಚ್ಚೆತ್ತುಕೊಂಡಿದೆ. ಸಿಎಂ ಆಗುವ ಕನಸಿಗೆ ತೊಡಕಾಗಿರುವ ಡಿಕೆಶಿ ಅವರನ್ನು ಮಣಿಸಲು  ಸಿದ್ದರಾಮಯ್ಯ

ಅವರಿಗೆ ಇದೊಂದು ಸದಾವಕಾಶ. ಈ ಪ್ರಕರಣದಲ್ಲಿ ಡಿಕೆಶಿ ಅವರನ್ನು ಸಿಲುಕಿಸಲು ಶ್ರಮಿಸುತ್ತಿರುವ ಸಿದ್ದರಾಮಯ್ಯಗೆ ಶುಭವಾಗಲಿ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಮೇಟಿ ಪ್ರಕರಣದಲ್ಲಿ ಸಂತ್ರಸ್ತೆ ಪ್ರಕರಣ ದಾಖಲಿಸಿದ್ದರೂ ಎಫ್‌ಐಆರ್ ಕೂಡಾ ಮಾಡಿರಲಿಲ್ಲ, ವಿಚಾರಣೆ ಕೂಡಾ ನಡೆಸಿರಲಿಲ್ಲ. ಈಗ ಕಾಂಗ್ರೆಸ್ ಪಕ್ಷ ಧ್ವನಿ ಎತ್ತುತ್ತಿರುವುದು ಸಂತ್ರಸ್ತೆ ಗಾಗಿ ಅಲ್ಲ, ಸಿದ್ದರಾಮಯ್ಯಗಾಗಿ. ಡಿ.ಕೆ.ಶಿವಕುಮಾರ್ ಅವರನ್ನು ಸಿಕ್ಕಿಸಿ ಹಾಕಲು ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಖಾತೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News