ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಲೋಗೊ ಬಿಡುಗಡೆ

Update: 2021-04-05 12:02 GMT

ಬೆಂಗಳೂರು, ಎ.5: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಆರೋಗ್ಯ ವಿಭಾಗದಡಿಯಲ್ಲಿ ಕಾರ್ಯಾಚರಿಸುತ್ತಿರುವ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂನ ಲೋಗೊವನ್ನು ಸಂಘಟನೆಯ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ರಾಜ್ಯ ಕಚೇರಿಯಲ್ಲಿ ರವಿವಾರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಕ್ತದಾನ ಮಹಾದಾನ ಎಂದು ಹೇಳಲಾಗುತ್ತಿದೆ.‌ ಆದರೆ ದುರಾದೃಷ್ಟವಶಾತ್, ಅಗತ್ಯ ಸಂದರ್ಭದಲ್ಲಿ ರಕ್ತವನ್ನು ಪೂರೈಸಲು ಹರಸಾಹಸ ಪಡುವಂತಹ ಸ್ಥಿತಿ 130 ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ನಿರ್ಮಾಣವಾಗಿದೆ. ಸಮಾಜದಲ್ಲಿ ಸಾಕಷ್ಟು ರಕ್ತದ ಆವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ರಕ್ತದಾನಕ್ಕೆ ಬಹಳಷ್ಟು ಮಹತ್ವ ನೀಡಿದೆ. ಸಂಘಟನೆಯು ತನ್ನ ಪ್ರಾರಂಭಿಕ ದಿನದಿಂದಲೂ ರಕ್ತದಾನ ಶಿಬಿರ ಮತ್ತು ವೈಯಕ್ತಿಕ ರಕ್ತದಾನದ ಮೂಲಕ ತುರ್ತು ಸಂದರ್ಭಗಳಲ್ಲಿ ರಕ್ತ ಪೂರೈಕೆ ಮಾಡಿ ಜನರ ಜೀವ ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದರು.

ಸಂಘಟನೆಯು ಮಾನವೀಯ ಸೇವೆಯನ್ನು ವ್ಯಾಪಕಗೊಳಿಸಲು, ರಕ್ತದ ಕೊರತೆ ನೀಗಿಸಲು, ಜನರಲ್ಲಿ ಜಾಗೃತಿ ಮೂಡಿಸಿ ಅವರನ್ನು ರಕ್ತದಾನಕ್ಕೆ ಪ್ರೇರೇಪಿಸುವ ಉದ್ದೇಶದಿಂದ 'ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ' ಅನ್ನು ರಚಿಸಿದೆ. ಸಾರ್ವಜನಿಕರು ಬ್ಲಡ್ ಡೋನರ್ಸ್ ಫೋರಂ ಜೊತೆಗೆ ಕೈ ಜೋಡಿಸುವ ಮೂಲಕ ಸಮಾಜದಲ್ಲಿರುವ ಮಾನವೀಯ ಬಿಕ್ಕಟ್ಟನ್ನು ಹೋಗಲಾಡಿಸಲು ಮತ್ತು ಜನರ ಜೀವ ಉಳಿಸುವ ಮಹತ್ಕಾರ್ಯದಲ್ಲಿ ಜೊತೆಯಾಗಬೇಕೆಂದು ಯಾಸಿರ್ ಹಸನ್ ಇದೇ‌ ವೇಳೆ ಮನವಿ ಮಾಡಿದರು. ‌

ಈ ಸಂದರ್ಭ ರಾಜ್ಯ ಕಾರ್ಯದರ್ಶಿ ಅಬ್ದುಲ್ ಮಜೀದ್, ಬ್ಲಡ್ ಡೋನರ್ಸ್ ಫೋರಂ ರಾಜ್ಯ ಉಸ್ತುವಾರಿ ಅಬೂ ಸಿನಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News