ಮಾಲಾರ್ಪಣೆ ಮಾಡಲು ಬಂದ ಸಿಎಂಗೆ ತಟ್ಟಿದ ದಲಿತ ಸಂಘಟನೆಗಳ ಪ್ರತಿಭಟನೆಯ ಬಿಸಿ

Update: 2021-04-05 12:41 GMT

ಬೆಂಗಳೂರು, ಎ. 5: ಮಾಜಿ ಉಪಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರ ಡಾ.ಜಗಜೀವನರಾಮ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಅವರ ಪುತ್ಥಳಿ ಬಳಿ ಇರಿಸಿದ್ದ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲು ಆಗಮಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ದಲಿತ ಸಂಘಟನೆಗಳ ಪ್ರತಿಭಟನೆ ಬಿಸಿ ತಟ್ಟಿತು.

ಸೋಮವಾರ ಡಾ.ಬಾಬುಜಗಜೀವನ್ ರಾಮ್ ಅವರ 114ನೆ ಜನ್ಮ ದಿನಾಚರಣೆ ಪ್ರಯುಕ್ತ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಜಗಜೀವನ್ ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸಿಎಂ ಹಾಗೂ ಸಚಿವರು ಆಗಮಿಸುತ್ತಿದ್ದಂತೆ ರಾಮನಗರ ಮತ್ತು ಮಾಗಡಿಯ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮಾಗಡಿ ತಾಲೂಕಿನಲ್ಲಿ ಜಗಜೀವನರಾಮ್ ಭವನ ನಿರ್ಮಾಣ ಕಾಮಗಾರಿ ವಿಳಂಬ ಮಾಡುತ್ತಿದ್ದು, ಸರಕಾರ ಕೂಡಲೇ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಇಲ್ಲಿನ ವೈಟ್‍ಫೀಲ್ಡ್ ಕಾಡುಗೋಡಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲೂ ಸರಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು. ಕೂಡಲೆ ದಲಿತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

ಈ ಮಧ್ಯೆ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಉಪಪ್ರಧಾನಿ ಹಾಗೂ ಹಸಿರುಕ್ರಾಂತಿಯ ಹರಿಕಾರ ಬಾಬು ಜಗಜೀವನ್ ರಾಮ್ ಅವರ ಸೇವೆ ಹಾಗೂ ಅವರ ಜಾರಿಗೊಳಿಸಿ ಯೋಜನೆಗಳನ್ನು ನೆನಪು ಮಾಡಿಕೊಂಡರು. ಪ್ರತಿಭಟನೆಯ ಕುರಿತು ಗಮನಹರಿಸುವಂತೆ ಸಚಿವ ಶ್ರೀರಾಮುಲು ಅವರಿಗೆ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಪ್ರತಿಭಟನಾನಿರತರ ಮನವಿ ಸ್ವೀಕರಿಸಿ, ನಮ್ಮ ಸರಕಾರ ದಲಿತರು, ಹಿಂದುಳಿದವರ ಬಗ್ಗೆ ಕಾಳಜಿ ಇಟ್ಟುಕೊಂಡಿದೆ. ನಿಮ್ಮ ಎಲ್ಲ ಬೇಡಿಕೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಲಾಗುವುದು. ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಮನವೊಲಿಸಿದ್ದರಿಂದ ದಲಿತ ಸಂಘಟನೆಗಳು ಪ್ರತಿಭಟನೆಯನ್ನು ಹಿಂಪಡೆದವು.

ಈ ಸಂದರ್ಭದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ನಾಗಾಂಬಿಕಾ ದೇವಿ, ಮಾಜಿ ಸಚಿವ ಎಚ್.ಆಂಜನೇಯ, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ, ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಎನ್.ಮೂರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News