ಬೆಂಗಳೂರಿಗೆ ಆಗಮಿಸುವ ಪ್ರತಿ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ: ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ

Update: 2021-04-06 11:31 GMT

ಬೆಂಗಳೂರು, ಎ.6: ಯಾವುದೇ ಭಾಗದಿಂದ ಬೆಂಗಳೂರಿಗೆ ಆಗಮಿಸುವ ಪ್ರತಿಯೊಬ್ಬ ಪ್ರಯಾಣಿಕರು ಹೋಂ ಕ್ವಾರಂಟೈನ್‍ನಲ್ಲಿದ್ದು, ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕೆಂಬ ಪ್ರಸ್ತಾವನೆಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

ಮಂಗಳವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಕೋವಿಡ್ ಕುರಿತು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಬರುವ ಪ್ರಯಾಣಿಕರು ಕೂಡಲೇ ಜನಸಾಮಾನ್ಯರೊಂದಿಗೆ ಬೆರೆಯುವಂತಿಲ್ಲ. ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ ನಂತರವೇ ಸಾರ್ವಜನಿಕರೊಂದಿಗೆ ಬೆರೆಯಲು ಅವಕಾಶ ಇರುತ್ತದೆ ಎಂದು ಹೇಳಿದ್ದಾರೆ.

ಎಲ್ಲೆಲ್ಲಿ ಕೊರೋನ ಸೋಂಕು ಪ್ರಮಾಣ ಹೆಚ್ಚಳವಾಗಿದೆಯೋ ಅಲ್ಲಿ ಕಡ್ಡಾಯವಾಗಿ ಪರೀಕ್ಷೆಯ ಪ್ರಮಾಣ ಹೆಚ್ಚಾಳ ಮಾಡಬೇಕು. ಅದೇ ರೀತಿಯಲ್ಲಿ, ಮೈಕ್ರೋ ಪರೀಕ್ಷೆ ಪ್ರಕ್ರಿಯೆಗೆ ಚಾಲನೆ ನೀಡಿ ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಬೇಕು ಎಂದು ಅವರು ಸೂಚಿಸಿದ್ದಾರೆ.

20 ರಷ್ಟು ಹಾಸಿಗೆ: ದಿನೇ ದಿನೇ ಕೊರೋನ ಸೋಂಕಿನ ರೋಗಿಗಳ ಸಂಖ್ಯೆ ಅಧಿಕವಾಗುತ್ತಿದೆ. ಮುಂಜಾಗ್ರತೆಯಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಷ್ಟು ಹಾಸಿಗೆ ಮೀಸಲಿಡಬೇಕೆಂದು ಸೂಚಿಸಲಾಗಿದೆ. ಜತೆಗೆ, ರೋಗಿಗಳಿಗೆ ಹಾಸಿಗೆ ಕುರಿತು ಸಂಕ್ಷಿಪ್ತ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.

ಪ್ರಮುಖವಾಗಿ ಆಯಾ ವಲಯವಾರು ವ್ಯಾಪ್ತಿಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ ಕನಿಷ್ಠ ಐವತ್ತು ಹಾಸಿಗೆಗಳನ್ನು ಗುರುತು ಮಾಡಬೇಕೆಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಲಸಿಕೆ ನೀಡುವಿಕೆ ಪ್ರಮಾಣ ದುಪ್ಪಟ್ಟು ಮಾಡಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಆಶಾ ಕಾರ್ಯಕರ್ತೆಯರಿಗೆ ಗುರಿ ನೀಡಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಭೆಯಲ್ಲಿ ಪಾಲಿಕೆ ವಿಶೇಷ ಆಯುಕ್ತರು(ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ ಡಾ.ವಿಜೇಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಉಲ್ಲಂಘಿಸಿದರೆ ಬಂದ್

ಕೊರೋನ ಸೋಂಕಿನ ಎರಡನೇ ಅಲೆ ಬೆಂಗಳೂರಿನಲ್ಲಿ ಮಿತಿ ಮೀರಿ ಹರಡುತ್ತಿರುವ ಹಿನ್ನೆಲೆ ಜನದಟ್ಟಣೆ ಪ್ರದೇಶಗಳನ್ನು ಹಂತ ಹಂತವಾಗಿ ಬಂದ್ ಮಾಡಿ, ಹೊರಭಾಗದಿಂದ ಬರುವ ಪ್ರವಾಸಿಗರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲು ಚಿಂತನೆ ನಡೆಸಲಾಗಿದೆ. ಹಾಗೂ ಜನದಟ್ಟಣೆ ಪ್ರದೇಶಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ಇದನ್ನು ಪಾಲಿಕೆ ಗಂಭೀರವಾಗಿ ಪರಿಗಣಿಸಿದ್ದು, ಕೊರೋನ ನಿಯಮಾವಳಿ ಉಲ್ಲಂಘಿಸಿದರೆ, ಈ ಪ್ರದೇಶವನ್ನು ಬಂದ್ ಮಾಡಲಾಗುವುದು.

-ಗೌರವ್ ಗುಪ್ತ, ಬಿಬಿಎಂಪಿ ಮುಖ್ಯಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News