ವಸಡು ಸೋಂಕನ್ನು ಕಡೆಗಣಿಸಬೇಡಿ,ಅದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಲ್ಲದು

Update: 2021-04-06 19:07 GMT

ಹಲ್ಲುನೋವು ಮತ್ತು ಸೋಂಕುಗಳು ಯಾರನ್ನೂ,ಯಾವುದೇ ವಯಸ್ಸಿನಲ್ಲಿಯೂ ಬಾಧಿಸುತ್ತವೆ. ಸೋಂಕು ಹಲವಾರು ಬಾಯಿ ಸಮಸ್ಯೆಗಳಿಗೆ ಕಾರಣವಾಗುತ್ತದೆ,ಆದರೆ ಅದು ರಕ್ತದ ಒತ್ತಡದ ಮೇಲೂ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದು ನಿಮಗೆ ಗೊತ್ತೇ?

ವಸಡುಗಳಲ್ಲಿಯ ಸೋಂಕುಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ ಎನ್ನುವುದನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ಪರಿದಂತ ಕಾಯಿಲೆಯಂತಹ ಸಮಸ್ಯೆಗಳಲ್ಲಿ ಇದು ಅತ್ಯಂತ ಸಾಮಾನ್ಯವಾಗಿದೆ.

ಆರೋಗ್ಯಕರ ವಸಡುಗಳು ಬಾಯಿಯ ಉತ್ತಮ ಆರೋಗ್ಯವನ್ನು ಸೂಚಿಸುತ್ತವೆ. ಬಾಯಿಯ ಸ್ವಚ್ಛತೆಯನ್ನು ಕಡೆಗಣಿಸಿದಾಗ ಅದು ಬಹಳಷ್ಟು ತೊಂದರೆಗಳಿಗೆ ಕಾರಣವಾಗುತ್ತದೆ. ಹಲ್ಲಿನ ಸೋಂಕು ಶರೀರದ ವಿವಿಧ ಭಾಗಗಳಿಗೂ ಹರಡುವ ಮೂಲಕ ವಿವಿಧ ತೊಂದರೆಗಳನ್ನುಂಟು ಮಾಡಬಲ್ಲದು.

ವಸಡುಗಳ ಸೋಂಕು ಅಧಿಕ ರಕ್ತದೊತ್ತಡಕ್ಕೂ ಕಾರಣವಾಗಬಲ್ಲದು ಎಂದು ‘ಹೈಪರ್‌ಟೆನ್ಶನ್ ’ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ಸಂಶೋಧನಾ ವರದಿಯು ಹೇಳಿದೆ. ಆರೋಗ್ಯಕರ ವಸಡುಗಳನ್ನು ಹೊಂದಿದವರಿಗೆ ಹೋಲಿಸಿದರೆ ಪರಿದಂತ ಸಮಸ್ಯೆಯನು ್ನಹೊಂದಿರುವ ವಯಸ್ಕ ವ್ಯಕ್ತಿಗಳು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ,ಅಲ್ಲದೆ ಅವರು ಹೃದಯರಕ್ತನಾಳಗಳ ಕಾಯಿಲೆಗೂ ಗುರಿಯಾಗುವ ಅಪಾಯವನ್ನು ಹೊಂದಿರುತ್ತಾರೆ.

ವಸಡು ರೋಗಗಳನ್ನು ಹೊಂದಿರುವವರು,ವಿಶೇಷವಾಗಿ ವಸಡುಗಳಿಂದ ರಕ್ತಸ್ರಾವವಾಗುತ್ತಿದ್ದರೆ ಹೆಚ್ಚಿನ ಸಂದರ್ಭಗಳಲ್ಲಿ ಅವರ ರಕ್ತದೊತ್ತಡ ಹೆಚ್ಚಾಗಿರುತ್ತದೆ. ಇದು ಸಾಮಾನ್ಯವಾಗಿ ಲಕ್ಷಣರಹಿತವಾಗಿದ್ದು,ಹಲವಾರು ಜನರಿಗೆ ತಾವು ಹೃದಯರಕ್ತನಾಳಗಳಿಗೆ ತುತ್ತಾಗುವ ಅಪಾಯವನ್ನು ಎದುರಿಸುತ್ತಿದ್ದೇವೆ ಎನ್ನುವುದೂ ಗೊತ್ತಿರದಿರಬಹುದು ಎಂದು ಯುನಿವರ್ಸಿಟಿ ಕಾಲೇಜ್ ಲಂಡನ್‌ನ ಮುಖ್ಯ ಸಂಶೋಧಕಿ ಇವಾ ಎಂ.ಅಗಿಲೆರಾ ಹೇಳಿದರು. ಪೆರಿಡೊಂಟೈಟಿಸ್ ಅಥವಾ ಪರಿದಂತವು ಗಂಭೀರ ವಸಡು ಸೋಂಕು ಆಗಿದ್ದು ಉರಿಯೂತ,ಮೂಳೆನಷ್ಟ ಮತ್ತು ಕ್ರಮೇಣ ದಂತ ನಷ್ಟಕ್ಕೆ ಕಾರಣವಾಗುತ್ತದೆ ಎಂದು ವರದಿಯಲ್ಲಿ ಹೇಳಿದ್ದಾರೆ.

ಆರೋಗ್ಯಕರ ವಸಡುಗಳನ್ನು ಹೊಂದಿದವರಿಗೆ ಹೋಲಿಸಿದರೆ ದಂತ ಸಮಸ್ಯೆಗಳನ್ನು ಹೊಂದಿರುವ ವಯಸ್ಕರು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಎರಡು ಪಟ್ಟು ಅಪಾಯದಲ್ಲಿರುತ್ತಾರೆ. ಸಕ್ರಿಯ ವಸಡು ಉರಿಯೂತವು ಈ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೆ ಅವರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಕಡಿಮೆ ಮಟ್ಟದಲ್ಲಿ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅಧಿಕ ಮಟ್ಟದಲ್ಲಿ ಇರುತ್ತವೆ ಎಂದು ವರದಿಯು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News