ದೇವಸ್ಥಾನದ ಭೂಮಿ ಕಬಳಿಕೆ ಪ್ರಕರಣ: ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ವಿರುದ್ಧ ಬಂಧನ ವಾರಂಟ್

Update: 2021-04-07 18:16 GMT

ಬೆಂಗಳೂರು, ಎ.7: ದೇವಸ್ಥಾನದ ಭೂಮಿ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸದ ಬೆಂಗಳೂರು ಪೂರ್ವ ತಾಲೂಕು ತಹಶೀಲ್ದಾರ್ ಅಜಿತ್ ಕುಮಾರ್ ವಿರುದ್ಧ ಕರ್ನಾಟಕ ಭೂ ಕಬಳಿಕ ನಿಷೇಧ ವಿಶೇಷ ನ್ಯಾಯಾಲಯವು 25 ಸಾವಿರ ರೂ.ದಂಡ ಹಾಗೂ ಜಾಮೀನು ಸಹಿತ ಬಂಧನ ವಾರೆಂಟ್ ಹೊರಡಿಸಿದೆ.

ಬಿದರಹಳ್ಳಿ ಹೋಬಳಿಯ ಬೆಳತ್ತೂರು ಗ್ರಾಮದಲ್ಲಿ ಚೌಡೇಶ್ವರಿ ದೇವಾಲಯದ ಸರ್ವೇ 57 ರಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 2 ಎಕರೆ 26 ಗುಂಟೆ ಸರಕಾರಿ ಜಮೀನನ್ನು ಈ ಹಿಂದಿನ ತಹಶೀಲ್ದಾರ್ ಬಾಳಪ್ಪ ಹಂದಿಗುಂದ ಅವಧಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿ ನಲವತ್ತಕ್ಕೂ ಹೆಚ್ಚು ಐಷಾರಾಮಿ ಬಂಗಲೆ, ವಿಲ್ಲಾಸ್, ಜಿಮ್, ಕ್ಲಬ್ ಈಜುಕೊಳ ಇತರೆ ಅಕ್ರಮ ಕಟ್ಟಡಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿತ್ತು.

ಸರಕಾರಿ ಜಮೀನು ಕಬಳಿಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಮುಖಾಂತರ ನೋಟಿಸ್ ನೀಡಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ವರದಿ ನೀಡುವಂತೆ ನ್ಯಾಯಾಲಯದ ನಿರ್ದೇಶನ ನೀಡಿದರೂ ತಹಶೀಲ್ದಾರ್ ಅಜಿತ್ ಕುಮಾರ್ ವರದಿ ಸಲ್ಲಿಸದ ಕಾರಣ ಎ.27ರಂದು ಬೆಳಗ್ಗೆ 11 ಗಂಟೆಗೆ ಖುದ್ದು ಹಾಜರಾಗಿ 25 ಸಾವಿರ ರೂ. ದಂಡ ಮತ್ತು ಜಾಮೀನು ಸಹಿತ ಬಂಧನ ವಾರಂಟ್‍ನ್ನು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯವು ಆದೇಶ ಹೊರಡಿಸಿ ಕೆ.ಆರ್.ಪುರ ಪೊಲೀಸ್ ಠಾಣಾಧಿಕಾರಿಗೆ ರವಾನಿಸಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ದೂರುದಾರ ಹಾಗೂ ಸಾಮಾಜಿಕ ಹೋರಾಟಗಾರ ಬೆಳತ್ತೂರು ಪರಮೇಶ್, ಈ ಹಿಂದೆ ದೇವಸ್ಥಾನ ಜಾಗ ಜಾತ್ರೆ ಸಮಯದಲ್ಲಿ ಪಲ್ಲಕ್ಕಿ ನಿಲ್ಲಿಸಲು, ಸರಕಾರಿ ಕಾರ್ಯಕ್ರಮ ಮಾಡಲು ಆಟದ ಮೈದಾನವಾಗಿ ಊರಿನವರಿಗೆ ಬಳಕೆ ಆಗುತ್ತಿತ್ತು. ನಾರಾಯಣಸ್ವಾಮಿ, ಲೋಕೇಶ್, ರಂಜಿತ್ ರೆಡ್ಡಿ ಸೇರಿದಂತೆ 63 ಮಂದಿ ವಿರುದ್ಧ ಭೂ ಕಬಳಿಕೆಗೆ ಸಂಬಂಧಿಸಿದಂತೆ ದೂರು ದಾಖಲು ಮಾಡಲಾಗಿದೆ ಎಂದರು.

ಸರಕಾರಿ ಜಮೀನು ಉಳಿಸಲು ಒಂಭತ್ತು ವರ್ಷದಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ತಹಶೀಲ್ದಾರ್ ಅಜಿತ್ ಕುಮಾರ್ ಅವರಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಮೂರು ಸಾರಿ ನೋಟಿಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಸರಕಾರಿ ಅಧಿಕಾರಿಯಾಗಿ ಜಮೀನು ಉಳಿಸಲು ಮನಸ್ಸು ಮಾಡುತ್ತಿಲ್ಲ. ಒತ್ತುವರಿದಾರರ ಜೊತೆ ತಹಶೀಲ್ದಾರ್ ಅಜಿತ್ ಕುಮಾರ್ ಶಾಮಿಲಾಗಿದ್ದಾರೆ ಎಂದು ಪರಮೇಶ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News