ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿ ಅಂಬೇಡ್ಕರ್ ಜಯಂತಿಗೆ ಮುಕ್ತ ಅವಕಾಶಕ್ಕೆ ಪಟ್ಟು

Update: 2021-04-07 18:20 GMT

ಬೆಂಗಳೂರು, ಎ.7: ಕೋವಿಡ್ ನಿರ್ಬಂಧಗಳನ್ನು ಸಡಿಲಿಸಿ ಎ.14 ರಂದು ನಡೆಯುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಯಾವುದೇ ನಿರ್ಬಂಧವಿಲ್ಲದ ಕೋವಿಡ್ ಮಾರ್ಗದರ್ಶಿ ಸುತ್ತೋಲೆ ಹೊರಡಿಸಬೇಕೆಂದು ದಲಿತ ಸಂಘಟನೆಯ ಮುಖಂಡರು ಒಕ್ಕೊರಲಿನಿಂದ ಆಗ್ರಹಿಸಿದರು.

ಬುಧವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೈಸೂರು ಉರಿಲಿಂಗ ಪೆದ್ದಮಠದ ಜ್ಞಾನಪ್ರಕಾಶ್ ಸ್ವಾಮೀಜಿ, ರಾಜ್ಯ ಸರಕಾರ ಉದ್ದೇಶಪೂರ್ವಕವಾಗಿ ಕೋವಿಡ್ ನಿಯಮಗಳನ್ನು ಹೇರಿ ಅಂಬೇಡ್ಕರ್ ಜಯಂತಿಗೆ ಅಡ್ಡಿಪಡಿಸುತ್ತಿದೆ. ಎಲ್ಲ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಕೊರೋನ ನೆಪದಲ್ಲಿ ತೊಂದರೆ ನೀಡುವುದು ಸರಿಯಲ್ಲ ಎಂದರು.

ಬಹುಜನ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ರಮೇಶ್ ಮಾತನಾಡಿ, ಮುಕ್ತವಾಗಿ ಅಂಬೇಡ್ಕರ್ ಜಯಂತಿಗೆ ಅವಕಾಶ ನೀಡಬೇಕು. ಇಂದು ಅಥವಾ ನಾಳೆಯೊಳಗೆ ಮುಕ್ತ ಆಚರಣೆಗೆ ಅವಕಾಶ ನೀಡದಿದ್ದರೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು. ಅಲ್ಲದೆ, ಅಂಬೇಡ್ಕರ್ ಜಯಂತಿಯನ್ನು ರಾಜ್ಯ ಸರಕಾರ ಅದ್ದೂರಿಯಾಗಿ ಆಚರಣೆಗೆ ಅವಕಾಶ ಕೊಡುವ ಮೂಲಕ ಸಂವಿಧಾನಕ್ಕೆ ಗೌರವ ನೀಡಬೇಕಾಗಿದೆ ಎಂದು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಜಾ ಪರಿವರ್ತನಾ ವೇದಿಕೆ ಅಧ್ಯಕ್ಷ ಕೆ.ಗೋಪಾಲ್, ಮಹಿಳಾ ದಲಿತ ಒಕ್ಕೂಟದ ಅಧ್ಯಕ್ಷೆ ಅನಸೂಯಮ್ಮ ಆನೇಕಲ್ ಸೇರಿದಂತೆ ಅನೇಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News