ಪರೀಕ್ಷಣಾರ್ಥಿ ಸಾರಿಗೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗದಿದ್ದರೆ ಸೇವೆಯಿಂದ ಬಿಡುಗಡೆ: ಬಿಎಂಟಿಸಿ ಎಚ್ಚರಿಕೆ

Update: 2021-04-08 17:42 GMT

ಬೆಂಗಳೂರು, ಎ.8: ಕರ್ತವ್ಯಕ್ಕೆ ಗೈರಾಗಿ ಮುಷ್ಕರದಲ್ಲಿ ತೊಡಗಿರುವ ಬಿಎಂಟಿಸಿಯ ಪರೀಕ್ಷಣಾರ್ಥಿ ಸಾರಿಗೆ ಸಿಬ್ಬಂದಿ ನಾಳೆ(ಎ.9) ಕೆಲಸಕ್ಕೆ ಹಾಜರಾಗದಿದ್ದರೆ ಸೇವೆಯಿಂದ ಬಿಡುಗಡೆಗೊಳಿಸಲಾಗುವುದೆಂದು ಬಿಎಂಟಿಸಿ ಎಚ್ಚರಿಕೆ ನೀಡಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಸ್ಥೆಯು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕೂಟವು ಎ.7ರಿಂದ ನಡೆಸುತ್ತಿರುವ ಕಾನೂನು ಬಾಹಿರ ಮುಷ್ಕರದಲ್ಲಿ ಪರೀಕ್ಷಣಾರ್ಥಿ ನೌಕರರು ಭಾಗವಹಿಸಿದ್ದಾರೆ. ಪರೀಕ್ಷಣಾರ್ಥ ಅವಧಿಯಲ್ಲಿ ಕರ್ತವ್ಯಕ್ಕೆ ಗೈರು ಹಾಜರಿಯಾಗದಂತೆ ಕರ್ತವ್ಯ ನಿರ್ವಹಿಸುವುದು ಅವರ ಆದ್ಯ ಕರ್ತವ್ಯವಾಗಿರುತ್ತದೆ. ಇದರಿಂದ ಸಂಸ್ಥೆಗೆ ಆರ್ಥಿಕ ನಷ್ಟ ಉಂಟಾಗಲು ಹಾಗೂ ಸಾರ್ವಜನಿಕರಲ್ಲಿ ಸಂಸ್ಥೆಯ ಘನತೆಗೆ ಧಕ್ಕೆಯುಂಟಾಗಲು ಕಾರಣರಾಗಿರುತ್ತಾರೆ.

ಕರ್ತವ್ಯಲೋಪ ಎಸಗಿರುವ ಪರೀಕ್ಷಣಾರ್ಥಿ ನೌಕರರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಅಳವಡಿಸಿಕೊಂಡಿರುವ ನಿಯಮಾವಳಿ 1982ರ ಉಪನಿಯಮ 11(3)ರಂತೆ ಅವರುಗಳನ್ನು ಸಂಸ್ಥೆಯ ಪರೀಕ್ಷಣಾರ್ಥಿ ಸೇವೆಯಿಂದ ಬಿಡುಗಡೆಗೊಳಿಸಲಾಗುವುದು. ಹೀಗಾಗಿ ಪರೀಕ್ಷಣಾರ್ಥಿ ಸಾರಿಗೆ ನೌಕರರು ತಮ್ಮ ಲಿಖಿತ ಸಮಜಾಯಿಷಿಯೊಂದಿಗೆ ಎ.9ರಂದು ಕರ್ತವ್ಯಕ್ಕೆ ಕಡ್ಡಾಯವಾಗಿ ಹಾಜರಾಗಲು ಬಿಎಂಟಿಸಿ ಪ್ರಕಟನೆಯಲ್ಲಿ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News