ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ಮಾಡಿ ಉಪನ್ಯಾಸಕ ಸೇರಿ ಇಬ್ಬರ ಕೊಲೆ

Update: 2021-04-08 18:15 GMT

ಬೆಂಗಳೂರು, ಎ.8: ಒಂದೇ ಮನೆಯಲ್ಲಿದ್ದ ಇಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೈದಿರುವ ಘಟನೆ ಇಲ್ಲಿನ ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಶ್ಚಿಮ ಬಂಗಾಳ ಮೂಲದ 71 ವರ್ಷದ ವೃದ್ಧೆ ಮಮತಾ ಬಸು ಹಾಗೂ ಒಡಿಸಾ ಮೂಲದ ಉಪನ್ಯಾಸಕ ದೇವರಥ್ ಬೆಹೇರಾ(41) ಕೊಲೆಯಾದವರು ಎಂದು ಪೊಲೀಸರು ತಿಳಿಸಿದ್ದಾರೆ.

ಪುಟ್ಟೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಜೆ.ಪಿ.ನಗರ 7ನೆ ಹಂತ, ಬ್ರಿಗೇಡ್ ಮಿಲೇನಿಯಂ ಬಹು ಮಹಡಿ ಕಟ್ಟಡ ಸಮೀಪದ ಸಂತೃಪ್ತಿ ನಗರದಲ್ಲಿರುವ ಮನೆಯೊಂದರಲ್ಲಿ ಈ ಇಬ್ಬರ ಕೊಲೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೊಲೆಯಾಗಿರುವ ಮಮತಾ ಬಸು ಅವರ ಮಗಳು ವಿದೇಶದಲ್ಲಿದ್ದಾರೆ. ಮಗ ದೇವದೀಪ ಬಸು ಅವರು ಇದೇ ಪ್ರದೇಶದ ಸಂತೃಪ್ತಿ ನಗರದಲ್ಲಿ ವಾಸವಾಗಿದ್ದು, ಉಪನ್ಯಾಸಕರಾಗಿದ್ದಾರೆ. ಮನೆಯಲ್ಲಿ ಮಮತಾ ಬಸು ಏಕಾಂಗಿಯಾಗಿ ವಾಸಿಸುತ್ತಿದ್ದರು. 25 ದಿನಗಳ ಹಿಂದೆ ವೃದ್ಧೆಯ ಮಗನ ಸ್ನೇಹಿತ ಒಡಿಸಾ ಮೂಲದ ದೇವರಥ್ ಬೆಹೇರಾ ಅವರು ನಗರಕ್ಕೆ ಬಂದಿದ್ದು, ಕಾಲೇಜೊಂದರಲ್ಲಿ ಉಪನ್ಯಾಸಕರಾಗಿರುವ ಅವರು ವೃದ್ಧೆಯ ಮನೆಯಲ್ಲೇ ತಂಗಿದ್ದರು ಎನ್ನಲಾಗಿದೆ.

ಬುಧವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮೊದಲ ಮಹಡಿಯಲ್ಲಿ ಮಲಗಿದ್ದ ವೃದ್ಧೆಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ನಂತರ ಕೆಳ ಮಹಡಿಯಲ್ಲಿದ್ದ ದೇವರಥ್ ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ದುಷ್ಕರ್ಮಿಗಳು, ಮನೆಯಲ್ಲಿದ್ದ ಲ್ಯಾಪ್‍ಟಾಪ್, ಚಿನ್ನಾಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ. ಗುರುವಾರ ಬೆಳಗ್ಗೆ 7 ಗಂಟೆಯ ಸುಮಾರಿನಲ್ಲಿ ಮನೆ ಕೆಲಸದಾಕೆ ಮನೆ ಬಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದ್ದು, ವೃದ್ಧೆ ಒಂಟಿಯಾಗಿರುವುದನ್ನು ಗಮನಿಸಿದ ಹಂತಕರು ಮನೆ ಲೂಟಿ ಮಾಡಲು ಬಂದು ಆಕೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮನೆಯ ಸುತ್ತಮುತ್ತಲ ರಸ್ತೆಯಲ್ಲಿರುವ ಸಿಸಿ ಟಿವಿಗಳನ್ನು ಪಡೆದುಕೊಂಡಿರುವ ಪೊಲೀಸರು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತಿತರ ಹಿರಿಯ ಪೊಲೀಸ್ ಅಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News