ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ: ಸೋಂಕಿತ ಪ್ರದೇಶಗಳಲ್ಲಿ ಕಂಟೋನ್ಮೆಂಟ್ ಝೋನ್‍ಗೆ ಸಿದ್ಧತೆ; ಗೌರವ್ ಗುಪ್ತ

Update: 2021-04-09 12:15 GMT

ಬೆಂಗಳೂರು, ಎ.9: ಕೋವಿಡ್ ಎರಡನೇ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರು ನಗರದಲ್ಲಿ ನಾಳೆ(ಎ.10)ಯಿಂದ 20ರವರೆಗೆ ರಾತ್ರಿ ಕರ್ಫ್ಯೂ ಜಾರಿಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಹೊಟೇಲ್, ರೆಸ್ಟೋರೆಂಟ್, ಮಾಲ್‍ಗಳ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಹಾಗೂ ಸೋಂಕು ಹೆಚ್ಚಿರುವ ಕಡೆಗಳಲ್ಲಿ ಕಂಟೋನ್ಮೆಂಟ್‍ ಝೋನ್ ಮಾಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‍ಗುಪ್ತ ತಿಳಿಸಿದ್ದಾರೆ.

ಶುಕ್ರವಾರ ಬಿಬಿಎಂಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ ಕೋವಿಡ್ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಮುಂದಿನ ಹತ್ತು ದಿನಗಳು ಸವಾಲಾಗಿದ್ದು, ಎಲ್ಲರೂ ಕೋವಿಡ್ ಸೂಚನೆಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಬೇಕಾಗಿದೆ. ರಾತ್ರಿ ಕರ್ಫ್ಯೂ ಹಿನ್ನೆಲೆ ಜನರ ಓಡಾಟ ನಿಯಂತ್ರಿಸಲಾಗುತ್ತಿದೆ. ಭದ್ರತೆ ಕುರಿತು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ಈಗಾಗಲೇ ತುರ್ತು ಆರು ಸಾವಿರ ಹಾಸಿಗೆಗಳನ್ನು ಕಾಯ್ದಿರಿಸಲಾಗಿದ್ದು, ತೀವ್ರ ಸೋಂಕಿನಿಂದ ಬಳಲುತ್ತಿರುವವರನ್ನು ಇಲ್ಲಿಗೆ ದಾಖಲಿಸಲಾಗುವುದು. ಸರಣಿ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದರೆ, ಕಂಟೋನ್ಮೆಂಟ್‍ಝೋನ್ ಎಂದು ಗುರುತಿಸಲು ಬಿಬಿಎಂಪಿ ಮುಂದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಪಾಸಣೆ ಸಂಖ್ಯೆಯಲ್ಲಿ ಹೆಚ್ಚಳ: ನಗರದಲ್ಲಿ ನಿತ್ಯ 5 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ, ದಿನಕ್ಕೆ ಒಂದು ಲಕ್ಷ ಕೊರೋನ ಪರೀಕ್ಷೆ ನಡೆಸುವ ಗುರಿ ಹೊಂದಲಾಗಿದೆ. ಒಂದು ಪ್ರಕರಣಕ್ಕೆ 20 ಜನರ ತಪಾಸಣೆ ಮಾಡಲಾಗುವುದು. ಸಾರ್ವಜನಿಕರು ಸಹ ಪರೀಕ್ಷೆ ನಡೆಸಲು ಮನೆಗೆ ಬಂದಾಗ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಜ್ವರ ಕೇಂದ್ರ ಚಾಲ್ತಿ: ಸದ್ಯ ಪಾಲಿಕೆಯಲ್ಲಿ ಇರುವ ಎಲ್ಲ ಜ್ವರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಬರುವವರಲ್ಲಿ ವಿಷಮಶೀತ ಜ್ವರ ಮಾದರಿ ಲಕ್ಷಣ(ಐಎಲ್‍ಎ), ತೀವ್ರ ಉಸಿರಾಟದ ತೊಂದರೆ(ಸಾರಿ) ಲಕ್ಷಣ ಕಂಡುಬಂದರೆ ಅವರ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ವೈದ್ಯರಿಗೆ ಸೂಚಿಸಿದ್ದಾರೆ,

-ಕೋವಿಡ್ ನಿಯಮ ಪಾಲನೆಗೆ ಮಾರ್ಷಲ್ ಜೊತೆಗೆ 2 ಸಾವಿರ ಗೃಹ ರಕ್ಷಕರ ನಿಯೋಜನೆ

-ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕು.

-ಕೋವಿಡ್ ಸಹಾಯವಾಣಿಗೆ 1912 ಒಂದೇ ಸಂಖ್ಯೆ ಬಿಡುಗಡೆ ಮಾಡಲಾಗುವುದು.

-ಒಂದು ಮನೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡರೆ ಅಕ್ಕಪಕ್ಕದ ಮನೆಯನ್ನು ಸೇರಿಸಿ ಕಂಟೋನ್ಮೆಂಟ್‍ಝೋನ್ ಎಂದು ಪರಿಗಣನೆ.

-ಪಾಸಿಟಿವ್ ಬಂದ ಶೇ.80ರಷ್ಟು ಮಂದಿ ಹೋಮ್ ಐಸೋಲೇಷನ್‍ನಲ್ಲಿರುವಂತೆ ವ್ಯವಸ್ಥೆ.

-ಮೂರು ವಲಯಗಳಲ್ಲಿ ಹೊಸ ಕೋವಿಡ್‍ ಕೇರ್ ಸೆಂಟರ್ ರಚನೆ.

-ಪ್ರತಿ ಸೆಂಟರ್ ನಲ್ಲಿ 100 ಬೆಡ್‍ಗಳ ವ್ಯವಸ್ಥೆ ಇರುವ ಕೊವೀಡ್‍ ಕೇರ್ ಸೆಂಟರ್ ನಿರ್ಮಾಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News