'ನೈಟ್ ಕರ್ಫ್ಯೂ' ವೇಳೆ ಅನಗತ್ಯ ಸಂಚರಿಸುವ ವಾಹನಗಳು ವಶಕ್ಕೆ: ಕಮಲ್ ಪಂತ್

Update: 2021-04-09 16:33 GMT

ಬೆಂಗಳೂರು, ಎ.9: ಬೆಂಗಳೂರು ನಗರದಲ್ಲಿ ನಾಳೆಯಿಂದ(ಎ.10) ರಾತ್ರಿ ಕರ್ಫ್ಯೂ ಜಾರಿಯಲ್ಲಿರುವುದರಿಂದ ನಗರದ ಎಲ್ಲ ಫ್ಲೇಓವರ್ ಗಳನ್ನು ಬಂದ್ ಮಾಡಲಾಗುತ್ತಿದ್ದು, ಅನಗತ್ಯವಾಗಿ ಸಂಚರಿಸುವವರ ವಾಹನಗಳನ್ನು ವಶಕ್ಕೆ ಪಡೆಯಲಾಗುವುದೆಂದು ಪೊಲೀಸ್ ಆಯುಕ್ತ ಕಮಲ್ ಪಂಥ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರಾದ್ಯಂತ 180 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಅನಿವಾರ್ಯತೆ ಇರುವವರು ಮಾತ್ರ ಸಂಚಾರ ಮಾಡಬಹುದು. ಅನಗತ್ಯವಾಗಿ ಸಂಚಾರ ಮಾಡುವವರ ವಾಹನಗಳನ್ನು ವಶಕ್ಕೆ ಪಡೆಯುತ್ತೇವೆಂದು ತಿಳಿಸಿದ್ದಾರೆ.

ರಾತ್ರಿ ಪಾಳೆಯ ನೌಕರರು ರಾತ್ರಿ 10ರೊಳಗೆ ಕಚೇರಿ ತಲುಪಬೇಕು. ಹಾಗೂ ಬೆಳಗ್ಗೆ 5ರ ನಂತರವೇ ಕಚೇರಿಯಿಂದ ಹೊರ ಬರಬೇಕು. ರಾತ್ರಿ ಸಮಯದಲ್ಲಿ ಪ್ರಯಾಣಕ್ಕೆ ಟಿಕೆಟ್ ಕಡ್ಡಾಯವಾಗಿದ್ದು, ರಾತ್ರಿ ಸಮಯದಲ್ಲಿ ಬೆಂಗಳೂರಿಗೆ ಬರುವ, ತೆರಳುವ ರೈಲು, ಬಸ್, ವಿಮಾನದ ಟಿಕೆಟ್ ತೋರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಾತ್ರಿ 10ರ ನಂತರ ದಿನಸಿ ಅಂಗಡಿ, ದರ್ಶಿನಿ, ಬಾರ್, ಪಬ್, ಹೊಟೇಲ್‍ಗಳು ಸಂಪೂರ್ಣ ಬಂದ್ ಮಾಡಬೇಕು. ಆದರೆ, ವೈದ್ಯಕೀಯ ತುರ್ತು ಚಟುವಟಿಕೆ ಸೇವೆ, ಹೋಂ ಡೆಲಿವರಿ, ಇ-ಕಾಮರ್ಸ್ ವಾಹನಗಳಿಗೆ ಅನುಮತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸರಕು, ಸಾಗಣೆ, ಹೋಂ ಡೆಲಿವರಿ, ಇ ಕಾಮರ್ಸ್ ವಾಣಿಜ್ಯ ಖಾಲಿ ವಾಹನಗಳ ಓಡಾಟಕ್ಕೆ ಅನುಮತಿ ಇದೆ. ಆದರೆ, ರಾತ್ರಿ 10ರ ನಂತರ ಮದುವೆ ರಿಸೆಪ್ಷನ್, ಬರ್ತ್‍ಡೇ ಪಾರ್ಟಿ, ಮಾಲ್‍ಗಳು, ಥಿಯೇಟರ್ ಗಳು ಸಂಪೂರ್ಣವಾಗಿ ಬಂದ್ ಆಗಲಿದೆ ಎಂದು ಅವರು ಹೇಳಿದ್ದಾರೆ.

ರಾತ್ರಿ ಕರ್ಫ್ಯೂ ವೇಳೆ ಅಳವಡಿಸಿರುವ ಹೊಸ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 51ರಿಂದ 60 ಹಾಗೂ ಭಾರತೀಯ ದಂಡ ಸಂಹಿತೆ ಹಾಗೂ ಅನ್ವಯವಾಗಬಹುದಾದ ಇತರ ಕಾನೂನು ಉಪಬಂಧಗಳ ಅನುಸಾರ ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News