ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ: ಮೇಲ್ಸೇತುವೆ ಬಂದ್, ಪ್ರಯಾಣಿಕರ ಮಾಹಿತಿ ಕಲೆಹಾಕಿದ ಪೊಲೀಸರು

Update: 2021-04-10 17:05 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.10: ಕೋವಿಡ್ ಎರಡನೆ ಅಲೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿದ್ದ ರಾತ್ರಿ ಕರ್ಫ್ಯೂ ಹಿನ್ನೆಲೆ ಮೊದಲ ದಿನವಾದ ಶನಿವಾರ ರಾತ್ರಿ ನಗರದಲ್ಲೆಡೆ ಮೇಲ್ಸೇತುವೆಗಳ ಮೇಲೆ ವಾಹನ ಸಂಚಾರ ನಿರ್ಬಂಧಿಸಿ, ಪ್ರಯಾಣಿಕರ ಮಾಹಿತಿ ಕಲೆ ಹಾಕಲಾಯಿತು.

ಶನಿವಾರ ರಾತ್ರಿ 10 ಗಂಟೆಯಿಂದ ರಾತ್ರಿ ಕರ್ಫ್ಯೂ ಪ್ರಕ್ರಿಯೆ ಆರಂಭವಾಯಿತು. ದೇವನಹಳ್ಳಿ ವಿಮಾನ ನಿಲ್ದಾಣ ಮಾರ್ಗದ ಮೇಲ್ಸೇತುವೆ, ಹೊಸಕೋಟೆ, ನೆಲಮಂಗಲ, ಮೈಸೂರು ರಸ್ತೆ ಸೇರಿದಂತೆ ಹಲವು ಮಾರ್ಗಗಳ ಮೇಲ್ಸೇತುವೆಗಳನ್ನು ಬ್ಯಾರಿಕೇಡ್‍ಗಳ ಮೂಲಕ ಬಂದ್ ಮಾಡಲಾಯಿತು.

ಇದರಿಂದ ವಾಹನ ಸವಾರರು ಮೇಲ್ಸೇತುವೆ ಕೆಳಮಾರ್ಗದಲ್ಲಿಯೇ ಸಂಚಾರ ಮಾಡಿದರು. ಅದೇ ರೀತಿ, ವಿವಿಧ ಪ್ರದೇಶಗಳನ್ನು ಪ್ರವೇಶಿಸುವ ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಿದ್ದ ಪೊಲೀಸ್ ಸಿಬ್ಬಂದಿ, ಸಾರ್ವಜನಿಕರ ಮಾಹಿತಿ ಕಲೆ ಹಾಕಿದರು. ಅನಗತ್ಯ ಓಡಾಟ ನಡೆಸುವವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

ರಾಜ್ಯ ಸರಕಾರ ಎಂಟು ನಗರಗಳಲ್ಲಿ ಶನಿವಾರದಿಂದ ರಾತ್ರಿ ಕರ್ಫ್ಯೂ ಜಾರಿಗೆ ಮಾರ್ಗಸೂಚಿ ಹೊರಡಿಸುತ್ತಿದ್ದ ಹಿನ್ನೆಲೆ ರಾತ್ರಿ 10 ರಿಂದ ಮುಂಜಾನೆ 5 ಗಂಟೆವರೆಗೆ ಅನಗತ್ಯ ವಾಹನ ಹಾಗೂ ಸಾರ್ವಜನಿಕರ ಸಂಚಾರ ಓಡಾಟಕ್ಕೆ ನಿರ್ಬಂಧ ಹಾಕಲಾಗಿತ್ತು. ಇನ್ನು, ರಾತ್ರಿ 10 ಗಂಟೆ ನಂತರ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಹೊಟೇಲ್ ಚಟುವಟಿಕೆ ಮೇಲೆ ನಿಯಂತ್ರಣ ಹೇರಿ, ಜನರು ಹೆಚ್ಚಾಗಿ ಜಮಾವಣೆ ಆಗದಂತೆ ಪೊಲೀಸ್ ಸಿಬ್ಬಂದಿ ನಿಗಾವಹಿಸಿದ್ದರು.

ಪೊಲೀಸ್ ಆಯುಕ್ತರ ಎಚ್ಚರಿಕೆ: ಅನಾವಶ್ಯಕವಾಗಿ ವಾಹನದಲ್ಲಿ ತಿರುಗಾಡಿದರೆ, ವಾಹನ ಸೀಝ್ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 144 ಸೆಕ್ಷನ್ ನಗರದಲ್ಲಿ ಜಾರಿಯಲ್ಲಿದೆ. ಇದರಂತೆ ರಾತ್ರಿ 10 ಗಂಟೆ ಮೇಲೆ ನಗರದ ರಸ್ತೆಗಳಲ್ಲಿ ಯಾರಾದರೂ ಸುಖಾಸುಮ್ಮನೆ ಓಡಾಡುವುದು ಕಂಡು ಬಂದರೆ, ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಂಧಿಸಲಾಗುವುದು ಎಂದರು.

ಹೋಂ ಡೆಲಿವರಿ, ಗೂಡ್ಸ್ ವಾಹನಗಳಿಗೆ ಅವಕಾಶ ಇದೆ. ರಾತ್ರಿ ಬೆಂಗಳೂರಿಗೆ ಬರುವ ಹಾಗೂ ಹೋಗುವವರು ರೈಲು, ಬಸ್, ವಿಮಾನದ ಟಿಕೆಟ್ ಹಿಡಿದು ಸಂಚಾರ ಮಾಡಬಹುದು. ಆದರೆ, ಟಿಕೆಟ್ ತೋರಿಸುವುದು ಕಡ್ಡಾಯವಾಗಿದೆ. ರಾತ್ರಿ 10 ಗಂಟೆ ಅಂಗಡಿ ಮುಂಗಟ್ಟು ತೆರೆದಿದ್ದರೆ ಮಾಲಕರ ವಿರುದ್ಧ ಎನ್‍ಡಿಎಂಎ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದರು.

ಶನಿವಾರ ರಾತ್ರಿ 9ರಿಂದ ಪೊಲೀಸರ ನಿಯೋಜನೆಗೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಅಂಗಡಿಗಳು ಮೊದಲೆ ಮುಚ್ಚಿದ್ರೆ ಸರಿಯಾದ ಸಮಯಕ್ಕೆ ಮನೆಗೆ ಹೋಗಬಹುದು. 10 ಗಂಟೆ ನಂತರ ಯಾರು ಓಡಾಡುವ ಹಾಗಿಲ್ಲ. ಸುತ್ತೊಲೆಯಲ್ಲಿ ವಿನಾಯಿತಿ ನೀಡಿದವರು ಮಾತ್ರ ಓಡಾಡಬಹುದು. ರಾತ್ರಿ ಓಡಾಟಕ್ಕೆ ಯಾವುದೇ ಪಾಸ್ ಯಾರಿಗೂ ಇಲ್ಲ. ಆದರೆ ಅಗತ್ಯ ಸೇವೆಗಳಿಗೆ ಮಾತ್ರ ವಿನಾಯಿತಿ ಇದೆ.

-ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News