ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ವಿಳಂಬ: ಅಲ್ಪಸಂಖ್ಯಾತ ಇಲಾಖೆಗೆ ಕ್ಯಾಂಪಸ್ ಫ್ರಂಟ್ ನೇತೃತ್ವದಲ್ಲಿ ವಿದ್ಯಾರ್ಥಿಗಳ ದೌಡ

Update: 2021-04-13 07:40 GMT

ಬೆಂಗಳೂರು: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸರಕಾರ ನೀಡುವ ವಿದ್ಯಾರ್ಥಿ ವೇತನ, ಅರಿವು ಸಾಲ ಯೋಜನೆ ಇನ್ನೂ ಕೂಡ ಹೆಚ್ಚಿನ ವಿದ್ಯಾರ್ಥಿಗಳಿಗೆ ಮಂಜೂರಾಗದೆ ಬಾಕಿಯಾಗಿದೆ. ವಿದ್ಯಾರ್ಥಿಗಳು ಸರಕಾರ ಮತ್ತು ಇಲಾಖೆಯನ್ನು ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಸ್ಪಂದನೆ ದೊರಕದ ಕಾರಣದಿಂದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೆಂಗಳೂರು ಅಲ್ಪಸಂಖ್ಯಾತ ಇಲಾಖೆ ಕಚೇರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆಯಲು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಡಿಯಲ್ಲಿ ನೀಡಲಾಗುವ ಅರಿವು ಶಿಕ್ಷಣ ಸಾಲದ ಯೋಜನೆ ಮತ್ತು ಸರಕಾರ ನೀಡುವ ವಿದ್ಯಾರ್ಥಿ ವೇತನದ ಮೇಲೆ ಅವಲಂಬಿತವಾಗಿದ್ದಾರೆ. 2019-20ರಲ್ಲಿ ಅರಿವು ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಗಳು ಇನ್ನೂ ಹಣ ದೊರಕದೆ ಇರುವುದರಿಂದ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಆರ್ಥಿಕ ಸಮಸ್ಯೆಯಿಂದಾಗಿ ಶಿಕ್ಷಣವನ್ನು ಮುಂದುವರೆಸಲು ಸಾಧ್ಯವಾಗದೇ ಮೊಟಕುಗೊಳಿಸಿದ್ದಾರೆ. ಅದಲ್ಲದೆ ಕಳೆದ ವರ್ಷದವರೆಗೂ ಎಂ.ಪಿಲ್ /ಪಿ.ಎಚ್.ಡಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಫೆಲೋ ಶಿಪ್ ಶೇಕಡ 67 % ರಷ್ಟು ಕಡಿತಗೊಳಿಸುವ ಮೂಲಕ ಸರಕಾರವು ಶಿಕ್ಷಣದ ವಿಚಾರದಲ್ಲಿ ವಿಶೇಷವಾಗಿ ಅಲ್ಪಸಂಖ್ಯಾತರ ಬಗ್ಗೆ ತಾರತಮ್ಯದ ನಿಲುವು ತಾಳಿದೆ.

ವಿದ್ಯಾರ್ಥಿ ವೇತನದ ವಿಳಂಬದ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂಬ ಭರವಸೆ ಅಧಿಕಾರಿಗಳು ನೀಡಿದರು. ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಬಾಶಾ ಗಂಗಾವತಿ, ಬೆಂಗಳೂರು ಜಿಲ್ಲಾಧ್ಯಕ್ಷ ಆಕಿಬ್ ಬೆಂಗಳೂರು, ಕಾರ್ಯದರ್ಶಿ ಝಿಸಾನ್, ರಾಮನಗರ ಜಿಲ್ಲಾಧ್ಯಕ್ಷ ಮುಹೀನ್ ಮಾಗಡಿ, ಕೋಲಾರ ಜಿಲ್ಲಾಧ್ಯಕ್ಷ ಸವೂದ್ , ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮನ್ಸೂರ್ ಹಾಗೂ ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News