45 ವರ್ಷದೊಳಗಿನವರಿಗೂ ಕೋವಿಡ್ ಲಸಿಕೆ: ಕೇಂದ್ರ ಸಚಿವ ಸದಾನಂದ ಗೌಡ

Update: 2021-04-14 18:03 GMT

ಬೆಂಗಳೂರು, ಎ.14: ಕೇಂದ್ರ ಸರಕಾರವು ಸದ್ಯ 45 ವರ್ಷ ಮೇಲ್ಪಟ್ಟವರಿಗಷ್ಟೇ ಉಚಿತ ಲಸಿಕೆ ಒದಗಿಸುತ್ತಿದೆ. 45 ವರ್ಷದೊಳಗಿನವರಿಗೂ ಲಸಿಕೆ ನೀಡುವ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ತಿಳಿಸಿದ್ದಾರೆ.

ಬುಧವಾರ ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆಯ 2ನೇ ಡೋಸ್ ತೆಗೆದುಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 45 ವರ್ಷ ಮೇಲ್ಪಟ್ಟವರೆಲ್ಲರೂ ಲಸಿಕೆ ಹಾಕಿಸಿಕೊಳ್ಳುವಂತೆ ಕರೆ ನೀಡಿದರು.

ದೇಶದಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಲಸಿಕೆಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿವೆ. ಇದುವರೆಗೆ ಸುಮಾರು 22 ಕೋಟಿ ಡೋಸ್ ಉತ್ಪಾದನೆ ಮಾಡಲಾಗಿದೆ. ಈಗಾಗಲೇ 11 ರಿಂದ 12 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಕೊರೋನ ನಿಯಂತ್ರಿಸಲು ಭಾರತದ ನೆರವು ಕೇಳಿದ 90 ದೇಶಗಳಿಗೆ 6 ಕೋಟಿ ಡೋಸ್ ಒದಗಿಸಲಾಗಿದೆ ಎಂದು ಅವರು ಹೇಳಿದರು.

ಈಗ ರಷ್ಯಾದಿಂದ ಸ್ಪುಟ್ನಿಕ್-V ಲಸಿಕೆ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ಲಸಿಕಾ ಅಭಿಯಾನವನ್ನು ಇನ್ನೂ ವೇಗವಾಗಿ ಮತ್ತು ವಿಸ್ತ್ರತವಾಗಿ ಕೈಗೊಳ್ಳಲು ನೆರವಾಗಲಿದೆ ಎಂದು ಸದಾನಂದಗೌಡ ಹೇಳಿದರು.

ಕೊರೋನ ಚಿಕಿತ್ಸೆಯಲ್ಲಿ ಬಳಸುವ ರೆಮ್ಡೆಸಿವಿರ್ ಚುಚ್ಚುಮದ್ದಿನ ಕೊರತೆಯಾಗಬಾರದು ಎಂಬ ಉದ್ದೇಶದಿಂದ ಅದರ ರಫ್ತು ನಿಷೇಧಿಸಲಾಗಿದೆ. ದೇಶದ ಏಳು ಫಾರ್ಮಾ ಕಂಪನಿಗಳು ಇದರ ಉತ್ಪಾದನೆಯ ಲೈಸನ್ಸ್ ಹೊಂದಿವೆ. ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹೆಚ್ಚು ದಿನ ಸಂಗ್ರಹಿಸಿಡಲು ಆಗುವುದಿಲ್ಲ. ಮೂರು ತಿಂಗಳೊಳಗೇ ಅದರ ಬಳಕೆಯಾಗಬೇಕು ಎಂದು ಅವರು ತಿಳಿಸಿದರು.

ದೇಶೀಯವಾಗಿ ಬೇಡಿಕೆ ಕಡಿಮೆಯಾಗಿದ್ದರಿಂದ ತಮ್ಮಲ್ಲಿರುವ ದಾಸ್ತಾನನ್ನು ಈ ಕಂಪನಿಗಳು ರಫ್ತು ಮಾಡುತ್ತಿದ್ದವು. ಉತ್ಪಾದನೆಯನ್ನೂ ಕಡಿತಗೊಳಿಸಿದ್ದವು. ಆದರೆ ಈಗ ಸೋಂಕು ಹೆಚ್ಚಾಗುತ್ತಿರುವುದರಿಂದ ಉತ್ಪಾದನೆಯನ್ನು ಹೆಚ್ಚಿಸುವಂತೆ ಈ ಕಂಪನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಫಾರ್ಮಾಸ್ಯುಟಿಕಲ್ ಇಲಾಖೆಯನ್ನೂ ನಿರ್ವಹಿಸುವ ಸದಾನಂದ ಗೌಡ ಹೇಳಿದರು.

ಲಸಿಕಾ ಅಭಿಯಾನ ಅತ್ಯಂತ ಚೆನ್ನಾಗಿಯೇ ನಡೆದಿದೆ. ಹೆಚ್ಚೆಚ್ಚು ಜನರಿಗೆ ಲಸಿಕೆ ನೀಡುವುದಷ್ಟೇ ಇದರ ಉದ್ದೇಶ ಅಲ್ಲ. ಇದರ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸುವಂತಹ ಕೆಲಸಗಳು ಆಗಬಾರದು. ಮೊದಲ ಡೋಸ್ ತೆಗೆದುಕೊಂಡ ಸುಮಾರು 40 ದಿನಗಳ ನಂತರ ನಾನು ಈಗ ಎರಡನೇ ಡೋಸ್ ತೆಗೆದುಕೊಂಡಿದ್ದೇನೆ. ಯಾವುದೇ ಅಡ್ಡ ಪರಿಣಾಮವಾಗಿಲ್ಲ ಎಂದ ಅವರು, ಇದೇ ವೇಳೆ ಸುಮಾರು 11 ಸಾವಿರ ಜನರಿಗೆ ಯಶಸ್ವಿಯಾಗಿ ಲಸಿಕೆ ಹಾಕಿದ ಕೆ.ಸಿ.ಜನರಲ್ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News