ಹಟ್ಟಿ ಚಿನ್ನದ ಗಣಿಯಲ್ಲಿ ಮಲಹೊರುವ ಪದ್ಧತಿ ಇನ್ನೂ ಜೀವಂತ!

Update: 2021-04-15 04:41 GMT

► ಕಾರ್ಮಿಕರಿಂದ ಭೂಗರ್ಭದಲ್ಲಿರುವ ಮಲವನ್ನು ಬಕೆಟ್‌ನಲ್ಲಿ ತುಂಬಿ ಹೊರಹಾಕಿಸಲಾಗುತ್ತಿದೆ

► ಮಲ ಹೊರುವ ಪದ್ಧತಿ ಆಚರಣೆಯ ಬಗ್ಗೆ ಕಾರ್ಮಿಕ ಸಂಘಟನೆಗಳಿಂದ ಖಂಡನೆ

ಭಾರತದ ಏಕೈಕ ಚಿನ್ನದಗಣಿ ರಾಯಚೂರು ಜಿಲ್ಲೆಯ ಹಟ್ಟಿ ಚಿನ್ನದ ಗಣಿಯಲ್ಲಿ ಮಲಹೊರುವ ಪದ್ಧತಿ ಇಂದಿಗೂ ಜೀವಂತವಾಗಿದೆ. ಸುಮಾರು ಮೂರು ಸಾವಿರ ಅಡಿಗಳ ಆಳದ ಭೂಗರ್ಭದಿಂದ ಮಲವನ್ನು ಕಾರ್ಮಿಕರಿಂದ ಬಕೆಟ್‌ಗಳಲ್ಲಿ ಹೊತ್ತು ಹೊರ ಹಾಕುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ದೇಶದಲ್ಲಿ ಮಲಹೊರುವ ಪದ್ಧತಿಯನ್ನು ನಿಷೇಧಿಸಿದ ಮೊದಲ ರಾಜ್ಯ ಕರ್ನಾಟಕ. ಆ ನಂತರ ಭಾರತ ಸರಕಾರ 1993ರಲ್ಲಿ ದೇಶಾದ್ಯಂತ ಮಲಹೊರುವ ಪದ್ಧತಿಯನ್ನು ನಿಷೇಧಿಸಿತ್ತು. ಸವಣೂರಿನ ದಲಿತರು ಮಲ ಸುರಿದುಕೊಂಡು ಪ್ರತಿಭಟಿಸುವ ಮೂಲಕ ಮಲಹೊರುವ ಪದ್ಧತಿ ಜಾರಿಯಲ್ಲಿರುವುದು ಜಗಜ್ಜಾಹಿರಾಯಿತು. ಈ ಹಿನ್ನೆಲೆಯಲ್ಲಿ ದೇಶ- ವಿದೇಶಗಳ ಸಂಘ ಸಂಸ್ಥೆಗಳು ಈ ಅಮಾನವೀಯ ಪದ್ಧತಿ ಕೊನೆಗಾಣಿಸುವಂತೆ ಸರಕಾರದ ಮೇಲೆ ಹೆಚ್ಚಿನ ಒತ್ತಡ ಹಾಕಿದ್ದವು. ಇದರಿಂದ 2013ರಲ್ಲಿ ಮತ್ತೊಂದು ಕಾಯ್ದೆಯನ್ನು ಜಾರಿಗೆ ತರಲಾಯಿತು. ಇಷ್ಟಾದರೂ ರಾಜ್ಯಸರಕಾರದ ಅಂಗ ಸಂಸ್ಥೆಯಾಗಿರುವ ಹಟ್ಟಿ ಚಿನ್ನದ ಗಣಿ ಕಾರ್ಖಾನೆ ಮಲಹೊರುವ ಪದ್ಧತಿಯನ್ನು ಪೋಷಿಸಿಕೊಂಡು ಬರುತ್ತಿದೆ.

ವರ್ಲ್ಡ್‌ಗೋಲ್ಡ್ ಕೌನ್ಸಿಲ್‌ನ ಸದಸ್ಯತ್ವವನ್ನು ಪಡೆದಿರುವ ಹಟ್ಟಿ ಚಿನ್ನದ ಗಣಿಗಾರಿಕೆ ಈಗ ಮೂರು ಸಾವಿರ ಅಡಿ ಆಳ ತಲುಪಿದೆ. ಪ್ರತಿ 100 ಅಡಿಗಳಿಗೆ ಒಂದು ಹಂತವೆಂದು ವಿಂಗಡಿಸಿಕೊಳ್ಳಲಾಗಿದೆ. 1ನೇ ಹಂತದಿಂದ 25ನೇ ಹಂತದವರೆಗೆ ಗಣಿಯ ಒಳಗೆ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಅದಿರು ತೆಗೆದು ಖಾಲಿಯಾಗಿರುವ ಜಾಗಕ್ಕೆ(ಸ್ಟೊಬ್) ಮಲ ಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಅದರಿಂದ ಕೆಳಗೆ ಇರುವ 25 ರಿಂದ 30ನೇ ಹಂತದವರೆಗೆ ಅಂದರೆ 2,500 ಅಡಿಯಿಂದ 3,000 ಅಡಿಗಳ ಆಳದಲ್ಲಿ ಯಾವುದೇ ಶೌಚಾಲಯ ನಿರ್ಮಿಸಿಲ್ಲ. ಆದುದರಿಂದ ಗಣಿಕಾರ್ಮಿಕರ ಮಲವನ್ನು ನೈರ್ಮಲ್ಯ ವಿಭಾಗದ ನೌಕರರು ಬಕೆಟ್‌ನಲ್ಲಿ ತುಂಬಿಕೊಂಡು 7ನೇ ಹಂತದಲ್ಲಿರುವ ಸ್ಟೊಬ್‌ಗೆ ಮತ್ತು ಭೂಮಿಯ ಮೇಲ್ಭಾಗದಲ್ಲಿ ತಂದು ಹಾಕಿಸುತ್ತಿದ್ದಾರೆ. ಹಟ್ಟಿಯಲ್ಲಿ ಗಣಿಗಾರಿಕೆ ನಡೆಯುವ ಸ್ಥಳಗಳನ್ನು ವಿಲೇಜ್ ಶಾಫ್ಟ್, ಸೆಂಟ್ರಲ್ ಶಾಫ್ಟ್ ಮತ್ತು ಮಲ್ಲಪ್ಪ ಶಾಫ್ಟ್ ಎಂದು ಮೂರು ವಿಭಾಗಗಳಾಗಿ ರೂಪಿಸಲಾಗಿದೆ. ಈ ಮೂರು ಶಾಫ್ಟ್‌ಗಳ ಮುಖಾಂತರ ಗಣಿಯೊಳಗೆ ಪ್ರವೇಶಿಸಿ ವಾಪಸ್ ಬರಬಹುದಾಗಿದೆ. ಸೆಂಟರ್ ಶಾಫ್ಟ್ ವಿಭಾಗದಿಂದ ಭೂಗರ್ಭದಲ್ಲಿರುವ ಮಲವನ್ನು ಬಕೆಟ್ ಮೂಲಕ ಹೊರಗೆ ತಂದು ಹಾಕಲಾಗುತ್ತಿದೆ.

ಗಣಿಗಾರಿಕೆ ಅತ್ಯಂತ ಅಪಾಯವಾದ ವೃತ್ತಿ. ಗಣಿಯಲ್ಲಿ ಭೂ ಕುಸಿತ ಅನ್ನುವುದು ಸಹಜವಾದದ್ದು. ಈ ಕಾರಣಗಳಿಗೆ ಇದುವರೆಗೂ 350 ನೌಕರರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಇದೆ. ಗಣಿಯಲ್ಲಿ ಮಲ ವಿಸರ್ಜನೆ ಮಾಡುವುದರಿಂದ ಶುದ್ಧ ಗಾಳಿಯ ಕೊರತೆ ಸೃಷ್ಟಿಯಾಗುತ್ತದೆ. ಇಂತಹ ಕ್ಲಿಷ್ಟ ವಾತಾವರಣದಲ್ಲಿ ಭೂಮಿಯ ಮೂರು ಸಾವಿರ ಅಡಿಯ ಆಳದಲ್ಲಿರುವ ಮಲವನ್ನು ಮನುಷ್ಯನೋರ್ವ ಹೊತ್ತು ಮೇಲೆ ತರುವುದು ಅಮಾನವೀಯ ಕಾರ್ಯವೇ ಸರಿ.

ಪಾಳಿ ಆರಂಭವಾಗುವುದಕ್ಕೂ ಎರಡು ಗಂಟೆಗಳ ಮೊದಲೇ ನೈರ್ಮಲ್ಯ ವಿಭಾ ಗದ ಕಾರ್ಮಿಕರು ಗಣಿಯ ಒಳಗೆ ಹೋಗಬೇಕಾಗುತ್ತದೆ. ಅಲ್ಲಿ ಈ ಹಿಂದಿನ ಪಾಳಿಯ ಗಣಿಕಾರ್ಮಿರ ಮಲವನ್ನು ಬಕೆಟ್‌ನಲ್ಲಿ ಬಳಿದು ಹಾಕಿಕೊಂಡು ಹೊರಹಾಕ ಬೇಕಾಗುತ್ತದೆ. ಜೊತೆಗೆ ಉಳಿದ ಹಂತದಲ್ಲಿರುವ ಟಾಯ್ಲೆಟ್‌ಗಳನ್ನು ಸ್ವಚ್ಛಗೊಳಿಸಿ ವಾಪಸ್ ಬರಬೇಕಾಗುತ್ತದೆ. ಬಳಿಕ ಉಳಿದ ಕಾರ್ಮಿಕರು ಗಣಿಯ ಒಳಗೆ ಪ್ರವೇಶಿಸುತ್ತಾರೆ.

ಹಟ್ಟಿ ಚಿನ್ನದ ಗಣಿಯ ವ್ಯವಸ್ಥಾಪಕ ಮಂಡಳಿ ಮತ್ತು ಅಧಿಕಾರಿಗಳು ಮಲಹೊರುವ ಪದ್ಧತಿ ಇಲ್ಲವೆಂದು ಸುಳ್ಳು ಮಾಹಿತಿ ನೀಡಿದ್ದಾರೆ ಮತ್ತು ಮಲಹೊರುವ ಕಾರ್ಮಿಕರು ಸಹ ಇದುವರೆಗೂ ಈ ಕುರಿತು ಸ್ವತಃ ಕಾರ್ಮಿಕ ಸಂಘಟನೆಗೆ ಮಾಹಿತಿ ನೀಡದೆ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅಧಿಕಾರಿಗಳು ಇವರ ಮೇಲೆ ಒತ್ತಡ ಹಾಕಿರುವ ಸಾಧ್ಯತೆ ಬಗ್ಗೆ ಅನುಮಾನ ಮೂಡುತ್ತದೆ.

ಹಟ್ಟಿಯಲ್ಲಿ ಚಿನ್ನದ ಗಣಿಗಾರಿಕೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಅದೇರೀತಿ ಮಲಹೊರುವ ಪದ್ಧತಿಗೂ ಅಷ್ಟೇ ದೀರ್ಘವಾದ ಇತಿಹಾಸ ಇರುವುದನ್ನು ಕಾಣಬಹುದಾಗಿದೆ. ಹಟ್ಟಿಯಲ್ಲಿ ರಾಜ್ಯ ಸರಕಾರ ಗಣಿಗಾರಿಕೆಯನ್ನು ಆರಂಭಿಸಿದಾಗ ಕೆಜಿಎಫ್‌ಗಣಿಯಲ್ಲಿ ಕೆಲಸ ಮಾಡುತ್ತಿದ್ದ ನುರಿತ ಕಾರ್ಮಿಕರನ್ನು ಇಲ್ಲಿಗೆ ಕರೆ ತಂದು ಚಿನ್ನ ತೆಗೆಯುವ ಕೆಲಸಕ್ಕೆ ಮುಂದಾದರು. ಅದೇ ಸಂದರ್ಭದಲ್ಲೇ ಮಲಹೊರುವ ಮತ್ತು ನೈರ್ಮಲ್ಯೀಕರಣಕ್ಕೆ ಆಂಧ್ರದಿಂದ ಜನರನ್ನು ಕರೆತಂದು ಕೆಲಸ ಮಾಡಿಸತೊಡಗಿದರು. ಅಂದಿನಿಂದ ಇಂದಿನವರೆಗೂ ಜನರೇ ಮಲವನ್ನು ಹೊರುತ್ತಿದ್ದಾರೆ. 1993 ಮತ್ತು 2013ರಲ್ಲಿ ಕಾನೂನುಗಳು ಜಾರಿಯಾದ ನಂತರ ಹಟ್ಟಿಗಣಿಯ 25 ಹಂತಗಳವರೆಗೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಉಳಿದ ಹಂತಗಳಲ್ಲಿ ಶೌಚಾಲಯಗಳನ್ನು ನಿರ್ಮಿಸದೆ ಜನರಿಂದಲೇ ಮಲವನ್ನು ಬಾಚಿಸಲಾಗುತ್ತಿದೆ.

ಪ್ರತಿದಿನಕ್ಕೆ 10 ಕೆಜಿ ಚಿನ್ನ ಹೊರತೆಗೆದರೂ ಇನ್ನೂ 75 ವರ್ಷಗಳ ಕಾಲ ಗಣಿಗಾರಿಕೆ ಮಾಡಬಹುದಾದಷ್ಟು ಚಿನ್ನದ ನಿಕ್ಷೇಪ ಹಟ್ಟಿಯಲ್ಲಿದೆ ಎಂದು ಪರಿಶೋಧನಾ ವಿಭಾಗದಲ್ಲಿ ಡ್ರಾಪ್ಟ್ ಮೆನ್ ಆಗಿ ಹದಿನೈದು ವರ್ಷ ಕೆಲಸ ಮಾಡಿರುವ ಅನುಭವವುಳ್ಳ ಹಾಗೂ ನೌಕರ ಸಂಘದ ಗೌರವಾಧ್ಯಕ್ಷ ರೇವಣ್ಣ ಸಿದ್ದಪ್ಪರವರು ಹೇಳುತ್ತಾರೆ. ಹಟ್ಟಿ ಚಿನ್ನದ ಗಣಿಯ ವ್ಯವಸ್ಥಾಪಕ ಮಂಡಳಿ ಮಲಹೊರುವ ಪದ್ಧತಿಯನ್ನು ತಡೆಯುವ ನಿಟ್ಟಿನಲ್ಲಿ ಮುಂದಾಗದಿದ್ದಲ್ಲಿ ಈ ಅನಿಷ್ಟ ಪದ್ಧತಿಯು ಸಹ ಗಣಿಗಾರಿಕೆ ನಡೆಯುವವರೆಗೂ ಮುಂದುವರಿಯುತ್ತದೆ. ಗಣಿಗಾರಿಕೆ ಮತ್ತು ತಂತ್ರಜ್ಞಾನದ ಕುರಿತ ಪಠ್ಯಪುಸ್ತಕಗಳನ್ನು ಅವಳವಡಿಸಲಾಗುವುದು, ಮುಂದಿನ ದಿನಗಳಲ್ಲಿ ವಿಶ್ವವಿದ್ಯಾನಿಲಯವನ್ನೇ ಸ್ಥಾಪಿಸುವು ದಾಗಿ ಸಚಿವ ಮುರಗೇಶ್ ನಿರಾಣಿಯವರು ಹೇಳಿಕೆ ನೀಡಿದ್ದರು. ಆದರೆ ಮಲಹೊರುವ ವೃತ್ತಿ ಯನ್ನು ಜೀವಂತವಾಗಿಟ್ಟುಕೊಂಡು ಯಾವುದೇ ಕಾರ್ಯ ಮಾಡಿದರೂ ವ್ಯರ್ಥವೇ.

ಭೂಗರ್ಭದಿಂದ ಕಾರ್ಮಿಕರಿಂದ ಮಲ ಹೊರಿಸುವ ಕೆಲಸವನ್ನು ನಮಗೆ ತಿಳಿಯದಂತೆ ಮಾಡುತ್ತಿದ್ದಾರೆ. ಈ ಹಿಂದೆ ನಾವು ಕೇಳಿದಾಗ ಮಲಹೊರುವ ಪದ್ಧತಿ ನಮ್ಮಲ್ಲಿ ಇಲ್ಲ, ಎಲ್ಲಾ ಸೌಕರ್ಯಗಳನ್ನು ಮಾಡಿದ್ದೇವೆ ಎಂದು ಅಧಿಕಾರಿಗಳು ನಮಗೆ ಮಾಹಿತಿ ನೀಡಿದ್ದರು. ಗಣಿಯಲ್ಲಿ ಮಲಹೊರುವ ಪದ್ಧತಿ ನಡೆಯುತ್ತಿರುವುದು ಈಗ ತಾನೆ ನಮಗೆ ತಿಳಿದುಬಂದಿದೆ. ಇದನ್ನು ಈ ಕೆಲಸ ಮಾಡುತ್ತಿರುವ ಕಾರ್ಮಿಕರು ನಮ್ಮ ಗಮನಕ್ಕೆ ತಂದಿಲ್ಲ. ನಾವು ಸಂಘದ ಪರವಾಗಿ ವಿರೋಧ ಮಾಡುತ್ತೇವೆ, ವ್ಯವಸ್ಥಾಪಕ ಮಂಡಳಿಗೂ ಒತ್ತಾಯಿಸುತ್ತೇವೆ.

- ಎಂ.ಡಿ. ಅಮೀರ್ ಅಲಿ, ಪ್ರಧಾನ ಕಾರ್ಯದರ್ಶಿ, ಹಟ್ಟಿ ಚಿನ್ನದ ಗಣಿ ಕಾರ್ಮಿಕ ಸಂಘ

Similar News