ಸಣ್ಣ ಮಕ್ಕಳಿಗೆ ಆ್ಯಂಟಿಬಯಾಟಿಕ್‌ಗಳನ್ನು ನೀಡುವುದನ್ನು ತಪ್ಪಿಸಿ,ಅವು ಹಾನಿಗೆ ಕಾರಣವಾಗುತ್ತವೆ

Update: 2021-04-15 19:03 GMT

 ನೋವು ಮತ್ತು ತೊಂದರೆಯನ್ನುಂಟು ಮಾಡುವ ಬ್ಯಾಕ್ಟೀರಿಯಾ ಸೋಂಕುಗಳಿಗೆ ಚಿಕಿತ್ಸೆ ನೀಡಲು ಆ್ಯಂಟಿಬಯಾಟಿಕ್‌ಗಳನ್ನು ಬಳಸಲಾಗುತ್ತದೆ. ವಯಸ್ಕರು ಆ್ಯಂಟಿಬಯಾಟಿಕ್‌ಗಳನ್ನು ಸೇವಿಸುವುದು ಸಾಮಾನ್ಯವಾಗಿದ್ದರೂ ಕೆಲವೊಮ್ಮೆ ಪುಟ್ಟಮಕ್ಕಳಿಗೂ ಅನಾರೋಗ್ಯವಿದ್ದಾಗ ಇವುಗಳನ್ನು ನೀಡಲಾಗುತ್ತದೆ. ಆದರೆ ಪುಟ್ಟ ಮಕ್ಕಳಿಗೆ ಆಗಾಗ್ಗೆ ಆ್ಯಂಟಿಬಯಾಟಿಕ್‌ಗಳನ್ನು ನೀಡುವುದರಿಂದ ಹಲವಾರು ರೀತಿಗಳಲ್ಲಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತವೆ ಎನ್ನುವುದು ನಿಮಗೆ ಗೊತ್ತೇ? ಹೌದು,ಎಳವೆಯಲ್ಲಿ ಆ್ಯಂಟಿಬಯಾಟಿಕ್‌ಗಳ ಸೇವನೆಯು ನಂತರದ ವರ್ಷಗಳಲ್ಲಿ ಬದುಕಿನಲ್ಲಿ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.

ಅಮೆರಿಕದ ರುಜೆರ್ಸ್‌ನ ಸೆಂಟರ್ ಫಾರ್ ಅಡ್ವಾನ್ಸಡ್ ಬಯೊಟಿಕ್ನಾಲಜಿಯು ಇತ್ತೀಚಿಗೆ ಶಿಶುಗಳ ಮೇಲೆ ಆ್ಯಂಟಿಬಯಾಟಿಕ್‌ಗಳ ಪರಿಣಾಮಗಳನ್ನು ವಿಶ್ಲೇಷಿಸಲು ಅಧ್ಯಯನವೊಂದನ್ನು ನಡೆಸಿತ್ತು. ಶೈಶವಾವಸ್ಥೆಯಲ್ಲಿ ಆ್ಯಂಟಿಬಯಾಟಿಕ್‌ಗಳ ಸೇವನೆಯು ಕರುಳಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಎನ್ನುವುದನ್ನು ಈ ಅಧ್ಯಯನವು ಬೆಳಕಿಗೆ ತಂದಿದೆ. ರೋಗ ನಿರೋಧಕ ವ್ಯವಸ್ಥೆಯು ಅಲರ್ಜಿಕಾರಕಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುವ ಕರುಳಿನಲ್ಲಿಯ ಟಿ-ಕೋಶಗಳಿಗೆ ಈ ಆ್ಯಂಟಿಬಯಾಟಿಕ್‌ಗಳು ತುಂಬಲಾಗದ ಹಾನಿಯನ್ನುಂಟು ಮಾಡುತ್ತದೆ ಎಂದು ಅಧ್ಯಯನ ವರದಿಯು ಹೇಳಿದೆ.

‘ಎಂ ಬಯೊ’ಜರ್ನಲ್ ಈ ಅಧ್ಯಯನ ವರದಿಯನ್ನು ಪ್ರಕಟಿಸಿದೆ. ಆ್ಯಂಟಿಬಯಾಟಿಕ್‌ಗಳು ಕರುಳಿನಲ್ಲಿಯ ಸೂಕ್ಷ್ಮಜೀವಿಗಳನ್ನು ಬದಲಿಸುವ ಮೂಲಕ ಹೇಗೆ ಕರುಳಿನ ಆರೋಗ್ಯವನ್ನು ಹದಗೆಡಿಸುತ್ತವೆ ಎನ್ನುವುದನ್ನು ವರದಿಯು ವಿವರಿಸಿದೆ. ನಮ್ಮ ಶರೀರದಲ್ಲಿ ಕೋಟ್ಯಂತರ ಒಳ್ಳೆಯ ಮತ್ತು ಆರೋಗ್ಯಕರ ಸೂಕ್ಷ್ಮಜೀವಿಗಳು ವಾಸವಾಗಿರುತ್ತವೆ ಮತ್ತು ಇವು ನಮ್ಮ ಸರ್ವಾಂಗೀಣ ಆರೋಗ್ಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಲವರು ಅನಾರೋಗ್ಯಗಳನ್ನು,ವಿಶೇಷವಾಗಿ ಬೊಜ್ಜು,ಮಲಬದ್ಧತೆ,ಕರುಳಿನ ಕಾಯಿಲೆಗಳಂತಹ ಹೊಟ್ಟೆಯ ಸಮಸ್ಯೆಗಳನ್ನು ಈ ಸೂಕ್ಷ್ಮಜೀವಿಗಳು ದೂರವಿಡುತ್ತವೆ. ಆ್ಯಂಟಿಬಯಾಟಿಕ್‌ಗಳು ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕಿಗೆ ಚಿಕಿತ್ಸೆ ನೀಡಲು ನೆರವಾಗುತ್ತವೆ ನಿಜ,ಆದರೆ ಅವುಗಳ ಅತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಶಿಶುಗಳಲ್ಲಿ ಆ್ಯಂಟಿಬಯಾಟಿಕ್‌ಗಳ ಸೇವನೆಯು ಜೀವಿತವಿಡೀ ಕರುಳಿನ ಸೂಕ್ಷ್ಮಜೀವಿಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ಮಗುವಿನ ಮುಂದಿನ ವರ್ಷಗಳಲ್ಲಿ ವಿವಿಧ ಕರುಳಿನ ಕಾಯಿಲೆಗಳಿಗೆ ಗುರಿಯಾಗುವ ಅಪಾಯವನ್ನು ಒಡ್ಡುತ್ತದೆ. ಇದು ತುಂಬಲಾರದ ಹಾನಿಯನ್ನುಂಟು ಮಾಡುತ್ತದೆ ಮತ್ತು ಯಾವುದೇ ಚಿಕಿತ್ಸೆಯಿಂದಲೂ ಪೂರ್ವಸ್ಥಿತಿಯನ್ನು ಮರಳಿಸಲು ಸಾಧ್ಯವಿಲ್ಲ.

ಹಾಲೂಡಿಸುವ ತಾಯಂದಿರ ಮೂಲಕ ನವಜಾತ ಶಿಶುಗಳು ಆ್ಯಂಟಿ ಬಯಾಟಿಕ್‌ಗಳಿಗೆ ಒಡ್ಡಿಕೊಳ್ಳುತ್ತವೆ. ಅಂದರೆ ತಾಯಿಯು ಆ್ಯಂಟಿಬಯಾಟಿಕ್‌ಗಳನ್ನು ಸೇವಿಸಿದ್ದರೆ ಶಿಶುವೂ ಪ್ರತಿಕೂಲ ಪರಿಣಾಮಕ್ಕೊಳಗಾದ ಸೂಕ್ಷ್ಮಜೀವಿಗಳನ್ನು ಪಡೆಯುತ್ತವೆ ಎನ್ನುವುದನ್ನು ನಾವು ಅಧ್ಯಯನದಲ್ಲಿ ಕಂಡುಕೊಂಡಿದ್ದೇವೆ. ಇದರಿಂದ ಕರುಳಿನಲ್ಲಿ ಟಿ-ಜೀವಕೋಶಗಳನ್ನು ಉತ್ಪಾದಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆ ಮತ್ತು ದೀರ್ಘಕಾಲದಲ್ಲಿ ಹಾನಿಗೆ ಕಾರಣವಾಗುತ್ತದೆ ಎಂದು ಅಧ್ಯಯನ ತಂಡದ ಮಾರ್ಟಿನ್ ಬ್ಲೇಸರ್ ವರದಿಯಲ್ಲಿ ಹೇಳಿದ್ದಾರೆ.

* ಚಂಚಲ್ ಸೆಂಗಾರ್

ಕೃಪೆ: onlymyhealth.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News