ಡೆಬಿಟ್ ಕಾರ್ಡ್ ಪಡೆದು ವಂಚನೆ ಆರೋಪ: ಮೂವರ ಬಂಧನ

Update: 2021-04-16 14:15 GMT

ಬೆಂಗಳೂರು, ಎ.16: ಗ್ರಾಹಕರಿಗೆ ಹಣ ಪಡೆಯುವ ಮಾಹಿತಿ ನೆಪದಲ್ಲಿ ಡೆಬಿಟ್ ಕಾರ್ಡ್‍ಗಳನ್ನು ಪಡೆದು ವಂಚನೆ ಮಾಡುತ್ತಿದ್ದ ಆರೋಪದಡಿ ಮೂವರನ್ನು ದೊಡ್ಡಬಳ್ಳಾಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಶಿವಪುರದ ಮಂಜುನಾಥ್ (29), ಮಲ್ಲೇಶ್(42), ಮುರುಳಿ (29) ಬಂಧಿತ ಆರೋಪಿಗಳಾಗಿದ್ದು, ಇವರಿಂದ 66 ಸಾವಿರ ನಗದು, ಎಟಿಎಂ ಕಾರ್ಡ್‍ಗಳು ಮತ್ತು 9 ಗ್ರಾಂ ಚಿನ್ನದ ಉಂಗುರ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿಗಳ ಪೈಕಿ ಮಂಜುನಾಥ್ ತಮಿಳುನಾಡಿನ ಹೊಸೂರು ಮತ್ತು ಗೌರಿಬಿದನೂರು ಕಡೆಗಳಲ್ಲಿ ಕಳ್ಳತನ ಮಾಡಿ, ಜೈಲು ಶಿಕ್ಷೆ ಅನುಭವಿಸಿದ್ದ. ಗೌಡಹಳ್ಳಿಯ ಸೀನಪ್ಪ ಎಂಬಾತ ಎ. 1ರಂದು ದೊಡ್ಡಬಳ್ಳಾಪುರದ ಡಿಕ್ರಾಸ್ ಬಳಿಯ ಎಸ್‍ಬಿಐ ಎಟಿಎಂನಲ್ಲಿ ಹಣ ಡ್ರಾ ಮಾಡಲು ಬಂದಿದ್ದರು. ಈ ವೇಳೆ ಅವರ ಬಳಿಯಿದ್ದ ಡೆಬಿಟ್ ಕಾರ್ಡ್ ಕೆಳಗೆ ಬಿದ್ದಿದ್ದು, ಹಿಂದೆ ನಿಂತಿದ್ದ ವ್ಯಕ್ತಿ ಪಾಸ್‍ವರ್ಡ್ ತಿಳಿದುಕೊಂಡು ಕಾರ್ಡ್ ಎತ್ತಿಕೊಡುವ ನೆಪದಲ್ಲಿ ಅದಲು-ಬದಲು ಮಾಡಿದ್ದಾನೆ. ಬಳಿಕ ಆ ಕಾರ್ಡ್‍ನಿಂದ ಯಲಹಂಕ ಮತ್ತು ದೊಡ್ಡಬಳ್ಳಾಪುರದಲ್ಲಿ ಶಾಪಿಂಗ್ ಮಾಡಿ, 1 ಲಕ್ಷದ 48 ಸಾವಿರ ಹಣ ಖರ್ಚು ಮಾಡಿದ್ದಾನೆ. ಎ.3ರಂದು ಸೀನಪ್ಪ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ವಂಚನೆ ಬಗ್ಗೆ ತಿಳಿದಿದ್ದು, ಈ ಬಗ್ಗೆ ದೂರು ನೀಡಿದ್ದರು.

ಇದಕ್ಕೂ ಮುನ್ನ ಕಳೆದ ಮಾ.27ರಂದು ದೊಡ್ಡಬಳ್ಳಾಪುರದ ಕೆನರಾ ಬ್ಯಾಂಕ್ ಎಟಿಎಂಗೆ ಬಂದ ರಾಘವೇಂದ್ರ ಎಂಬುವವರು, ಅಲ್ಲೇ ಇದ್ದ ವ್ಯಕ್ತಿಯೋರ್ವನಿಗೆ 500 ರೂ. ಡ್ರಾ ಮಾಡಿಕೊಡುವಂತೆ ತಿಳಿಸಿದ್ದಾರೆ. 500 ರೂ. ಡ್ರಾ ಮಾಡಿಕೊಡುವ ವೇಳೆ ಆತ ಕಾರ್ಡ್ ಬದಲಿಸಿ, ನಕಲಿ ಕಾರ್ಡ್ ಕೊಟ್ಟಿದ್ದಾನೆ. ಬಳಿಕ ಆ ಕಾರ್ಡ್‍ನಿಂದ 27 ಸಾವಿರ ರೂ. ಎಗರಿಸಿದ್ದ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News