ಸಹೋದರಿಯರಿಬ್ಬರು ಅನುಮಾನಾಸ್ಪದ ಸಾವು

Update: 2021-04-16 16:11 GMT

ಬೆಂಗಳೂರು, ಎ.16: ಸಹೋದರಿಯರಿಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಾಗಡಿ ರಸ್ತೆ, ಗೋಪಾಲಪುರದಲ್ಲಿ ವಾಸವಾಗಿದ್ದ ಜಮುನಾ (60) ಮತ್ತು ರಾಣಿ (58) ಎಂಬ ಸಹೋದರಿಯರು ಮೃತರಾಗಿದ್ದಾರೆ ಎಂದು ತಿಳಿದುಬಂದಿದೆ.

ಬ್ಯಾಂಕ್‍ನಲ್ಲಿ ತಂದೆ ಹಣ ಠೇವಣಿ ಇಟ್ಟಿದ್ದು, ಅದರಿಂದ ಬರುವ ಬಡ್ಡಿ ಹಣದಲ್ಲಿ ಜೀವನ ನಡೆಸುತ್ತಿದ್ದರು. ಇವರ ಮತ್ತೊಬ್ಬ ಸಹೋದರಿ ಪ್ರೇಮಾ ಅವರಿಗೆ ವಿವಾಹವಾಗಿದ್ದು, ಚಾಮರಾಜಪೇಟೆಯಲ್ಲಿ ನೆಲೆಸಿದ್ದಾರೆ.

ಈ ಮೂವರೂ ಸಹೋದರಿಯರು ಆಗಾಗ್ಗೆ ಮೊಬೈಲ್‍ನಲ್ಲಿ ಮಾತನಾಡುತ್ತ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಪ್ರೇಮಾ ಅವರು ಸಹೋದರಿಯರಿಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ. ಹೊರಗೆ ಹೋಗಿರಬಹುದೆಂದು ಸುಮ್ಮನಾಗಿದ್ದರು. ತದನಂತರ ಮತ್ತೆ ಕರೆ ಮಾಡಿದರೂ ಮೊಬೈಲ್ ಸ್ವೀಕರಿಸದಿದ್ದಾಗ ಪ್ರೇಮಾ ಪತಿಯನ್ನು ಕರೆದುಕೊಂಡು ಗುರುವಾರ ಸಹೋದರಿ ಮನೆಗೆ ಬಂದು ನೋಡಿದಾಗ ಸಹೋದರಿಯರು ಮೃತಪಟ್ಟಿರುವುದು ಕಂಡುಬಂದಿದೆ.

ಶುಕ್ರವಾರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಹೋದರಿಯರ ಶವ ಪರೀಕ್ಷೆ ನಡೆಯುತ್ತಿದ್ದು, ವರದಿ ಬಂದ ನಂತರ ಇವರ ಸಾವು ಹೇಗಾಗಿದೆ ಎಂಬುದು ತಿಳಿದುಬರಲಿದೆ. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಕಂಡುಬಂದ ದೃಶ್ಯಗಳು ಹಾಗೂ ಇನ್ನಿತರ ಅಂಶಗಳಿಂದ ಮೇಲ್ನೋಟಕ್ಕೆ ವಿಷ ಬೆರೆಸಿ ಆಹಾರ ಸೇವಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News