ನಿಮ್ಮ ಫೋನ್ ಕಳೆದಿದೆಯೇ?ನಿಮ್ಮ ವಾಟ್ಸ್‌ಆ್ಯಪ್ ಖಾತೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ ಎನ್ನುವುದು ಇಲ್ಲಿದೆ

Update: 2021-04-16 17:27 GMT

 ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಕಳೆದುಕೊಳ್ಳುವುದು ಅಹಿತಕರ ಅನುಭವವನ್ನುಂಟು ಮಾಡುವುದು ಮಾತ್ರವಲ್ಲ,ಅದರಲ್ಲಿ ಸಂಗ್ರಹವಾಗಿರುವ ಮಹತ್ವದ ಮತ್ತು ವೈಯಕ್ತಿಕ ವಿವರಗಳ ಬಗ್ಗೆಯೂ ಚಿಂತೆಗೆ ಕಾರಣವಾಗುತ್ತದೆ. ಇಂದು ಬಹಳಷ್ಟು ಜನರು ವಾಟ್ಸ್‌ಆ್ಯಪ್‌ನ್ನು ಬಳಸುತ್ತಾರೆ. ಈ ಖಾತೆಯನ್ನು ಫೋನ್ ಮೂಲಕವೇ ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಹೀಗಾಗಿ ಫೋನ್ ಕಳೆದುಹೋದರೆ ಅಥವಾ ಕಳ್ಳತನವಾದರೆ ಏನು ಮಾಡಬೇಕು ಎನ್ನುವುದು ತೋಚದೇ ಗೊಂದಲವುಂಟಾಗುತ್ತದೆ. ನಿಮ್ಮ ಫೋನ್ ಹಾನಿಗೀಡಾದಾಗ,ಕಳೆದುಹೋದಾಗ ಅಥವಾ ಕಳ್ಳತನವಾದಾಗ ನೀವು ಅನುಸರಿಸಬಹುದಾದ ಕೆಲವು ಕ್ರಮಗಳು ಇಲ್ಲಿವೆ....

1) ನಿಮ್ಮ ಸಿಮ್ ಅನ್ನು ಲಾಕ್ ಮಾಡಿಸಿ

ನಿಮ್ಮ ಸಿಮ್ ಅನ್ನು ಲಾಕ್‌ಮಾಡಿಸುವುದು ಮೊದಲು ಮಾಡಬೇಕಾದ ಕೆಲಸವಾಗಿದೆ. ಇದನ್ನು ನಿಮ್ಮ ಮೊಬೈಲ್ ಕಂಪನಿಯ ಕಸ್ಟಮರ್ ಕೇರ್ ಸೆಂಟರ್‌ಗೆ ಕರೆ ಮಾಡುವ ಮೂಲಕ ಸುಲಭವಾಗಿ ಪೂರೈಸಬಹುದು. ಒಮ್ಮೆ ನಿಮ್ಮ ಸಿಮ್ ಲಾಕ್ ಆಯಿತೆಂದರೆ ಎಸ್‌ಎಂಎಸ್ ಮೂಲಕ ವೆರಿಫಿಕೇಷನ್ ಕೋಡ್‌ನ್ನು ರವಾನಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ನಿಮ್ಮ ವಾಟ್ಸ್‌ಆ್ಯಪ್ ಖಾತೆಯು ಕೆಲಸ ಮಾಡುವುದನ್ನು ತನ್ನಿಂತಾನೇ ನಿಲ್ಲಿಸುತ್ತದೆ.

2) ಅದೇ ನಂಬರ್‌ನ ಸಿಮ್ ಪಡೆಯಿರಿ ಅಥವಾ ವಾಟ್ಸ್‌ಆ್ಯಪ್‌ನ್ನು ನಿಷ್ಕ್ರಿಯಗೊಳಿಸಿ

ಒಮ್ಮೆ ನೀವು ಸಿಮ್ ಅನ್ನು ಲಾಕ್ ಮಾಡಿಸಿದಿರಿ ಎಂದಾದರೆ ನಿಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ. ಹೊಸ ಫೋನ್ ಪಡೆದುಕೊಳ್ಳುವ ಮೂಲಕ ನಿಮ್ಮ ವಾಟ್ಸ್‌ಆ್ಯಪ್ ಖಾತೆಯನ್ನು ಸಕ್ರಿಯಗೊಳಿಸಬಹುದು ಮತ್ತು ನಿಮ್ಮ ಅದೇ ನಂಬರ್‌ನ ಸಿಮ್‌ನ್ನು ಅದಕ್ಕೆ ಅಳವಡಿಸಬಹುದು ಇಲ್ಲವೇ ನಿಮ್ಮ ವಾಟ್ಸ್‌ಆ್ಯಪ್ ಖಾತೆಯನ್ನು ನಿಷ್ಕ್ರಿಯಗೊಳಿಸಬಹುದು.

3) ವಾಟ್ಸ್‌ಆ್ಯಪ್‌ನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಇದಕ್ಕಾಗಿ ನೀವು ಲಾಸ್ಟ್/ಸ್ಟೋಲನ್ ಎಂದು ಮೇಲ್ ಮಾಡುವುದು ಅಗತ್ಯವಾಗುತ್ತದೆ. ‘ದಯವಿಟ್ಟು ವಾಟ್ಸ್‌ಆ್ಯಪ್‌ನಲ್ಲಿ ನನ್ನ ಖಾತೆಯನ್ನು ಮತ್ತು ಇಮೇಲ್ ಅನ್ನು ನಿಷ್ಕ್ರಿಯಗೊಳಿಸಿ’ ಎಂದು ಬರೆದು,ನಿಮ್ಮ ಮೊಬೈಲ್ ಸಂಖ್ಯೆಯ ಆರಂಭದಲ್ಲಿ +91ನ್ನು ಸೇರಿಸಿ ಮೇಲ್‌ನಲ್ಲಿ ಉಲ್ಲೇಖಿಸಬೇಕಾಗುತ್ತದೆ. ಈ ಪ್ರಕ್ರಿಯೆಯನ್ನು ಮುಗಿಸಿದ ಬಳಿಕ ನಿಮ್ಮ ಸಂಪರ್ಕ ವ್ಯಕ್ತಿಗಳಿಗೆ ನಿಮ್ಮ ಪ್ರೊಫೈಲ್ ಫೊಟೋ ನೋಡಲು ಸಾಧ್ಯವಾಗದಿರಬಹುದು ಮತ್ತು ಅವರು ಕಳುಹಿಸುವ ಸಂದೇಶಗಳು 30 ದಿನಗಳ ಕಾಲ ಬಾಕಿಯಾಗಿರುತ್ತವೆ.

 ತನ್ಮಧ್ಯೆ ನಿಮ್ಮ ಖಾತೆಯನ್ನು ಯಶಸ್ವಿಯಾಗಿ ಪುನರಾರಂಭಿಸಲು ನಿಮಗೆ ಸಾಧ್ಯವಾದರೆ ಬಾಕಿಯಿರುವ ಎಲ್ಲ ಸಂದೇಶಗಳು ಹೊಸ ಫೋನ್‌ನಲ್ಲಿ ಕಾಣಿಸಿಕೊಳ್ಳುತ್ತವೆ ಮತ್ತು ನೀವು ಎಲ್ಲ ಗ್ರೂಪ್ ಚಾಟ್‌ಗಳಲ್ಲಿಯೂ ಉಳಿದುಕೊಳ್ಳುತ್ತೀರಿ. ನಿಮಗೆ ವಾಟ್ಸ್‌ಆ್ಯಪ್ ಖಾತೆಯನ್ನು ಸಕ್ರಿಯಗೊಳಿಸಲು ಸಾಧ್ಯವಾಗದಿದ್ದರೆ 30 ದಿನಗಳಲ್ಲಿ ನಿಮ್ಮ ಖಾತೆಯನ್ನು ಸಂಪೂರ್ಣವಾಗಿ ಡಿಲೀಟ್ ಮಾಡಲಾಗುತ್ತದೆ.

 ಸಿಮ್ ಕಾರ್ಡ್ ಬ್ಲಾಕ್ ಮಾಡಿದ ಮತ್ತು ಸೇವೆಗಳನ್ನು ಸ್ಥಗಿತಗೊಳಿಸಿದ ಬಳಿಕವೂ ಬಳಕೆದಾರನು ಕಂಪನಿಗೆ ಖಾತೆ ನಿಷ್ಕ್ರಿಯ ಮನವಿಯನ್ನು ಕಳುಹಿಸಿಲ್ಲದಿದ್ದರೆ ವಾಟ್ಸ್‌ಆ್ಯಪ್‌ನ್ನು ವೈ-ಫೈ ಮೂಲಕ ಬಳಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News