ವಾಟ್ಸಾಪ್‌ ನಲ್ಲಿ ಮಾಹಿತಿ ಸೋರಿಕೆಯ ಭೀತಿ: ಹೊಸ ಅಪ್ಡೇಟ್ ಬಳಸಲು ಸೈಬರ್‌ ಭದ್ರತಾ ಏಜೆನ್ಸಿ ಸೂಚನೆ

Update: 2021-04-17 15:09 GMT

ಹೊಸದಿಲ್ಲಿ, ಎ.17: ವಾಟ್ಸಾಪ್ನಲ್ಲಿ ಕೆಲವು ದೋಷ ಪತ್ತೆಯಾಗಿದ್ದು ಇದರಿಂದ ಬಳಕೆದಾರರ ಸೂಕ್ಷ್ಮ ಮಾಹಿತಿ ಸೋರಿಕೆಯಾಗುವ ಅಪಾಯವಿದೆ. ಆದ್ದರಿಂದ ಬಳಕೆದಾರರು ಪರಿಷ್ಕೃರಿಸಿದ ಆವೃತ್ತಿ ಬಳಸಬೇಕು ಎಂದು ಸೈಬರ್ ಭದ್ರತಾ ಏಜೆನ್ಸಿ ಎಚ್ಚರಿಸಿದೆ.

‘ವಾಟ್ಸಾಪ್ ಆ್ಯಂಡ್ ವಾಟ್ಸಾಪ್ ಬುಸಿನೆಸ್ ಫಾರ್ ಅಂಡ್ರಾಯ್ಡಾ ಪ್ರಯರ್ ಟು ವಿ2.21.4.18 ಮತ್ತು ವಾಟ್ಸಾಪ್ ಆ್ಯಂಡ್ ವಾಟ್ಸಾಪ್ ಬುಸಿನೆಸ್ ಫಾರ್ ಐಒಎಸ್ ಪ್ರಯರ್ ಟು ವಿ2.21.32’ ಹೊಂದಿರುವ ಸಾಫ್ಟ್‌ ವೇರ್‌ ನಲ್ಲಿ ದೋಷ ಪತ್ತೆಯಾಗಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ತಂಡ (ಸಿಇಆರ್ಟಿ) ಜಾರಿಗೊಳಿಸಿರುವ ಗಂಭೀರ ಶ್ರೇಣಿಯ ಸಲಹೆಯಲ್ಲಿ ಸೂಚಿಸಲಾಗಿದೆ. 

ಭಾರತದ ಸೈಬರ್ ಕ್ಷೇತ್ರದ ಮೇಲಿನ ದಾಳಿಯ ವಿರುದ್ಧ ಹೋರಾಡುವ ಮತ್ತು ಸೈಬರ್ ಕ್ಷೇತ್ರಕ್ಕೆ ರಕ್ಷಣೆ ನೀಡುವ ಉದ್ದೇಶದಿಂದ ಸಿಇಆರ್ಟಿ ರಚನೆಯಾಗಿದೆ. ವಾಟ್ಸಾಪ್ನಲ್ಲಿ ಹಲವು ದೋಷಗಳು ವರದಿಯಾಗಿದ್ದು ಇದರಿಂದ ಸೈಬರ್ ದಾಳಿಗಾರರು ದೂರದಲ್ಲೇ ಕುಳಿತು ಉದ್ದೇಶಿತ ವ್ಯವಸ್ಥೆಯ ಮಾಹಿತಿಯನ್ನು ಸ್ವೇಚ್ಛಾನುಸಾರ ಬಳಸಿಕೊಳ್ಳಲು ಸಾಧ್ಯವಾಗಲಿದೆ.

ಗೋಪ್ಯದ (ಕ್ಯಾಶ್) ವಿನ್ಯಾಸದಲ್ಲಿ ಆಗಿರುವ ಸಮಸ್ಯೆ ಮತ್ತು ಆಡಿಯೊ ವಿಸಂಕೇತೀರಣ(ಸಂಕೇತವನ್ನು ಭೇದಿಸುವ) ವ್ಯವಸ್ಥೆಯೊಳಗಿನ ಶ್ರೇಣಿ ಪರೀಕ್ಷೆಯ ದೋಷದಿಂದ ಈ ಸಮಸ್ಯೆ ಉದ್ಭವಿಸಿದೆ ಎಂದು ಸಿಇಆರ್ಟಿ ಹೇಳಿದೆ. ಈ ಸಮಸ್ಯೆಯನ್ನು ನಿವಾರಿಸಲು ಬಳಕೆದಾರರು ಗೂಗಲ್ ಪ್ಲೇಸ್ಟೋರ್ ಅಥವಾ ಐಒಎಸ್ ಆ್ಯಪ್ ಸ್ಟೋರ್ನಿಂದ ವಾಟ್ಸಾಪ್ನ ಇತ್ತೀಚಿನ ಆವೃತ್ತಿಯನ್ನು ಡೌನ್ಲೋಡ್ ಮಾಡಿ ಬಳಸುವಂತೆ ಸಲಹೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News