ನಿಮ್ಮ ಶರೀರದಲ್ಲಿ ನಿಯಮಿತ ನೋವು ಆಸ್ಟಿಯೊಪೀನಿಯಾದ ಲಕ್ಷಣವಾಗಿರಬಹುದು

Update: 2021-04-17 18:19 GMT

 ನಾವು ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಶರೀರದ ಜೀವಾಳವಾಗಿರುವ ಮೂಳೆಗಳ ಆರೋಗ್ಯವನ್ನು ಕಡೆಗಣಿಸುತ್ತೇವೆ. ನಮಗೆ ಸ್ನಾಯು ನೋವು ಉಂಟಾದಾಗಲೆಲ್ಲ ನಾವು ಔಷಧಿಗಳನ್ನು ಸೇವಿಸುತ್ತೇವೆ ಅಥವಾ ವಿಶ್ರಾಂತಿಯನ್ನು ಪಡೆಯುತ್ತೇವೆ. ಇದೇ ವೇಳೆ ನಮ್ಮ ಮೂಳೆಗಳ ಆರೋಗ್ಯವನ್ನು ನಾವು ಅಲಕ್ಷಿಸುತ್ತೇವೆ ಮತ್ತು ಏನಾದರೂ ಗಂಭೀರ ಸಮಸ್ಯೆ ಕಾಣಿಸಿಕೊಳ್ಳುವವರೆಗೆ ಹೆಚ್ಚಿನ ಮಹತ್ವವನ್ನು ನೀಡುವುದಿಲ್ಲ. ನೀವು ಆಸ್ಟಿಯೊಪೊರೊಸಿಸ್ ಅಥವಾ ಅಸ್ಥಿರಂಧ್ರತೆ ಎಂಬ ಮೂಳೆರೋಗದ ಬಗ್ಗೆ ಕೇಳಿರಬಹುದು,ಆದರೆ ಆಸ್ಟಿಯೊಪಿನಿಯಾ ಎಂದು ಕರೆಯಲಾಗುವ ಪ್ರಾಥಮಿಕ ಹಂತವೂ ಇದೆ. ಮೂಳೆಗಳಲ್ಲಿಯ ಖನಿಜಗಳ ಸಾಂದ್ರತೆ ಕಡಿಮೆಯಾಗಿರುವ ಸ್ಥಿತಿಯನ್ನು ಆಸ್ಟಿಯೊಪಿನಿಯಾ ಎನ್ನಲಾಗುತ್ತದೆ.

ಆಸ್ಟಿಯೊಪಿನಿಯಾ ಮತ್ತು ಆಸ್ಟಿಯೊಪೊರೊಸಿಸ್ ಇವೆರಡೂ ಮೂಳೆಗಳಿಗೆ ಸಂಬಂಧಿಸಿದ ಪರಸ್ಪರ ಹೋಲುವ ಆರೋಗ್ಯ ಸಮಸ್ಯೆಗಳಾಗಿವೆ. ಆದರೆ ಆಸ್ಟಿಯೊಪೊರೊಸಿಸ್ ಅನ್ನು ಕಾಯಿಲೆಯೆಂದು ಪರಿಗಣಿಸಲಾಗಿದೆಯೇ ಹೊರತು ಆಸ್ಟಿಯಪಿನಿಯಾವನ್ನಲ್ಲ. ಶರೀರದ ಮೂಳೆಗಳು ಅತಿಯಾಗಿ ಅವನತಿಗೀಡಾದಾಗ ಆಸ್ಟಿಯೊಪೊರೊಸಿಸ್ ಅಥವಾ ಅಸ್ಥಿರಂಧ್ರತೆ ಉಂಟಾಗುತ್ತದೆ. ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ, ಟೊಳ್ಳಾಗುತ್ತವೆ, ಪೆಡಸಾಗುತ್ತವೆ ಮತ್ತು ಸುಲಭವಾಗಿ ಮುರಿಯುತ್ತವೆ. ಇದರಿಂದ ಶರೀರವು ಬಗ್ಗುತ್ತದೆ, ನೋವು ಮತ್ತು ಮೂಳೆಗಳಿಗೆ ಗಂಭೀರ ಹಾನಿಯುಂಟಾಗುತ್ತವೆ.

 

ಆಸ್ಟಿಯೊಪಿನಿಯಾ ಕೂಡ ಮೂಳೆಗಳ ಸಾಂದ್ರತೆಗೆ ಸಂಬಂಧಿಸಿದೆ. ಬೋನ್ ಮಿನರಲ್ ಡೆನ್ಸಿಟಿ (ಬಿಎಂಡಿ) ಅಥವಾ ಮೂಳೆಗಳಲ್ಲಿಯ ಖನಿಜಗಳ ಸಾಂದ್ರತೆ ಸಾಮಾನ್ಯಕ್ಕಿಂತ ಕಡಿಮೆಯಾದಾಗ ಈ ಸಮಸ್ಯೆಯುಂಟಾಗುತ್ತದೆ. ವ್ಯಕ್ತಿಯ 35 ವರ್ಷ ಪ್ರಾಯದ ವೇಳೆ ಬಿಎಂಡಿ ಅತ್ಯಧಿಕ ಮಟ್ಟದಲ್ಲಿರುತ್ತದೆ ಮತ್ತು ಬಳಿಕ ಕ್ರಮೇಣ ಕಡಿಮೆಯಾಗುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ ಕಳಪೆ ದೇಹಭಂಗಿ, ಅತಿಯಾದ ವ್ಯಾಯಾಮ, ಆನುವಂಶಿಕ ಕಾರಣಗಳು ಅಥವಾ ಕಡಿಮೆ ಈಸ್ಟ್ರೋಜನ್ ಮಟ್ಟ ಇವುಗಳಿಂದಾಗಿ ಸಣ್ಣ ಪ್ರಾಯದಲ್ಲಿಯೇ ಬಿಎಂಡಿ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತದೆ. ಇದು ಅಸ್ಥಿರಂಧ್ರತೆಯುಂಟಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಆಸ್ಟಿಯೊಪಿನಿಯಾ 45-50 ವರ್ಷ ಪ್ರಾಯದ ಬಳಿಕ ಕಾಣಿಸಿಕೊಳ್ಳುತ್ತದೆ.

 

ಕೆಲವೊಮ್ಮೆ ಮೂಳೆಗಳಿಗೆ ಬೇಗನೆ ಸಾಮಾನ್ಯಕ್ಕಿಂತ ಹೆಚ್ಚು ವಯಸ್ಸಾಗುತ್ತದೆ ಮತ್ತು ಇದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಶರೀರದಲ್ಲಿ ಕಡಿಮೆ ಈಸ್ಟ್ರೋಜನ್ ಮಟ್ಟ,ಆನುವಂಶಿಕತೆ,ಸಾಕಷ್ಟು ವ್ಯಾಯಾಮ ಮಾಡದಿರುವುದು,ಅತಿಯಾಗಿ ಧೂಮ್ರಪಾನ ಅಥವಾ ಮದ್ಯಪಾನ ಗಳಿಂದ ಆಸ್ಟಿಯೊಪಿನಿಯಾ ಉಂಟಾಗುವ ಸಾಧ್ಯತೆಗಳಿವೆ.

 

ಸಾಮಾನ್ಯವಾಗಿ ಋತುಬಂಧ,ಅಂಡಾಶಯಗಳ ತೆಗೆಯುವಿಕೆ ಮತ್ತು ಕಡಿಮೆ ಈಸ್ಟ್ರೋಜನ್ ಮಟ್ಟಗಳಿಂದಾಗಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಆಸ್ಟಿಯೊಪಿನಿಯಾಕ್ಕೆ ಗುರಿಯಾಗುತ್ತಾರೆ. ಅಲ್ಲದೆ ಮಹಿಳೆಯರ ಮೂಳೆಗಳು ಪುರುಷರ ಮೂಳೆಗಳಿಗಿಂತ ಸ್ವಲ್ಪ ತೆಳ್ಳಗಾಗಿರುವುದೂ ಅವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಆಸ್ಟಿಯೊಪಿನಿಯಾ ಮೂಳೆ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆಯಾದರೂ ಚಿಕಿತ್ಸೆಯಿಂದ ಈ ಸಮಸ್ಯೆಯನ್ನು ನಿವಾರಿಸಲು ಹೆಚ್ಚಿನ ಅವಕಾಶಗಳಿವೆ.

 

ಆನುವಂಶಿಕತೆ ಅಥವಾ ಕುಟುಂಬದಲ್ಲಿ ಬಿಎಂಡಿ ಇತಿಹಾಸ, 50 ವರ್ಷಕ್ಕೆ ಮೇಲ್ಪಟ್ಟ ಪ್ರಾಯ, 45 ವರ್ಷಕ್ಕಿಂತ ಮೊದಲು ಋತುಬಂಧ, ವ್ಯಾಯಾಮದ ಕೊರತೆ, ಋತುಬಂಧಕ್ಕೆ ಮುನ್ನ ಅಂಡಾಶಯಗಳ ತೆಗೆಯುವಿಕೆ,ಕಳಪೆ ಆಹಾರ ಕ್ರಮ ಮತ್ತು ಪೌಷ್ಟಿಕಾಂಶಗಳ ಕೊರತೆ,ಧೂಮ್ರಪಾನ,ತಂಬಾಕು ಅಥವಾ ಮಾದಕದ್ರವ್ಯಗಳ ಸೇವನೆ,ಅತಿಯಾಗಿ ಕೆಫೀನ್ ಸೇವನೆ ಅಥವಾ ಮದ್ಯಪಾನ ಇತ್ಯಾದಿಗಳು ಆಸ್ಟಿಯೊಪಿನಿಯಾವನ್ನುಂಟು ಮಾಡುವ ಅಪಾಯದ ಅಂಶಗಳಾಗಿವೆ.

 

ಆಸ್ಟಿಯೊಪಿನಿಯಾ ರೋಗವಲ್ಲ, ಹೀಗಾಗಿ ವಿವಿಧ ಕ್ರಮಗಳ ಮೂಲಕ ಅದನ್ನು ಹೆಚ್ಚದಂತೆ ನಿಯಂತ್ರಿಸಬಹುದು. ಪಥ್ಯ, ವ್ಯಾಯಾಮ ಮತ್ತು ಮೂಳೆ ಸಾಂದ್ರತೆಯನ್ನು ಹೆಚ್ಚಿಸಲು ಪೂರಕಗಳ ಸೇವನೆ ಇವು ಇಂತಹ ಕ್ರಮಗಳಲ್ಲಿ ಸೇರಿವೆ.

 

ಬಿಎಂಡಿಯನ್ನು ಹೆಚ್ಚಿಸಲು ಪೂರಕಗಳನ್ನು ಸೇವಿಸುವಂತೆ ವೈದ್ಯರು ಸೂಚಿಸುತ್ತಾರೆ. ಇವು ಹೆಚ್ಚಾಗಿ ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ಪೂರಕಗಳಾಗಿರುತ್ತವೆ.

 

ಮೂಳೆಗಳು ಕ್ಯಾಲ್ಸಿಯಮ್‌ನಿಂದ ನಿರ್ಮಾಣಗೊಂಡಿರುತ್ತವೆ ಎನ್ನುವುದು ನಮಗೆ ಗೊತ್ತು. ಹೀಗಾಗಿ ಆಸ್ಟಿಯೊಪಿನಿಯಾದ ಚಿಕಿತ್ಸೆಗಾಗಿ ನಮ್ಮ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ಸಮೃದ್ಧವಾಗಿರಬೇಕು. ಡೇರಿ ಉತ್ಪನ್ನಗಳು, ಕಿತ್ತಳೆ ರಸ, ಬ್ರೆಡ್ ಮತ್ತು ದ್ವಿದಳ ಧಾನ್ಯಗಳು ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ಕೊರತೆಯನ್ನು ನೀಗಿಸಲು ನೆರವಾಗುತ್ತವೆ. ಒಣಗಿಸಿದ ಅವರೆ, ಬ್ರಾಕೊಲಿ, ಬಸಳೆ ಇತ್ಯಾದಿಗಳೂ ಇವುಗಳ ಕೊರತೆಯನ್ನು ಕಡಿಮೆ ಮಾಡುತ್ತವೆ.

 

ಆಸ್ಟಿಯೊಪಿನಿಯಾ ಸಮಸ್ಯೆಯಿರುವವರಿಗೆ ವಿಶೇಷವಾಗಿ ಮೂಳೆಗಳ ವ್ಯಾಯಾಮವನ್ನು ಮಾಡುವಂತೆ ವೈದ್ಯರು ಸೂಚಿಸಬಹುದು. ಬಿಎಂಡಿ ಮಟ್ಟದಲ್ಲಿ ಸಣ್ಣ ಏರಿಕೆಯು ಮೂಳೆ ಮುರಿತದ ಅಪಾಯವನ್ನು ಗಣನೀಯವಾಗಿ ತಗ್ಗಿಸುತ್ತದೆ. ವಾಕಿಂಗ್ ಅಥವಾ ಸೈಕಿಂಗ್ ಇಂತಹ ಕೆಲವು ಸಾಮಾನ್ಯ ವ್ಯಾಯಾಮಗಳಾಗಿವೆ. ಪೃಷ್ಠಗಳಿಗೆ ಬಲ ನೀಡುವ ಮತ್ತು ಸಮತೋಲನವನ್ನು ಹೆಚ್ಚಿಸುವ,ಕೆಳಬೆನ್ನು ಮತ್ತು ಕೆಳಕಾಲುಗಳನ್ನು ಬಲಗೊಳಿಸುವ ವಿಶೇಷ ವ್ಯಾಯಾಮಗಳನ್ನೂ ಮಾಡಬಹುದು.

 

ಬುಲಿಮಿಯಾ ಅಥವಾ ಹಸಿವಿನ ರೋಗ,ಕುಷಿಂಗ್ ಸಿಂಡ್ರೋಮ್ ಎಂದು ಕರೆಯಲಾಗುವ ಹಾರ್ಮೋನ್ ರೋಗ,ಅನೊರೆಕ್ಸಿಯಾ ಅಥವಾ ಹಸಿವಾಗದಿರುವುದು,ಹೈಪರ್‌ಪ್ಯಾರಾಥೈರಾಯ್ಡಿಸಂ,ಹೈಪರ್‌ಥೈರಾಯ್ಡಿಸಂ,ರುಮಟಾಯ್ಡಿ ಸಂಧಿವಾತ ಇವು ಕೂಡ ಆಸ್ಟಿಯೊಪಿನಿಯಾವನ್ನುಂಟು ಮಾಡುತ್ತವೆ.

* ಪುರು ಬನ್ಸಾಲ್

* ಪೂರಕ ಮಾಹಿತಿ ಡಾ.ನಾರಾಯಣ ಜಿಂದಾಲ್ ಏಮ್ಸ್ ದಿಲ್ಲಿ

* ಕೃಪೆ:Onlymyhealth

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News