ದೀರ್ಘಕಾಲಿಕ ನೋವುಗಳಿಗೆ ಸೇವಿಸುವ ಔಷಧಿಗಳಲ್ಲಿ ಓಪಿಯಾಡ್ ಇರುತ್ತದೆ ಎನ್ನುವುದು ನಿಮಗೆ ಗೊತ್ತೇ?

Update: 2021-04-17 18:29 GMT

 ಓಪಿಯಂ ಅಥವಾ ಅಫೀಮು ಮತ್ತು ಅದರ ಸಂಶ್ಲೇಷಿತ ತದ್ರೂಪಿಗಳಿಂದ ಪಡೆಯಲಾಗುವ ರಾಸಾಯನಿಕವನ್ನು ಓಪಿಯಾಡ್ ಎಂದು ಕರೆಯಲಾಗುತ್ತದೆ. ಮಾದಕ ದ್ರವ್ಯ ಶಬ್ದವನ್ನೂ ಇದಕ್ಕೆ ಬಳಸಲಾಗುತ್ತದೆ. ಹಾನಿಕಾರಕವಾಗಿರುವ ಓಪಿಯಾಡ್‌ಗಳು ಇಂದು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಲಭ್ಯವಿವೆ ಮತ್ತು ಸೇವನೆಗೆ ಸುಲಭವಾಗಿ ದೊರೆಯುತ್ತದೆ. ಆದರೆ ಇದು ಕಾನೂನುಬಾಹಿರ ಉತ್ಪನ್ನವಾಗಿರುವುದರಿಂದ ಮಾರುಕಟ್ಟೆಯಲ್ಲಿ ಬಹಿರಂಗವಾಗಿ ಮಾರಾಟವಾಗುವುದಿಲ್ಲ,ಆದರೆ ಇದನ್ನು ಮಾರಾಟ ಮಾಡುವ ಸಾವಿರಾರು ಪೆಡ್ಲರ್‌ಗಳಿದ್ದಾರೆ ಮತ್ತು ಅವರು ನಿರ್ದಿಷ್ಟವಾಗಿ ಯುವಜನರನ್ನೇ ತಮ್ಮ ಪ್ರಮುಖ ಗ್ರಾಹಕರನ್ನಾಗಿ ಹೊಂದಿದ್ದಾರೆ.

ಮಾರ್ಫಿನ್,ಆಕ್ಸಿಕೊಡೊನ್ ಮತ್ತು ಹೈಡ್ರೊಕ್ರೊಡೊನ್ ಇತ್ಯಾದಿಗಳು ಓಪಿಯಾಡ್‌ನ್ನು ಒಳಗೊಂಡಿರುತ್ತವೆ ಮತ್ತು ದೀರ್ಘ ಕಾಲದ ಚಿಕಿತ್ಸೆ ಅಗತ್ಯವಾಗಿರುವ ದೀರ್ಘಕಾಲಿಕ ನೋವಿಗೆ ಚಿಕಿತ್ಸೆಯಾಗಿ ಇದನ್ನು ಔಷಧಿಯಂತೆ ಸೇವಿಸಲಾಗುತ್ತದೆ. ಆದರೆ ಕೆಲವೊಮ್ಮೆ ನಿಯಮಿತ ಸೇವನೆಯಿಂದಾಗಿ ಜನರು ಇದರ ವ್ಯಸನಕ್ಕೆ ಗುರಿಯಾಗುತ್ತಾರೆ ಮತ್ತು ವೈದ್ಯರು ಶಿಫಾರಸು ಮಾಡದಿದ್ದರೂ ಸೇವಿಸುತ್ತಾರೆ. ಓಪಿಯಾಡ್‌ಗೆ ಸಂಬಂಧಿಸಿದಂತೆ ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುವ ಮಾದಕದ್ರವ್ಯವು ಅತ್ಯಂತ ಕೆಟ್ಟದ್ದಾಗಿದೆ,ಅದು ಆರೋಗ್ಯದ ಮೇಲೆ ನೇರವಾಗಿ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ.

ಹಲವು ರೀತಿಗಳಲ್ಲಿ ಓಪಿಯಾಡ್ ಅನ್ನು ಸೇವಿಸಲಾಗುತ್ತದೆ. ಓಪಿಯಾಡ್ ಗೀಳು ಆರೋಗ್ಯ ಸಮಸ್ಯೆಗಳಿಗೆ,ಸಾವಿಗೂ ಕಾರಣವಾಗುತ್ತದೆ. ಬಾಯಿಯ ಮೂಲಕ ಸೇವಿಸುವುದು,ಮೂಗಿನ ಮೂಲಕ ಒಳಗೆಳೆದುಕೊಳ್ಳುವುದು,ಚುಚ್ಚುಮದ್ದಿನ ಮೂಲಕ ಅಭಿಧಮನಿಯೊಳಗೆ ಸೇರಿಸುವುದು ಇತ್ಯಾದಿ ವಿಧಾನಗಳ ಮೂಲಕ ಓಪಿಯಾಡ್‌ಗಳನ್ನು ಬಳಸಲಾಗುತ್ತದೆ.

ಓಪಿಯಾಡ್ ದುರ್ಬಳಕೆಯು ಮಿದುಳಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ತೀವ್ರ ಸಂತಸ ಹಾಗೂ ನೆಮ್ಮದಿಯ ತಾತ್ಕಾಲಿಕ ಭಾವನೆಯನ್ನುಂಟು ಮಾಡುತ್ತದೆ. ಬಳಸಲಾದ ಓಪಿಯಾಡ್‌ನ ವಿಧವೂ ಅದರ ನಂತರದ ಪರಿಣಾಮಗಳನ್ನು ನಿರ್ಧರಿಸುತ್ತದೆ. ಕನಿಷ್ಠ ಮಟ್ಟದಲ್ಲಿ ಓಪಿಯಾಡ್‌ನ ಸೇವನೆಯೂ ಗೀಳನ್ನುಂಟು ಮಾಡಬಲ್ಲದು ಮತ್ತು ಓಪಿಯಾಡ್ ಸಿಂಡ್ರೋಮ್‌ಗೆ ಕಾರಣವಾಗುತ್ತದೆ. ವ್ಯಕ್ತಿಯು ತನ್ನ ವಿವೇಚನೆಯನ್ನು ಕಳೆದುಕೊಳ್ಳುತ್ತಾನೆ ಮತ್ತು ಓಪಿಯಾಡ್ ಸೇವನೆಯ ಅಪಾಯಗಳು ಗೊತ್ತಿದ್ದೂ ಅದನ್ನು ಅತಿಯಾಗಿ ಸೇವಿಸತೊಡಗುತ್ತಾನೆ.

ದೀರ್ಘಕಾಲಿಕ ಓಪಿಯಾಡ್ ಬಳಕೆಯು ಓಪಿಯಾಡ್ ಸಿಂಡ್ರೋಮ್‌ಗೆ ಕಾರಣವಾಗುತ್ತದೆ ಮತ್ತು ಹಲವಾರು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತದೆ. ಮಿದುಳಿನಲ್ಲಿ ಸಹಜ ನೋವು ನಿವಾರಕಗಳು ಮತ್ತು ಡೋಪ್‌ಮೈನ್ ಉತ್ಪಾದನೆಗೆ ಅದು ಅಡ್ಡಿಯನ್ನುಂಟು ಮಾಡುತ್ತದೆ. ವಾಕರಿಕೆ,ವಾಂತಿ,ದುರ್ಬಲ ರೋಗ ನಿರೋಧಕ ವ್ಯವಸ್ಥೆ,ನಿಧಾನ ಉಸಿರಾಟ,ಕೋಮಾ,ಓಪಿಯಾಡ್ ಚುಚ್ಚುಮದ್ದಿನಿಂದಾಗಿ ಎಚ್‌ಐವಿ ಸೋಂಕುಗಳ ಹೆಚ್ಚಿನ ಅಪಾಯ,ಉಸಿರುಗಟ್ಟುವಿಕೆ,ಭ್ರಾಂತಿ,ಹೆಪಟೈಟಿಸ್ ಅಥವಾ ಯಕೃತ್ತಿನ ಉರಿಯೂತ,ಕುಸಿದ ಅಥವಾ ಹೆಪ್ಪುಗಟ್ಟಿದ ರಕ್ತನಾಳಗಳು ಇವೆಲ್ಲ ಇಂತಹ ಆರೋಗ್ಯ ಸಮಸ್ಯೆಗಳಲ್ಲಿ ಸೇರಿವೆ.

 ಮಾದಕ ದ್ರವ್ಯ ಸಹಿಷ್ಣುತೆಯಲ್ಲಿ ವೃದ್ಧಿ,ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದರೂ ಓಪಿಯಾಡ್‌ನ್ನು ಸೇವಿಸುತ್ತಲೇ ಇರಬೇಕೆಂಬ ತುಡಿತ, ಸಂಬಂಧಗಳು ಮತ್ತು ವೃತ್ತಿಜೀವನ ಸೇರಿದಂತೆ ಜೀವನ ಮಟ್ಟದ ಮೇಲೆ ಪರಿಣಾಮ,ಮಾದಕ ದ್ರವ್ಯ ಸೇವನೆಯಲ್ಲಿ ಅತಿಯಾದ ಸಮಯ ಮತ್ತು ಹಣವನ್ನು ವ್ಯರ್ಥಗೊಳಿಸುವಿಕೆ,ಅತಿಯಾದ ನಿದ್ರೆ ಮತ್ತು ತನ್ಮೂಲಕ ದೇಹತೂಕದಲ್ಲಿ ಹೆಚ್ಚಳ,ಸಾಮಾಜಿಕ ಜೀವನ-ಕಾರ್ಯ ಮತ್ತು ಮನೋರಂಜನಾ ಚಟುವಟಿಕೆಗಳಿಂದ ದೂರವಿರುವುದು,ಮಾನಸಿಕ ಮತ್ತು ದೈಹಿಕ ಆರೋಗ್ಯ ಹದಗೆಡುವುದು ಇತ್ಯಾದಿಗಳು ಓಪಿಯಂ ಸಿಂಡ್ರೋಮ್‌ನ್ನು ಸೂಚಿಸುತ್ತವೆ.

 ಕಾನೂನುಬಾಹಿರ ಔಷಧಿಗಳನ್ನು ಬಳಸದಿರುವುದು ಓಪಿಯಂ ಸಿಂಡ್ರೋಮ್‌ನಿಂದ ಹೊರಬರಲು ಅತ್ಯುತ್ತಮ ಮಾರ್ಗವಾಗಿದೆಯಾದರೂ,ಓಪಿಯಾಡ್ ಗೀಳಿನಿಂದಾಗಿ ಅದರಿಂದ ದೂರವಾಗುವುದು ರೋಗಿಗಳಿಗೆ ಕಷ್ಟವಾಗುತ್ತದೆ ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಡಾ.ತನು ಸಿಂಗ್

ಓಪಿಯಾಡ್ ಸಿಂಡ್ರೋಮ್‌ನಿಂದ ನರಳುತ್ತಿರುವ ಹಲವರು ಸಾಮಾಜಿಕ ವಲಯದಿಂದಾಗಿ ಅಥವಾ ಆರ್ಥಿಕ ಸ್ಥಿತಿಯಿಂದಾಗಿ ಅಥವಾ ಕೆಲ ಮಾನಸಿಕ ಸಮಸ್ಯೆಗಳಿಂದಾಗಿ ಮಾದಕ ದ್ರವ್ಯ ದುರ್ಬಳಕೆಯನ್ನು ಆರಂಭಿಸುತ್ತಾರೆ,ಓಪಿಯಾಡ್ ಮತ್ತು ಇತರ ಮಾದಕ ದ್ರವ್ಯಗಳಲ್ಲಿ ನೆಮ್ಮದಿಯನ್ನು ಕಂಡುಕೊಳ್ಳುತ್ತಾರೆ ಮತ್ತು ಮಾದಕ ದ್ರವ್ಯ ಜಾಲದಲ್ಲಿ ಸಿಕ್ಕಿಹಾಕಿಕೊಳುತ್ತಾರೆ. ಕೌನ್ಸೆಲಿಂಗ್ ಮತ್ತು ಡಿಟಾಕ್ಸಿಫಿಕೇಷನ್ ಓಪಿಯಾಡ್ ಸಿಂಡ್ರೋಮ್ ನಿಯಂತ್ರಣಕ್ಕೆ ಅತ್ಯುತ್ತಮ ಮಾರ್ಗವಾಗಿದೆ ಮತ್ತು ಈ ಗೀಳಿನಿಂದ ರೋಗಿಗಳನ್ನು ಮುಕ್ತಗೊಳಿಸಲು ಕುಟುಂಬದ ಮತ್ತು ಸ್ನೇಹಿತರ ಬೆಂಬಲ ಅಗತ್ಯವಾಗುತ್ತದೆ ಎನ್ನುತ್ತಾರೆ ಡಾ.ಸಿಂಗ್.

ಕೃಪೆ:Onlymyhealth 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News