ಕರ್ನಾಟಕ ಯಕ್ಷಗಾನ ಅಕಾಡಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ನಿಧನ

Update: 2021-04-18 13:03 GMT

ಬೆಂಗಳೂರು, ಎ.18: ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ (73) ಕೊರೋನ ಸೋಂಕಿನಿಂದಾಗಿ ರವಿವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಅವರಿಗೆ ಎ.13ರಂದು ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಶನಿವಾರ ಮುಂಜಾನೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಯಕ್ಷಗಾನದ ಅರ್ಥಧಾರಿ ಹಾಗೂ ಪ್ರಸಂಗಕರ್ತರಾಗಿದ್ದ ಪ್ರೊ.ಎಂ.ಎ.ಹೆಗಡೆ, ಎರಡನೇ ಅವಧಿಗೆ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿದ್ದರು. ಕೋವಿಡ್-19 ಲಾಕ್‍ಡೌನ್ ಅವಧಿಯಲ್ಲಿ ಹಿರಿಯ ಹಾಗೂ ಪ್ರಸಿದ್ಧ ಯಕ್ಷಗಾನ ಹಿರಿಯ ಕಲಾವಿದರ ಜೊತೆ ವರ್ಚುವಲ್ ರೂಪದಲ್ಲಿ ಮಾತಿನ ಮಂಟಪ' ಮಾತುಕತೆ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಡಿ 100ಕ್ಕೂ ಅಧಿಕ ಕಲಾವಿದರ ಬದುಕಿನ ಚಿತ್ರಣವನ್ನು ಕಟ್ಟಿಕೊಟ್ಟಿದ್ದರು.

ಪ್ರೊ.ಎಂ.ಎ.ಹೆಗಡೆ ಪರಿಚಯ: ಜುಲೈ 3, 1948ರಂದು ಶಿರಸಿಯ ದಂಟಕಲ್ ನಲ್ಲಿ ಜನಿಸಿದ ಎಂ.ಎ.ಹೆಗಡೆ, ಸಿದ್ದಾಪುರ ತಾಲೂಕಿನ ಜೋಗಿನ್ಮನೆಯಲ್ಲಿ ಪ್ರಾಥಮಿಕ, ಹೆಗ್ಗರಣಿಯ ಸ್ವಾಮಿ ವಿವೇಕಾನಂದ ಹೈಸ್ಕೂಲಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ ಹಾಗೂ ಶಿರಸಿಯ ಎಂ.ಎಂ.ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ ಪದವಿ ಹಾಗೂ ಎಂ.ಎ ಶಿಕ್ಷಣವನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಮುಗಿಸಿದ್ದರು.

ಪ್ರೊ.ಎಂ.ಎ.ಹೆಗಡೆ ಸಂಸ್ಕೃತ, ಇಂಗ್ಲಿಷ್ ಹಾಗೂ ಕನ್ನಡ ಭಾಷೆಗಳಲ್ಲಿ ಸಮಾನ ಪ್ರಾವಿಣ್ಯ ಹೊಂದಿದ್ದ ನಾಡಿನ ಕೆಲವೇ ವಿದ್ವಾಂಸರಲ್ಲಿ ಒಬ್ಬರು. ಯಕ್ಷಗಾನದಲ್ಲಿ ವೇಷಧಾರಿ, ತಾಳಮದ್ದಲೆಯ ಅರ್ಥಧಾರಿ, ಸಂಶೋಧಕ, ವಿಮರ್ಶಕ, ಮತ್ತು ಪ್ರಸಂಗ ಕರ್ತರಾಗಿ ಕೆಲಸ ಮಾಡಿದ್ದಾರೆ.

2013ರ ಮಾರ್ಚ್ ತಿಂಗಳಲ್ಲಿ ಶಿರಸಿಯಲ್ಲಿ ನಡೆದ ಎಂಟನೇ ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. 16ನೇ ವಯಸ್ಸಿನಲ್ಲಿಯೇ ಕೆರೆಮನೆ ಮೇಳದಲ್ಲಿ ಶಿವರಾಮ ಹೆಗಡೆ ಅದರೊಂದಿಗೆ ಬಣ್ಣ ಹಚ್ಚಿದ್ದ ಇವರು, ತ್ರಿಶಂಕು ಚರಿತ್ರೆ, ಸೀತಾ ವಿಯೋಗ, ಪ್ರಚಂಡ ಚಾಣಕ್ಯ ಸೇರಿ ಇಪ್ಪತ್ತಕ್ಕೂ ಅಧಿಕ ಯಕ್ಷಗಾನ ಕೃತಿಗಳನ್ನು ರಚಿಸಿದ್ದಾರೆ.

ಮುಖ್ಯಮಂತ್ರಿ ಸಂತಾಪ: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ ಹೆಗಡೆ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 'ಯಕ್ಷಗಾನ ಕ್ಷೇತ್ರದಲ್ಲಿ ಖ್ಯಾತ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃಗಳಾಗಿದ್ದ ಪ್ರೊ.ಹೆಗಡೆ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿ ಯಕ್ಷಗಾನವನ್ನು ಜನಪ್ರಿಯಗೊಳಿಸಲು ಹಾಗೂ ಕಲಾವಿದರ ಹಿತರಕ್ಷಣೆಗೆ ಶ್ರಮಿಸಿದ್ದರೆಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

'ನಾಡು ಕಂಡ ಶ್ರೇಷ್ಟ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಎಂ.ಎ.ಹೆಗಡೆ ಕೊರೋನ ಸೋಂಕಿನಿಂದ ನಿಧನರಾಗಿದ್ದು ದುರಾದೃಷ್ಕರ. ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡುತ್ತಿದ್ದರು, ಅವರು ರೂಪಿಸಿದ್ದ ಮಾತಿನ ಮಂಟಪ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿತ್ತು, ಅವರ ಅಕಾಲಿಕ ನಿಧನದಿಂದ ನಿಜಕ್ಕೂ ಸಾಂಸ್ಕೃತಿಕ ಲೋಕ ಒಂದು ದಿಗ್ಗಜ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ' ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News