ಕೊರೋನ ನಿಯಂತ್ರಣಕ್ಕೆ ಎಸ್‍ಡಿಆರ್‍ಎಫ್‍ನಿಂದ ಬಿಬಿಎಂಪಿಗೆ 300 ಕೋಟಿ ರೂ. ಬಿಡುಗಡೆ

Update: 2021-04-18 17:02 GMT

ಬೆಂಗಳೂರು, ಎ.18: ರಾಜಧಾನಿಯಲ್ಲಿ ಕೊರೋನ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರಕಾರ ಎಸ್‍ಡಿಆರ್‍ಎಫ್ ಅನುದಾನದಡಿ ಬಿಬಿಎಂಪಿಗೆ 300 ಕೋಟಿ ರೂ.ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.

ಬಿಬಿಎಂಪಿಗೆ ಬಿಡುಗಡೆಯಾದ ಮೊತ್ತದಲ್ಲಿ ಪಾಲಿಕೆಯು ಕೊರೋನ ನಿಯಂತ್ರಣದಲ್ಲಿ ತೊಡಗಿರುವ ಹೊರಗುತ್ತಿಗೆ, ಗುತ್ತಿಗೆ ಸಿಬ್ಬಂದಿಗಳ ವೇತನ ಪಾವತಿಸಲು ಮೊದಲ ಆದ್ಯತೆ ನೀಡಬೇಕೆಂದು ರಾಜ್ಯ ಸರಕಾರ ಷರತ್ತು ವಿಧಿಸಿದೆ. ಕೊರೋನ ನಿಯಂತ್ರಣಕ್ಕಾಗಿ ಪಾಲಿಕೆ ಖರೀದಿಸಿರುವ ಪರಿಕರಗಳ ದರವು ಆರೋಗ್ಯ ಇಲಾಖೆ ಅಧೀನದ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯು ಅಂತಹದೇ ಪರಿಕರಗಳಿಗೆ ನೀಡಿರುವ ದರಕ್ಕಿಂತ ಹೆಚ್ಚಾಗಿರುವುದಿಲ್ಲ ಎಂಬುದನ್ನು ಖಚಿತಪಡಿಸಬೇಕು. ಖರೀದಿ ಪ್ರಕ್ರಿಯೆಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮದ ಅನುಸಾರ ನಡೆಸಬೇಕು ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.

ಖರೀದಿಸುವ ಎಲ್ಲ ವೈದ್ಯಕೀಯ ಪರಿಕರಗಳು ರಾಜ್ಯ ಡ್ರಗ್ಸ್, ಲಾಜಿಸ್ಟೀಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯ ಮೂಲಕವೆ ಖರೀದಿಸಬೇಕು. ಯಾವ ಉದ್ದೇಶಕ್ಕಾಗಿ ಹಣ ಬಿಡುಗಡೆ ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಮಾತ್ರ ಬಳಸಬೇಕು. ಮಾರ್ಗಸೂಚಿಯನ್ವಯ ವೆಚ್ಚ ಮಾಡಿದ್ದಕ್ಕೆ ಹಣ ಬಳಕೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸರಕಾರಕ್ಕೆ ಸಲ್ಲಿಸಬೇಕು. ಹಣ ಬಳಕೆಯಲ್ಲಿ ಲೋಪವಾದಲ್ಲಿ ಬಿಬಿಎಂಪಿ ಆಯುಕ್ತರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಸರಕಾರ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News