ರೆಮ್‍ಡಿಸಿವಿರ್ ಇಂಜೆಕ್ಷನ್‍ ಅಕ್ರಮ ಸಂಗ್ರಹ ಆರೋಪ: ಮೂವರ ಬಂಧನ

Update: 2021-04-18 17:39 GMT

ಬೆಂಗಳೂರು, ಎ.18: ಕೋವಿಡ್ ಚಿಕಿತ್ಸೆ ಸಂಬಂಧ ರೆಮ್‍ಡಿಸಿವಿರ್ ಇಂಜೆಕ್ಷನ್‍ಗಳನ್ನು ಅಕ್ರಮ ಸಂಗ್ರಹ ಹಾಗೂ ಮಾರಾಟ ಆರೋಪದಡಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ನಗರದ ನಿವಾಸಿಗಳಾದ ರಾಜೇಶ್, ಶಕೀಬ್ ಹಾಗೂ ಸುಹೈಲ್ ಬಂಧಿತ ಆರೋಪಿಗಳೆಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಅಕ್ರಮವಾಗಿ ರೆಮ್‍ಡಿಸಿವಿರ್ ಇಂಜೆಕ್ಷನ್ ಸಂಗ್ರಹಿಸಿದ್ದ ಆರೋಪಿಗಳು, ಕಾಳಸಂತೆಯಲ್ಲಿ ಪ್ರತಿ ಇಂಜೆಕ್ಷನ್‍ಗೆ 10,500 ರೂ.ಗಳಿಗೆ ಮಾರಾಟ ಮಾಡುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರಿಂದ 11 ಚುಚ್ಚುಮದ್ದಿನ ಬಾಟಲ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ಬಂಧಿತ ಆರೋಪಿ ರಾಜೇಶ್ ಇಲ್ಲಿನ ಗುರುಶ್ರೀ ಮೆಡಿಕಲ್ ಮಳಿಗೆ ನಡೆಸುತ್ತಿರುವುದು ಪತ್ತೆಯಾಗಿದೆ. ಆರೋಪಿಗಳಿಗೆ ಇಂಜೆಕ್ಷನ್ ಸಿಗುತ್ತಿದ್ದ ಮೂಲದ ಬಗ್ಗೆ ತನಿಖೆ ನಡೆಯುತ್ತಿದ್ದು, ಈ ಕುರಿತು ಸದ್ದುಗುಂಟೆಪಾಳ್ಯ ಹಾಗೂ ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News