ಮೂತ್ರಪಿಂಡ ಕಲ್ಲುಗಳು ಹೇಗೆ ರೂಪುಗೊಳ್ಳುತ್ತವೆ?

Update: 2021-04-18 18:19 GMT

ಮೂತ್ರಪಿಂಡಗಳು ನಮ್ಮ ಶರೀರವನ್ನು ವಿಷವಸ್ತುಗಳಿಂದ ಮುಕ್ತಗೊಳಿಸುತ್ತವೆ ಮತ್ತು ಶರೀರದಲ್ಲಿಯ ಅನಗತ್ಯ ನೀರನ್ನು ಮೂತ್ರವನ್ನಾಗಿ ಪರಿವರ್ತಿಸುತ್ತವೆ. ಮೂತ್ರಪಿಂಡಗಳು ನಮ್ಮ ಶರೀರದಲ್ಲಿ ಸೋಸುಕಗಳಂತೆ ಕಾರ್ಯ ನಿರ್ವಹಿಸುವುದರಿಂದ ಅನಗತ್ಯ ತ್ಯಾಜ್ಯಗಳು ಕೆಲವೊಮ್ಮೆ ಮೂತ್ರಪಿಂಡಗಳಲ್ಲಿ ಸಂಗ್ರಹಗೊಳ್ಳುತ್ತವೆ ಮತ್ತು ಅವುಗಳಿಗೆ ಗಂಭೀರ ಹಾನಿಯನ್ನುಂಟು ಮಾಡುತ್ತವೆ. ಮೂತ್ರಪಿಂಡಗಳೊಂದಿಗೆ ಗುರುತಿಸಿಕೊಂಡಿರುವ ಹಲವಾರು ಆರೋಗ್ಯ ಸಮಸ್ಯೆಗಳಿವೆ. ಇವುಗಳಲ್ಲಿ ಸಾಮಾನ್ಯ,ಆದರೆ ಅಷ್ಟೇ ಗಂಭಿರವಾದ ಸಮಸ್ಯೆ ಎಂದರೆ ಮೂತ್ರಪಿಂಡ ಕಲ್ಲುಗಳದ್ದು. ಶರೀರದಲ್ಲಿ ಕರಗಿರುವ ಖನಿಜಗಳು ಸಂಗ್ರಹಗೊಂಡು ಮೂತ್ರಪಿಂಡ ಕಲ್ಲುಗಳು ಸೃಷ್ಟಿಯಾಗುತ್ತವೆ.

ಲಕ್ನೋದ ಸಹಾರಾ ಆಸ್ಪತ್ರೆಯ ಮೂತ್ರಪಿಂಡ ಶಾಸ್ತ್ರಜ್ಞ ಡಾ.ರಾಕೇಶ್ ತ್ಯಾಗಿ ಅವರು ಹೇಳುವಂತೆ ಮೂತ್ರಪಿಂಡ ಕಲ್ಲುಗಳು ಕಾಲಕ್ರಮೇಣ ಮೂತ್ರಪಿಂಡಗಳಲ್ಲಿ ಸಂಗ್ರಹಗೊಂಡ ಹೆಚ್ಚುವರಿ ತ್ಯಾಜ್ಯ ಕಣಗಳ ಸಣ್ಣ ಚೆಂಡಿನಂತಹ ರಚನೆಗಳಾಗಿವೆ. ಇದು ಜನರು ಭಾವಿಸಿರುವುದಕ್ಕಿಂತ ಹೆಚ್ಚು ಗಂಭೀರ ರೋಗವಾಗಿದೆ. ಅದು ವಿವಿಧ ಸೋಂಕುಗಳು,ಮೂತ್ರಾಂಗ ಸಮಸ್ಯೆಗಳು ಮತ್ತು ಮೂತ್ರಪಿಂಡ ಹಾನಿಗೆ ಕಾರಣವಾಗುತ್ತದೆ. ಕಡಿಮೆ ದ್ರವ ಸೇವನೆ, ಆಹಾರದಲ್ಲಿಯ ಪ್ರತಿಕೂಲ ಅಂಶಗಳು ಮತ್ತು ಇತರ ಕಾರಣಗಳಿಂದ ಮೂತ್ರಪಿಂಡ ಕಲ್ಲುಗಳು ನಿಧಾನವಾಗಿ ಬೆಳೆಯತೊಡಗುತ್ತವೆ.

ಮೂತ್ರಪಿಂಡ ಕಲ್ಲುಗಳು ತೀವ್ರ ಯಾತನೆಯನ್ನುಂಟು ಮಾಡುವ ಜೊತೆಗೆ ಮೂತ್ರವಿಸರ್ಜನೆ ವೇಳೆ ರಕ್ತವು ಹೋಗುತ್ತದೆ. ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸದಿದ್ದರೆ ಮೂತ್ರಪಿಂಡಗಳಿಗೆ ಶಾಶ್ವತ ಹಾನಿಯುಂಟಾಗುತ್ತದೆ. ಹೀಗಾಗಿ ಯಾವಾಗಲೂ ಯಥೇಚ್ಛ ನೀರನ್ನು ಕುಡಿಯುತ್ತಿರಬೇಕು ಮತ್ತು ಹೆಚ್ಚು ಆರೋಗ್ಯಕರ ದ್ರವಗಳನ್ನು ಸೇವಿಸಬೇಕು. ಇದರಿಂದ ಮೂತ್ರಪಿಂಡ ಕಲ್ಲುಗಳುಂಟಾಗುವ ಅಪಾಯವು ಕಡಿಮೆಯಾಗುತ್ತದೆ. ಮೂತ್ರನಾಳದಲ್ಲಿ ಎಲ್ಲಿಯೂ ಮೂತ್ರಪಿಂಡ ಕಲ್ಲುಗಳು ರೂಪುಗೊಳ್ಳಬಹುದು. ಮೂತ್ರಪಿಂಡಗಳು, ಮೂತ್ರಾಶಯ, ಮೂತ್ರಕೋಶ ಇವುಗಳಲ್ಲಿ ಕಲ್ಲುಗಳು ಸೃಷ್ಟಿಯಾಗುತ್ತವೆ.

ಮೂತ್ರವಿಸರ್ಜನೆ ಮಾಡುವಾಗ ರಕ್ತ ಕಾಣಿಸಿಕೊಳ್ಳುವುದು,ವಾಂತಿ ಮತ್ತು ವಾಕರಿಕೆ,ಮೂತ್ರನಾಳ ಸೋಂಕು,ಜ್ವರ,ಕಿಬ್ಬೊಟ್ಟೆ ಮತ್ತು ಹೊಟ್ಟೆಯ ಪಾರ್ಶ್ವಗಳಲ್ಲಿ ನೋವು,ಪದೇ ಪದೇ ಮೂತ್ರವಿಸರ್ಜನೆ ಇವು ಮೂತ್ರಪಿಂಡ ಕಲ್ಲುಗಳ ಲಕ್ಷಣಗಳಾಗಿವೆ.

ಮೂತ್ರಪಿಂಡ ಕಲ್ಲುಗಳು ಮೂತ್ರದ್ವಾರದಲ್ಲಿ ತಡೆಯನ್ನುಂಟು ಮಾಡುವ ಸಾಧ್ಯತೆಯೂ ಇದ್ದು, ಇದು ಮೂತ್ರಪಿಂಡ ಸೋಂಕಿಗೆ ಕಾರಣವಾಗುತ್ತದೆ. ಜ್ವರ ಮತ್ತು ಚಳಿ, ನಿಶ್ಶಕ್ತಿ ಮತ್ತು ಬಳಲಿಕೆ,ಅತಿಸಾರ,ಮೂತ್ರಕ್ಕೆ ಕೆಟ್ಟ ವಾಸನೆ ಇವು ಮೂತ್ರಪಿಂಡ ಸೋಂಕಿನ ಲಕ್ಷಣಗಳಾಗಿವೆ.

ಮೂತ್ರಪಿಂಡ ಕಲ್ಲುಗಳು ಶರೀರದಲ್ಲಿಯ ಸ್ಫಟಿಕದಂತಹ ರಚನೆಗಳಾಗಿವೆ,ಆದರೆ ಎಲ್ಲ ಮೂತ್ರಪಿಂಡ ಕಲ್ಲುಗಳು ಒಂದೇ ವಿಧವಾಗಿ ರೂಪುಗೊಂಡಿರುವುದಿಲ್ಲ. ಇವುಗಳನ್ನು ಕ್ಯಾಲ್ಸಿಯಂ,ಯೂರಿಕ್ ಆ್ಯಸಿಡ್,ಸ್ಟ್ರುವೈಟ್ ಮತ್ತು ಸಿಸ್ಟಿನ್ ಹೀಗೆ ನಾಲ್ಕು ವಿಧಗಳಲ್ಲಿ ವರ್ಗೀಕರಿಸಲಾಗಿದೆ.

ನಿರ್ಜಲೀಕರಣ ಅಥವಾ ದಿನಕ್ಕೆ ಒಂದು ಲೀಟರ್‌ಗೂ ಕಡಿಮೆ ನೀರಿನ ಸೇವನೆ,ಬೊಜ್ಜು,ಹೈಪರ್‌ಪ್ಯಾರಾಥೈರಾಯ್ಡ್ ,ಗ್ಯಾಸ್ಟ್ರಿಕ್ ಬೈಪಾಸ್ ಸರ್ಜರಿ,ಅತಿಯಾಗಿ ಪ್ರೋಟಿನ್‌ಗಳು,ಉಪ್ಪು ಅಥವಾ ಗ್ಲುಕೋಸ್ ಒಳಗೊಂಡಿರುವ ಆಹಾರಗಳ ಸೇವನೆ,ಕರುಳಿನ ಉರಿಯೂತ ರೋಗ,ಸೆಳವು ನಿರೋಧಕ ಔಷಧಿಗಳು ಮತ್ತು ಕ್ಯಾಲ್ಸಿಯಂ ಒಳಗೊಂಡ ಅಂಟಾಸಿಡ್‌ಗಳಂತಹ ಕೆಲವು ಔಷಧಿಗಳು ಮೂತ್ರಪಿಂಡ ಕಲ್ಲುಗಳು ರೂಪುಗೊಳ್ಳಲು ಕಾರಣವಾಗುತ್ತವೆ.

 ಮೂತ್ರಪಿಂಡ ಕಲ್ಲುಗಳು ಶರೀರದಲ್ಲಿ ಇತರ ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಉಂಟು ಮಾಡುತ್ತವೆ ಮೂತ್ರಪಿಂಡ ಕಲ್ಲುಗಳು ಮೂತ್ರಕೋಶವನ್ನು ಮೂತ್ರಪಿಂಡಗಳೊಂದಿಗೆ ಸಂಪರ್ಕಿಸುವ ಕೊಳವೆಯಲ್ಲಿ ತಡೆಯನ್ನುಂಟು ಮಾಡಿದರೆ ಮೂತ್ರವು ಶರೀರದಿಂದ ಹೊರಗೆ ಹೋಗಲು ಸಾಧ್ಯವಾಗುವುದಿಲ್ಲ ಇದು ಮೂತ್ರನಾಳ ಅಥವಾ ಮೂತ್ರಪಿಂಡ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಮೂತ್ರಪಿಂಡ ಕಲ್ಲುಗಳು ಆಗಾಗ್ಗೆ ರೂಪುಗೊಳ್ಳುತ್ತ ಮೂತ್ರದ ಹರಿವನ್ನು ತಡೆಯುತ್ತಿದ್ದರೆ ಅದು ದೀರ್ಘಕಾಲಿಕ ಮೂತ್ರಪಿಂಡ ರೋಗವನ್ನುಂಟು ಮಾಡಬಹುದು.

ಮೂತ್ರಪಿಂಡ ಕಲ್ಲುಗಳಿಗೆ ಚಿಕಿತ್ಸೆಯು ಅವುಗಳ ಗಾತ್ರ ಮತ್ತು ವಿಧವನ್ನು ಅವಲಂಬಿಸಿರುತ್ತದೆ.

* ಪುರು ಬನ್ಸಾಲ್

* ಪೂರಕ ಮಾಹಿತಿ ಡಾ.ರಾಕೇಶ್ ತ್ಯಾಗಿ

ಕೃಪೆ : Onlymyhealth

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News