140 ಜನರಿಗಷ್ಟೇ ಅಚ್ಛೇದಿನ್ !

Update: 2021-04-19 09:08 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶದಲ್ಲಿ ಕಳೆದ ವರ್ಷ ಲಾಕ್‌ಡೌನ್ ಹೇರಿದ ದಿನಗಳಿಂದ ಈ ದೇಶದ ಮಧ್ಯಮವರ್ಗ ಏಕಾಏಕಿ ಬಡತ ರೇಖೆಗೆ ಇಳಿದು ಬಿಟ್ಟಿತು. ಬಡವರ್ಗ ಆತ್ಮಹತ್ಯೆಯ ಹಾದಿಯನ್ನು ಹಿಡಿಯಿತು. ದೇಶದ ಆರ್ಥಿಕ ಸ್ಥಿತಿ ಸಂಪೂರ್ಣ ನೆಲಕಚ್ಚಿತು. ನಿರುದ್ಯೋಗ ತಾರಕಕ್ಕೇರಿತು. ಅಪೌಷ್ಟಿಕತೆ ಭೀಕರ ವೇಗದಲ್ಲಿ ಏರಿಕೆಯಾಯಿತು. ಇಷ್ಟೆಲ್ಲ ಆದರೂ, ಕಳೆದ 12 ತಿಂಗಳುಗಳಲ್ಲಿ ಭಾರತದ ಶತಕೋಟ್ಯಧಿಪತಿಗಳ(ಬಿಲಿಯಾಧೀಶರು) ಸಂಖ್ಯೆಯು 102ರಿಂದ 140ಕ್ಕೇರಿದೆ. ಫೋರ್ಬ್ಸ್ ಪತ್ರಿಕೆಯ ವರದಿಯ ಪ್ರಕಾರ ಭಾರತದ ಶತಕೋಟ್ಯಧಿಪತಿಗಳ ಸಂಯೋಜಿತ ಸಂಪತ್ತಿನ ಮೊತ್ತವು ಕಳೆದ ಒಂದು ವರ್ಷದಲ್ಲಿ ಸುಮಾರು ಎರಡು ಪಟ್ಟು ಅಂದರೆ 596 ಶತಕೋಟಿ ಡಾಲರ್‌ಗೆ ಏರಿಕೆಯಾಗಿತ್ತು. ಭಾರತದ ಈ 140 ಮಂದಿಯ ಸಂಪತ್ತು ನಮ್ಮ ದೇಶದ ಒಟ್ಟು ಆಂತರಿಕ ಉತ್ಪಾದನೆ(ಜಿಡಿಪಿ)ಯ ಮೊತ್ತವಾದ 2.62 ಟ್ರಿಲಿಯನ್ ಡಾಲರ್‌ನ ಐದನೇ ಒಂದರಷ್ಟಿದೆಯೆಂಬುದು ಆಘಾತಕಾರಿ ವಿಷಯವಾಗಿದೆ. ಅಂದರೆ 130 ಕೋಟಿ ಜನಸಂಖ್ಯೆಯ ಭಾರತದ ಸಂಪತ್ತು ಬರೇ 140 ಮಂದಿಯ ಕೈಗೆ ವರ್ಗಾವಣೆಯಾಗುತ್ತಿರುವುದನ್ನು ಈ ಅಂಕಿ ಅಂಶಗಳು ಹೇಳುತ್ತವೆ. ದೇಶಾದ್ಯಂತ ಕೊರೋನ ತಾಂಡವವಾಡುತ್ತಿರುವಾಗ ಈ 140 ಶತಕೋಟ್ಯಧಿಪತಿಗಳ ಸಂಯೋಜಿತ ಸಂಪತ್ತಿನಲ್ಲಿ ಶೇ.90.4 ಹೆಚ್ಚಳವಾಗಿದೆ. ಇದೇ ವೇಳೆ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ವು 7.7 ಶೇ.ಷ್ಟು ಸಂಕುಚಿತಗೊಂಡಿದೆ. ಕೊರೋನ ಎರಡನೇ ಅಲೆಯು ದೇಶದಲ್ಲಿ ಅಪ್ಪಳಿಸುತ್ತಿರುವಂತೆಯೇ ವಲಸಿಗ ಕಾರ್ಮಿಕರು ಮತ್ತೊಮ್ಮೆ ನಗರಗಳನ್ನು ತೊರೆದು ಹಳ್ಳಿಗಳಿಗೆ ಮರಳುತ್ತಿರುವುದನ್ನು ಕಾಣುತ್ತಿದ್ದೇವೆ. ಉದ್ಯೋಗಗಳ ನಷ್ಟವು ಜಿಡಿಪಿಗೆ ಯಾವುದೇ ರೀತಿಯಲ್ಲಿಯೂ ಹಿತಕರವಲ್ಲ. ಆದರೆ ನಮ್ಮ ಶತಕೋಟ್ಯಧಿಪತಿಗಳ ಸಂಪತ್ತು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಕಳೆದ ವರ್ಷ ಭಾರತದ ಮೂವರು ಅತಿ ಶ್ರೀಮಂತರು ಒಟ್ಟಾಗಿ ತಮ್ಮ ಸಂಪತ್ತಿಗೆ 100 ಶತಕೋಟಿ ಡಾಲರ್‌ಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸುವಲ್ಲಿ ಸಫಲರಾಗಿದ್ದಾರೆ. ಈ ಮೂವರ ಒಟ್ಟು ಸಂಪತ್ತಿನ ವೌಲ್ಯ 153.5 ಶತಕೋಟಿ ಡಾಲರ್‌ಗಳಾಗಿದ್ದು, ಇದು 140 ಶತಕೋಟ್ಯಧಿಪತಿಗಳ ಸಂಯೋಜಿತ ಸಂಪತ್ತಿನ ಶೇ.25ರಷ್ಟಾಗಿದೆ. ಭಾರತದ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿರುವ ಅಂಬಾನಿ ( 84.5 ಶತಕೋಟಿ ಡಾಲರ್) ಹಾಗೂ ಅದಾನಿ (50.5 ಶತಕೋಟಿ ಡಾಲರ್) ಅವರ ಸಂಪತ್ತು ಪಂಜಾಬ್ (85.5 ಶತಕೋಟಿ ಡಾಲರ್) ಅಥವಾ ಹರ್ಯಾಣ (101 ಶತಕೋಟಿ ಡಾಲರ್) ರಾಜ್ಯಗಳ ಜಿಡಿಪಿಯ ಸನಿಹದಲ್ಲಿದೆ.ಕೊರೋನ ಸಾಂಕ್ರಾಮಿಕದ ಹಾವಳಿಯ ವರ್ಷದಲ್ಲಿ ಅಂಬಾನಿ ತನ್ನ ಸಂಪತ್ತಿಗೆ 47.7 ಶತಕೋಟಿ ಡಾಲರ್ ಸೇರ್ಪಡೆಗೊಳಿಸಿದ್ದಾರೆ. ಪ್ರತಿ ಸೆಕೆಂಡ್‌ನಲ್ಲಿ ಅವರ ಸಂಪತ್ತಿಗೆ 1.13 ಲಕ್ಷ ಸೇರ್ಪಡೆಗೊಳ್ಳುತ್ತಲೇ ಇರುತ್ತದೆ. ಮುಕೇಶ್ ಅಂಬಾನಿ ಒಬ್ಬರ ಸಂಪತ್ತಿನ ಮೊತ್ತವು ಹೆಚ್ಚುಕಮ್ಮಿ ಪಂಜಾಬ್ ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಸರಿಸಮಾನವಾಗಿದೆ. ನೂತನ ಕೃಷಿ ಕಾಯ್ದೆ ಸಂಪೂರ್ಣವಾಗಿ ಅನುಷ್ಠಾನಕ್ಕೆ ಬರುವ ಮೊದಲು ಈ ಸ್ಥಿತಿಯಿದೆ. ಒಂದು ವೇಳೆ ಕೃಷಿ ಕಾಯ್ದೆ ಜಾರಿಗೊಂಡಲ್ಲಿ ಈ ಕುಬೇರರ ಸಂಪತ್ತಿನಲ್ಲಿ ಇನ್ನಷ್ಟು ಏರಿಕೆಯಾಗಲಿದೆ. ಇದೇ ವೇಳೆ ಪಂಜಾಬ್‌ನ ರೈತರ ಮಾಸಿಕ ಸರಾಸರಿ ಆದಾಯವು 3,450 ರೂ. ಆಗಿದೆಯೆಂಬ ವಿಪರ್ಯಾಸವನ್ನು ಗಮನಿಸಬೇಕಾಗಿದೆ.

ಭಾರತದ ಟಾಪ್ 10 ಶ್ರೀಮಂತ ಭಾರತೀಯರ ಪೈಕಿ ಇಬ್ಬರು ಆರೋಗ್ಯಕ್ಷೇತ್ರದಿಂದ ಸಂಪತ್ತನ್ನು ದೋಚುತ್ತಿದ್ದಾರೆ. ಕೊರೋನ ಸೋಂಕಿನ ಬಳಿಕ ವಿಶ್ವದಾದ್ಯಂತ ಆರೋಗ್ಯಪಾಲನಾ ವಲಯವು ಅತ್ಯಂತ ಲಾಭದಾಯಕವಾಗಿ ಪರಿಣಮಿಸಿದೆ ಎಂದು ಫೋರ್ಬ್ಸ್ ವರದಿ ಹೇಳಿದೆ. ಆರೋಗ್ಯಪಾಲನಾ ಉದ್ಯಮದ 24 ಶತಕೋಟ್ಯಧಿಪತಿ ಭಾರತೀಯರ ಪೈಕಿ ಅಗ್ರ 10 ಸ್ಥಾನದಲ್ಲಿರುವವರು ಕೊರೋನ ಸಾಂಕ್ರಾಮಿಕದ ವರ್ಷದಲ್ಲಿ ತಮ್ಮ 24.9 ಶತಕೋಟಿ ಡಾಲರ್ ( ಪ್ರತಿ ದಿನ ಸರಾಸರಿ 5 ಸಾವಿರ ಕೋಟಿ ರೂಪಾಯಿಯಂತೆ) ಸೇರ್ಪಡೆಗೊಳಿಸಿದ್ದು, ಅವರ ಸಂಯೋಜಿತ ಸಂಪತ್ತು 58.3 ಶತಕೋಟಿ ಡಾಲರ್‌ಗಳಾಗಿವೆ. ಅಮೆರಿಕ ಹಾಗೂ ಚೀನಾದ ಬಳಿಕ ಭಾರತವು ಅತ್ಯಧಿಕ ಸಂಖ್ಯೆಯ ಶ್ರೀಮಂತರಿರುವ ಮೂರನೇ ದೇಶವಾಗಿದೆ. ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಭಾರತವು ಈಗ ಜರ್ಮನಿ, ರಶ್ಯವನ್ನು ಕೂಡಾ ಹಿಂದಿಕ್ಕಿದೆ. ವಿಪರ್ಯಾಸವೆಂದರೆ ಅತಿ ಹೆಚ್ಚು ಬಡತನವುಳ್ಳ, ಅತಿ ಹೆಚ್ಚು ಅಪೌಷ್ಟಿಕತೆಯುಳ್ಳ ದೇಶವೂ ಭಾರತವೇ ಆಗಿದೆ. ಭಾರತದಲ್ಲಿ ಸಂಪತ್ತಿನ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ. ಒಂದು ವೇಳೆ ಸಂಪತ್ತಿನ ಮೇಲೆ ಶೇ.10ರಷ್ಟು ತೆರಿಗೆಯನ್ನು ವಿಧಿಸಿದರೂ ನಮಗೆ 4.45 ಲಕ್ಷ ಕೋಟಿ ಡಾಲರ್ ಆದಾಯವನ್ನು ಗಳಿಸಬಹುದು. ಈ ಆದಾಯದಿಂದ ಸರಕಾರವು ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂನರೇಗಾ)ಯನ್ನು ಆರು ವರ್ಷಗಳ ಕಾಲ ನಡೆಸಲು ಸಾಧ್ಯವಿದೆ. ಕೇಂದ್ರ ಸರಕಾರವು ಹಾಲಿ ಹಣಕಾಸು ವರ್ಷದಲ್ಲಿ ಕೂಲಿ ಕಾರ್ಮಿಕರ ಎಂನರೇಗಾ ಯೋಜನೆಗೆ ನಿಗದಿಪಡಿಸಿರುವ ಅನುದಾನದ ಮೊತ್ತ ಕೇವಲ 73 ಸಾವಿರ ಕೋಟಿ ರೂ.ಗಳಾಗಿವೆ. ಲಾಕ್‌ಡೌನ್ ಸಂಕಷ್ಟ ಕಾಲದಲ್ಲಿ ಈ ಹಣ ಏನೇನೂ ಅಲ್ಲ. ಜೊತೆಗೆ, ಅನುದಾನವನ್ನು ಸೂಕ್ತರೀತಿಯಲ್ಲಿ ಬಿಡುಗಡೆ ಮಾಡುವಲ್ಲೂ ಸರಕಾರ ವಿಫಲವಾಗಿದೆ. ಸರಕಾರ ಕಾರ್ಮಿಕರ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ಆದರೆ ಈ 140 ಬಿಲಿಯಾಧೀಶರಿಗೆ ಆಡಳಿತಾರೂಢ ಸ್ನೇಹಿತರಿಂದ ನೆರವಿನ ಕೊಡುಗೆಯೇ ಹರಿದುಹೋಗುತ್ತಿದೆ. ಕಳೆದೆರಡು ದಶಕಗಳಲ್ಲಿ ಇನ್ನಿಲ್ಲದಷ್ಟು ದೊಡ್ಡ ಪ್ರಮಾಣದಲ್ಲಿ ಕಾರ್ಪೊರೇಟ್ ಉದ್ಯಮಸಂಸ್ಥೆಗಳಿಗೆ ತೆರಿಗೆ ಕಡಿತವನ್ನು ಕೇಂದ್ರ ಸರಕಾರ ಘೋಷಿಸಿತು.

ಆದರೆ ದೇಶದ ಬೆನ್ನೆಲುಬಾದ ರೈತರಿಗೆ ಕನಿಷ್ಠ ಬೆಂಬಲ ದರದಲ್ಲಿ ಒಂದು ಪೈಸೆಯ ರಿಯಾಯಿತಿಯೂ ದೊರೆಯಲಿಲ್ಲ. ಕಾರ್ಮಿಕರನ್ನು ದಿನಕ್ಕೆ 12 ತಾಸುಗಳವರೆಗೂ ದುಡಿಸಲು ಅವಕಾಶ ನೀಡುವ ಸುಗ್ರೀವಾಜ್ಞೆಗಳನ್ನು ಅಂಗೀಕರಿಸಲಾಯಿತು (ಕೆಲವು ರಾಜ್ಯಗಳಲ್ಲಿ ಹೆಚ್ಚುವರಿ ನಾಲ್ಕು ತಾಸುಗಳಿಗೆ ಯಾವುದೇ ಓವರ್‌ಟೈಮ್ ಭತ್ತೆಯನ್ನು ನೀಡಬೇಕಾಗಿಲ್ಲ) ಮತ್ತು ಅತ್ಯಧಿಕ ಪ್ರಮಾಣದ ಪ್ರಾಕೃತಿಕ ಸಂಪನ್ಮೂಲಗಳನ್ನು ಹಾಗೂ ಸಾರ್ವಜನಿಕ ಸಂಪತ್ತನ್ನು ಅತಿ ಶ್ರೀಮಂತ ಕಾರ್ಪೊರೇಟ್ ಮಂದಿಯ ಕೈಗೆ ಒಪ್ಪಿಸಲಾಯಿತು. ಕೊರೋನ ಸಾಂಕ್ರಾಮಿಕ ಹಾವಳಿಯ ವರ್ಷದಲ್ಲಿ ಆಹಾರ ಧಾನ್ಯಗಳ ದಾಸ್ತಾನು ಒಂದು ಹಂತದಲ್ಲಿ 104 ದಶಲಕ್ಷ ಟನ್‌ಗಳಿಗೆ ತಲುಪಿತು. ಆದರೆ ಜನಸಾಮಾನ್ಯರಿಗೆ ಮಾತ್ರ 5 ಕೆ.ಜಿ. ಅಕ್ಕಿ ಅಥವಾ ಗೋಧಿ ಮತ್ತು 1 ಕೆ.ಜಿ.ದ್ವಿದಳ ದಾನ್ಯವನ್ನು ಆರು ತಿಂಗಳ ಅವಧಿಗೆ ಉಚಿತವಾಗಿ ನೀಡಲಾಯಿತು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಯಲ್ಲಿ ಬಂದವರಿಗೆ ಮಾತ್ರ ಈ ಸವಲತ್ತು ಲಭಿಸಿತು. ಆದರೆ ದೇಶಾದ್ಯಂತ ಗಣನೀಯ ಪ್ರಮಾಣದ ಪ್ರಜೆಗಳು ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಗೆ ಇನ್ನೂ ಬಂದಿಲ್ಲ. ಹೀಗಾಗಿ ಈ ವರ್ಷ ಕೋಟ್ಯಂತರ ಭಾರತೀಯರು ಕಳೆದ ದಶಕಗಳಿಗಿಂತ ಅತ್ಯಧಿಕವಾಗಿ ಹಸಿವಿನಿಂದ ಬಾಧಿತರಾಗಿದ್ದಾರೆ.

ಆನ್‌ಲೈನ್ ಶಿಕ್ಷಣ ಕೂಡಾ ಕೊರೋನ ಯುಗದಲ್ಲಿ ಭರ್ಜರಿ ಹಣ ಸಂಪಾದಿಸುತ್ತ್ತಿದೆ. ಮುಖ್ಯವಾಗಿ ಸರಕಾರಿ ಶಾಲೆಗಳ ಬಡವಿದ್ಯಾರ್ಥಿಗಳು ಯಾವುದೇ ರೀತಿಯ ಶಿಕ್ಷಣದಿಂದ ವಂಚಿತವಾಗಿದ್ದರೆ, ಆನ್‌ಲೈನ್ ಶಿಕ್ಷಣ ಸಂಸ್ಥೆ ಬೈಜುವಿನ ಮಾಲಕ ರವೀಂದ್ರನ್ ಅವರ ಸಂಪತ್ತಿನ ಮೊತ್ತವು 2.5 ಶತಕೋಟಿ ಡಾಲರ್‌ಗೆ ತಲುಪಿದ್ದು, ಶೇ.39ರಷ್ಟು ಏರಿಕೆಯಾಗಿದೆ.ಇದೇ ವೇಳೆ ವಿಶ್ವಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಭಾರತವು 189 ರಾಷ್ಟ್ರಗಳ ಪಟ್ಟಿಯಲ್ಲಿ 131ನೇ ಸ್ಥಾನದಲ್ಲಿದೆ. ಎಲ್‌ಸಲ್ವಡೋರ್, ತಝಕಿಸ್ತಾನ, ಕೊಬೋ ವರ್ಡೆ, ಗ್ವಾಟೆಮಾಲಾ, ನಿಕಾರಗುವಾ, ಭೂತಾನ್ ಹಾಗೂ ನಮೀಬಿಯಾ ಈ ಎಲ್ಲಾ ದೇಶಗಳು ನಮಗಿಂತ ಮುಂದಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಮೋದಿಯ ಅಚ್ಛೇದಿನ್ ದೊರಕಿದ್ದು ಭಾರತದ 140 ಜನರಿಗಷ್ಟೇ. ಮುಂದಿನ ದಿನಗಳಲ್ಲಿ, ದೇಶದ ಬಡವರ ಸ್ಥಿತಿ ಇನ್ನಷ್ಟು ಭೀಕರವಾಗಲಿದೆ ಎನ್ನುವ ಸತ್ಯವನ್ನು ಫೋರ್ಬ್ಸ್ ವರದಿಯಿಂದ ನಾವು ಮನಗಾಣಬಹುದು. ರಾಮಮಂದಿರ, ಕಾಶ್ಮೀರ, ಲವ್‌ಜಿಹಾದ್, ಗೋಹತ್ಯೆ ಮೊದಲಾದ ಪದಗಳ ಮೂಲಕ ಜನಸಾಮಾನ್ಯರು ತಮ್ಮ ‘ಅಚ್ಛೇದಿನ’ವನ್ನು ಸವಿಯಬೇಕಾದ ದುರ್ಗತಿಗೆ ತಲುಪಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News